ADVERTISEMENT

ಕೋಲಾರ | ಆರ್‌ಎಸ್‌ಎಸ್‌ ಟೀಕಿಸಿದ್ದಕ್ಕೆ ಬಿಜೆಪಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 5:59 IST
Last Updated 17 ಫೆಬ್ರುವರಿ 2026, 5:59 IST
ಕೋಲಾರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಬಿಜೆಪಿ ಎಸ್‌.ಮುನಿಸ್ವಾಮಿ ಮಾತನಾಡಿದರು
ಕೋಲಾರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಬಿಜೆಪಿ ಎಸ್‌.ಮುನಿಸ್ವಾಮಿ ಮಾತನಾಡಿದರು   

ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವಿನ ಕುರ್ಚಿ ಜಗಳದ ಲಾಭ ಪಡೆದುಕೊಳ್ಳಲು ಸಚಿವ ಪ್ರಿಯಾಂಕ್ ಖರ್ಗೆ ಹಗಲು ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಮೆಚ್ಚುಗೆ ಪಡೆದು ಮುಖ್ಯಮಂತ್ರಿ ಆಗಲು ಪ್ರಿಯಾಂಕ್‌ ಅವರು ಪದೇಪದೇ ಆರ್‌ಎಸ್ಎಸ್‌ ಹಾಗೂ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿದ್ದಾರೆ. ಈ ಮೂಲಕ ಹೀರೊ ಆಗಲು ಹೊರಟಿದ್ದಾರೆ’ ಎಂದರು.

ಆರ್‌ಎಸ್ಎಸ್ ನೋಂದಣಿ ಆಗಿಲ್ಲ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿರುವುದು ಅಕ್ಷಮ್ಯ ಅಪರಾಧ. ದೆವ್ವ, ಭೂತ ಎಂದೆಲ್ಲಾ ಟೀಕಿಸಿರುವುದು ಖಂಡನೀಯ. ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿ ಇರುವಂಥ ಈ ನೆಲದ ಹಿಂದೂ ಪರ ಸಂಘಟನೆಯನ್ನು ಹೀಯಾಳಿಸಿರುವುದಕ್ಕೆ ಅವರು ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 55 ವರ್ಷಗಳಿಂದ ಒಂದಲ್ಲ ಒಂದು ರೀತಿ ಅಧಿಕಾರ ಅನುಭವಿಸಿದ್ದಾರೆ. ಆದರೆ, ಕಲಬುರಗಿಗೆ ಕೊಟ್ಟ ಕೊಡುಗೆ ಶೂನ್ಯ. ಸಿದ್ಧಾರ್ಥ ಟ್ರಸ್ಟ್ ಕಟ್ಟಿಕೊಂಡು ಬಡಾವಣೆಗಳಲ್ಲಿ ನಿವೇಶನಗಳನ್ನು ಕಬ್ಜ ಮಾಡಲಾಗಿದೆ. ವಿಮಾನ ನಿಲ್ದಾಣ ಸಮೀಪ ಜಮೀನು ಒತ್ತುವರಿ ಮಾಡಲಾಗಿದೆ. ಇದು ಬಿಟ್ಟರೆ ಮಾಡಿರುವ ಅಭಿವೃದ್ಧಿ ಏನು ಇಲ್ಲ, ಕರ್ನಾಟಕವನ್ನು ಕಲ್ಯಾಣ ಮಾಡಬೇಕು ಎಂಬ ಅಲೋಚನೆಯೂ ಇಲ್ಲ ಎಂದು ಆರೋಪಿಸಿದರು.

ಪ್ರಿಯಾಂಕ್ ಖರ್ಗೆ ಹಿಂಬಾಲಕರು ಕಲಬುರಗಿಯಲ್ಲಿ ಡ್ರಗ್ಸ್‌ ಮಾಫಿಯಾ, ಐಪಿಎಲ್ ಬೆಟ್ಟಿಂಗ್, ಮರಳು ಮಾಫಿಯಾದಲ್ಲಿ ತೊಡಗಿದ್ದಾರೆ. ಒಟ್ಟಾರೆಯಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಉಪಾಧ್ಯಕ್ಷ ವಿಜಯಕುಮಾರ್, ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಉಪಾಧ್ಯಕ್ಷ ಗೋವಿಂದರಾಜು, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ರಾಜಕುಮಾರ್ ಇದ್ದರು.

ಕುರ್ಚಿ ಜಗಳದಲ್ಲಿ ಲಾಭಕ್ಕೆ ಪ್ರಿಯಾಂಕ್‌ ಪ್ರಯತ್ನ: ಆರೋಪ ದೆವ್ವ, ಭೂತ ಎಂದೆಲ್ಲಾ ಟೀಕಿಸಿರುವುದು ಖಂಡನೀಯ: ಮುನಿಸ್ವಾಮಿ ಪ್ರಿಯಾಂಕ್‌ ಖರ್ಗೆ ಸಚಿವರಾಗಿ ಸಾಧನೆ ಏನು: ಪ್ರಶ್ನೆ

ಪ್ರಿಯಾಂಕ್ ಖರ್ಗೆ ಸಚಿವ ತಂದೆ ಎಐಸಿಸಿ ಅಧ್ಯಕ್ಷ ಮಾವ ಲೋಕಸಭೆ ಸದಸ್ಯ. ಇವರು ಸ್ವಂತ ಬೆಳವಣಿಗೆ ಆಗುತ್ತಿದ್ದಾರೆಯೇ ಹೊರತು ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲರಾಗಿದ್ದಾರೆ
ಎಸ್‌.ಮುನಿಸ್ವಾಮಿ ಮಾಜಿ ಸಂಸದ

ಪ್ರಿಯಾಂಕ್‌ಗೆ ಬಹಿರಂಗ ಸವಾಲು ಸಚಿವ ಪ್ರಿಯಾಂಕ್‌ ಖರ್ಗೆ ರಾಜ್ಯ ಸರ್ಕಾರ ನೀಡಿರುವ ಜವಾಬ್ದಾರಿ ಬಿಟ್ಟು ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಸಚಿವರಾಗಿ ಅವರು ರಾಜ್ಯಕ್ಕೆ ಎಷ್ಟು ಐ.ಟಿ ಬಿ.ಟಿ ಕಂಪನಿ ತಂದಿದ್ದಾರೆ? ತಮ್ಮ ಖಾತೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೀರಾ? ಏನು ಸಾಧನೆ ಮಾಡಿದ್ದಾರೆ? ಮೊದಲು ಅದನ್ನು ಸಾಬೀತುಪಡಿಸಲಿ; ಇಲ್ಲದಿದ್ದರೆ ನಾವೇ ಚಿತ್ತಾಪುರಕ್ಕೆ ಹೋಗಿ ಅಪ್ಪ ಮಗ ಹಾಗೂ ಮಾವನ ಸಾಧನೆ ಏನೆಂಬುದನ್ನು ಬಹಿರಂಗ ಪಡಿಸುತ್ತೇವೆ ಎಂದು ಮುನಿಸ್ವಾಮಿ ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.