ನಂದಿನಿ ಹಾಲು
ಕೋಲಾರ: ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಶುಕ್ರವಾರ (ಜೂನ್ 13) ನಾಮಪತ್ರ ಸಲ್ಲಿಕೆ ಆರಂಭ ವಾಗಲಿದೆ. ಇದರೊಂದಿಗೆ ಕೋಮುಲ್ ಚುಕ್ಕಾಣಿ ಹಿಡಿಯಲು ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್–ಬಿಜೆಪಿ ಮೈತ್ರಿಕೂಟದ ನಡುವೆ ಮತ್ತೊಂದು ಸುತ್ತಿನ ಪೈಪೋಟಿ ಶುರುವಾಗಲಿದೆ.
ಜೂನ್ 25ರಂದು ನಗರದ ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ನಂತರ ಮತ ಎಣಿಕೆ ನಡೆಯಲಿದ್ದು, ಸಂಜೆ 6 ಗಂಟೆಯೊಳಗೆ ಫಲಿತಾಂಶ ಪ್ರಕಟಿಸಲಾಗುತ್ತದೆ.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್ ಅವರು ಕೋಮುಲ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರ ಕಚೇರಿಯಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸ್ವೀಕರಿಸಲಾಗುತ್ತದೆ. ಜೂನ್ 17ರ (ಮಂಗಳವಾರ) ಮಧ್ಯಾಹ್ನ 3 ಗಂಟೆವರೆಗೆ ಉಮೇದುವಾರಿಕೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಜೂನ್ 18ರಂದು ಚುನಾವಣಾಧಿಕಾರಿಯು ನಾಮಪತ್ರ ಪರಿಶೀಲನೆ ನಡೆಸಲಿದ್ದಾರೆ. ಸಿಂಧುತ್ವವಾದ ನಾಮಪತ್ರಗಳನ್ನು ಅಂದೇ ಪ್ರಕಟಿಸಲಿದ್ದಾರೆ. ಜೂನ್ 20ರ (ಶುಕ್ರವಾರ) ಮಧ್ಯಾಹ್ನ 3 ಗಂಟೆವರೆಗೆ ಉಮೇದುವಾರಿಕೆ ಹಿಂಪಡೆಯಲು ಅವಕಾಶ ಕಲ್ಪಿಸಿದ್ದಾರೆ. ಕಣದಲ್ಲಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಅಂದು ಘೋಷಿಸಿ ಚಿಹ್ನೆ ವಿತರಿಸಲಿದ್ದಾರೆ. ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿರುವುದಾಗಿ ರಮೇಶ್ ಹೇಳಿದ್ದಾರೆ.
ಕೋಮುಲ್‌ನಲ್ಲಿ 937ಅರ್ಹ ಮತದಾರ ಸಂಘಗಳು ಇವೆ. 49 ಮತದಾರ ಸಂಘಗಳು ಅನರ್ಹಗೊಂಡಿವೆ. 13 ನಿರ್ದೇಶಕರ ಕ್ಷೇತ್ರ ನಿಗದಿಪಡಿಸಲಾಗಿದೆ. ಇದರಲ್ಲಿ ಇಬ್ಬರು ಮಹಿಳಾ ನಿರ್ದೇಶಕರ ಆಯ್ಕೆ ನಡೆಯಲಿದೆ. ಇನ್ನುಳಿದ ಐದು ನಿರ್ದೇಶಕ ಸ್ಥಾನಗಳಿಗೆ ಸರ್ಕಾರಿ ಪ್ರತಿನಿಧಿಗಳು, ನಾಮನಿರ್ದೇಶಿತರು ಇರುತ್ತಾರೆ.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಹಾಲು ಸಹಕಾರ ಸಂಘಗಳ ಒಕ್ಕೂಟವು (ಕೋಚಿಮುಲ್) ವಿಭಜನೆಯಾಗಿ, ಚಿಕ್ಕಬಳ್ಳಾಪುರ ಒಕ್ಕೂಟವು ಪ್ರತ್ಯೇಕಗೊಂಡಿತು. ಆನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
ಕೋಮುಲ್ ನಿರ್ದೇಶಕರ ಸ್ಥಾನಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್–ಬಿಜೆಪಿ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಗಳ ನಡುವೆ ಬಿರುಸಿನ ಪೈಪೊಟಿ ನಡೆಯಲಿದೆ. ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್–ಬಿಜೆಪಿ ಮೈತ್ರಿಕೂಟ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಬಹುತೇಕ ಅಂತಿಮಗೊಳಿಸಿವೆ.
ಜೆಡಿಎಸ್–ಬಿಜೆಪಿ ನಡುವೆ ಸ್ಪರ್ಧೆಯ ಕ್ಷೇತ್ರಗಳು ಹಂಚಿಕೆಯಾಗಿವೆ. ಜೆಡಿಎಸ್ ಬೆಂಬಲಿತರು ಶ್ರೀನಿವಾಸಪುರ (2), ಕೋಲಾರ (3), ಮುಳಬಾಗಿಲು (2) ಕ್ಷೇತ್ರ ಹಾಗೂ ಒಂದು ಮಹಿಳಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ, ಬಿಜೆಪಿ ಬೆಂಬಲಿಡತರು ಬಂಗಾರಪೇಟೆ (1), ಮಾಲೂರು (2), ಕೆಜಿಎಫ್ (1) ಹಾಗೂ ಒಂದು ಮಹಿಳಾ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ.
ಇನ್ನು ಕಾಂಗ್ರೆಸ್‌ನಲ್ಲಿ ಎಂದಿನಂತೆ ಬಣ ರಾಜಕೀಯ ಶುರುವಾಗಿದೆ. ಬಂಗಾರಪೇಟೆ ಹಾಗೂ ಕೆಜಿಎಫ್ ಅಭ್ಯರ್ಥಿಗಳು ಒಂದು ಬಣದಲ್ಲಿದ್ದರೆ, ಇನ್ನುಳಿದ ಕ್ಷೇತ್ರಗಳ ಅಭ್ಯರ್ಥಿಗಳು ಮತ್ತೊಂದು ಬಣದಲ್ಲಿ ಗುರುತಿಸಿಕೊಂಡಿದ್ದಾರೆ.
ಈಚೆಗಷ್ಟೇ ಕೊನೆಗೊಂಡ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಭಾರಿ ಪೈಪೋಟಿಯಿಂದ ಕೂಡಿತ್ತು. ಹಣದ ಹೊಳೆಯೂ ಹರಿದಿತ್ತು. ನ್ಯಾಯಾಲಯದಲ್ಲಿ ಪ್ರಕರಣ ಇರುವ ಕಾರಣ ನಾಲ್ಕು ನಿರ್ದೇಶಕರ ಕ್ಷೇತ್ರಗಳ ಫಲಿತಾಂಶ ತಡೆ ಹಿಡಿಯಲಾಗಿದೆ. ಹೀಗಾಗಿ, ಇನ್ನೂ ಅಧ್ಯಕ್ಷರ ಆಯ್ಕೆ ನಡೆದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.