ಕೋಲಾರ: ‘ಕೆ.ಆರ್.ರಮೇಶ್ ಕುಮಾರ್ ಶಕುನಿ ಇದ್ದಂತೆ. ಒಮ್ಮೊಮ್ಮೆ ದಾನಶೂರನ ಕರ್ಣನ ಪಾತ್ರವನ್ನೂ, ಮಗದೊಮ್ಮೆ ದುರ್ಯೋಧನನ ಪಾತ್ರವನ್ನೂ ಮಾಡುತ್ತಾರೆ. ನನ್ನನ್ನು ಮೂಲೆಗುಂಪು ಮಾಡಲೆಂದು ಎಲ್ಲರನ್ನೂ ಬಲಿಕೊಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ತಮ್ಮ ನಿವಾಸದ ಆವರಣದಲ್ಲಿ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಸಿದವರನ್ನು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಕರೆತಂದಿದ್ದಾರೆ. ನನ್ನ ಬಳಿ ಪ್ರಸ್ತಾಪಿಸದೇ ಏಕೆ ಸೇರಿಸಿಕೊಂಡಿರಿ? ಒಂದು ಹಂತದಲ್ಲಿ ರಾಜಿಗೂ ಸಿದ್ಧನಿದ್ದ ನನಗೆ ಏಕೆ ಮಾಹಿತಿ ನೀಡಲಿಲ್ಲ. ನನ್ನ ಸೋಲಿಸಿದವರಿಗೆ ಏಕೆ ಮಣೆ ಹಾಕಿದಿರಿ? ಅವರ ಅಗತ್ಯ ಕಾಂಗ್ರೆಸ್‌ಗೆ ಬೇಕಿತ್ತಾ ಎಂಬುದನ್ನು ಕ್ಷೇತ್ರದ ಜನರಿಗೆ ವಿವರಿಸಬೇಕು’ ಎಂದು ಆಗ್ರಹಿಸಿದರು.
‘ನಾನು ಸದ್ಯಕ್ಕೆ ಯಾವುದೇ ಪಕ್ಷ ಸೇರಲ್ಲ. ಆ ನಿರ್ಣಯವನ್ನು ನನಗೆ ಮತ ನೀಡಿದ ಜನರ ತೀರ್ಮಾನಕ್ಕೆ ಬಿಡುತ್ತೇನೆ. ಸ್ವಲ್ಪ ದಿನ ಕಾದು ನೋಡುತ್ತೇನೆ. ನನ್ನ ರಾಜಕೀಯ ಜೀವನ ಇನ್ನೂ ಮುಗಿದಿಲ್ಲ; ಈಗ ಹೊಸ ಅಧ್ಯಾಯ ಆರಂಭವಾಗಿದೆ’ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.
‘ಈ ಕ್ಷೇತ್ರದಲ್ಲಿ ತಮ್ಮನ್ನು ಹೊರತುಪಡಿಸಿ ಬೇರೊಬ್ಬರು ಮಂತ್ರಿಯಾಗಬಾರದು, ಮತ್ತೊಬ್ಬರು ಬೆಳೆಯಬಾರದು ಎಂಬುದು ರಮೇಶ್ ಕುಮಾರ್ ಉದ್ದೇಶವಾಗಿದೆ’ ಎಂದು ಹರಿಹಾಯ್ದರು.
ಈಚೆಗೆ ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್ ಹಾಗೂ ಎಂ.ಸಿ.ಸುಧಾಕರ್ ಅವರನ್ನು ನವದೆಹಲಿಯಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲಾಗಿತ್ತು. ಇವರಿಬ್ಬರು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಸಿದ್ದರು ಎಂಬುದು ಮುನಿಯಪ್ಪ ಬಣದ ದೂರು. ಇದು ಕ್ಷೇತ್ರದಲ್ಲಿ ಭಿನ್ನಮತ ಸ್ಫೋಟಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.