
ಕೋಲಾರ: ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ಎಚ್ 125 ಲಘು ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕ ‘ಆತ್ಮ ನಿರ್ಭರ ಭಾರತ’, ‘ಭಾರತದಲ್ಲೇ ತಯಾರಿಕೆ’ ಅಭಿಯಾನಕ್ಕೆ ಪುಷ್ಟಿ ನೀಡಿದೆ.
ಖಾಸಗಿ ವಲಯದಲ್ಲಿ ದೇಶದ ಮೊದಲ ಹೆಲಿಕಾಪ್ಟರ್ ಜೋಡಣಾ ಘಟಕ ಇದಾಗಿದ್ದು, ವೈಮಾನಿಕ ಕ್ಷೇತ್ರದಲ್ಲಿ ಕೋಲಾರ ಜಿಲ್ಲೆಯು ಜಾಗತಿಕಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣವಾಗಿದೆ.
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್‌ಎಲ್) ಹಾಗೂ ಏರ್‌ಬಸ್ ಸಹಭಾಗಿತ್ವದಲ್ಲಿ ಏಕ ಎಂಜಿನ್‌ನ ಲಘು ಹೆಲಿಕಾಪ್ಟರ್ ಸಿದ್ಧವಾಗಲಿದ್ದು, ಮತ್ತಷ್ಟು ಉದ್ಯೋಗಾವಕಾಶಗಳಿಗೆ ಬಾಗಿಲು ತೆರೆದಂತಾಗಿದೆ. ಮುಂದಿನ ವರ್ಷದ ಆರಂಭದಲ್ಲೇ ಮೊದಲ ಹೆಲಿಕಾಪ್ಟರ್ ಸಿದ್ಧವಾಗಲಿದೆ.
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್‌ಎಲ್) ನಿರ್ಮಿಸಿರುವ ಈ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಮುಂಬೈನಲ್ಲಿ ಮಂಗಳವಾರ ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡುತ್ತಿದ್ದಂತೆ ರಾಜ್ಯ ಹಾಗೂ ಜಿಲ್ಲೆಗೆ ಇದು ಐತಿಹಾಸಿಕ ದಿನವಾಗಿ ಪರಿಣಮಿಸಿತು. ಅಲ್ಲದೇ, ಭಾರತದ ವಾಯುಯಾನ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲು ಆಗಿದೆ.
ಇಲ್ಲಿ ಜೋಡಣೆಯಾಗಲಿರುವ ಹೆಲಿಕಾಪ್ಟರ್‌ಗಳು ತುರ್ತು ವೈದ್ಯಕೀಯ ಸೇವೆ, ವಿಪತ್ತು ನಿರ್ವಹಣೆ ಹಾಗೂ ಸರ್ಕಾರದ ಉಡಾನ್ ಯೋಜನೆಯಡಿ ಪ್ರಾದೇಶಿಕ ಸಂಪರ್ಕ ಬಲಪಡಿಸಲು ಪ್ರಮುಖ ಸಾಧನವಾಗಲಿವೆ. ಅಲ್ಲದೇ, ದೇಶದ ರಕ್ಷಣಾ ಇಲಾಖೆಗೆ ಅಗತ್ಯಬಿದ್ದಾಗ ಹೆಲಿಕಾಪ್ಟರ್ ಪೂರೈಸಲು ಸಿದ್ಧ ಎಂಬುದಾಗಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್‌ನ ಸಿಇಒ ಸುಕರಣ್ ಸಿಂಗ್ ಹೇಳಿದ್ದಾರೆ.
ಇದು ಟಾಟಾ ಮತ್ತು ಏರ್‌ಬಸ್ ನಡುವಿನ ಎರಡನೇ ಅತಿದೊಡ್ಡ ಸಹಭಾಗಿತ್ವವಾಗಿದ್ದು, ಈ ಹಿಂದೆ ಸಿ295 ಮಿಲಿಟರಿ ವಿಮಾನ ಉತ್ಪಾದನಾ ಘಟಕಕ್ಕೂ ಕೈಜೋಡಿಸಿದ್ದವು.
ವೇಮಗಲ್ ಕೈಗಾರಿಕಾ ಪ್ರದೇಶದ 17 ಎಕರೆ ಪ್ರದೇಶದಲ್ಲಿ ಸುಮಾರು ₹ 405 ಕೋಟಿ ವೆಚ್ಚದಲ್ಲಿ ಈ ಘಟಕ ತಲೆಎತ್ತಿದೆ. ರಾಜ್ಯ ಸರ್ಕಾರ ಜಮೀನು ನೀಡಿದೆ.
ಏರೋಸ್ಪೇಸ್ ತಯಾರಿಕಾ ಕ್ಷೇತ್ರದಲ್ಲಿ ರಾಜ್ಯಕ್ಕೆ ಮತ್ತಷ್ಟು ಬಲ ಸಿಕ್ಕಿದಂತಾಗಿದೆ. ಈಗಾಗಲೇ ಏರೋಸ್ಪೇಸ್ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಶೇ 65ರಷ್ಟು ಕೊಡುಗೆಯೊಂದಿಗೆ ಕರ್ನಾಟಕವು ದೇಶದಲ್ಲಿ ಮುಂಚೂಣಿಯಲ್ಲಿದೆ.
ವೇಮಗಲ್ ಕೈಗಾರಿಕಾ ಪ್ರದೇಶದಲ್ಲೇ ಈಚೆಗೆ ಜರ್ಮನಿಯ ಕ್ರೋನ್ಸ್ ಕಂಪನಿಯ ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಘಟಕಕ್ಕೆ ₹315 ಕೋಟಿ ಹೂಡಿಕೆಯೊಂದಿಗೆ ಭೂಮಿಪೂಜೆ ನೆರವೇರಿಸಲಾಗಿತ್ತು. ಈ ಯೋಜನೆಯಿಂದ 550ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭಿಸಲಿವೆ.
ವೇಮಗಲ್ ಕೈಗಾರಿಕಾ ಪ್ರದೇಶವು ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ಸಮೀಪವಿರುವುದು ಈ ಸ್ಥಳ ಆಯ್ಕೆಗೂ ಪ್ರಮುಖ ಕಾರಣವಾಗಿದೆ. ಜಿಲ್ಲೆಯಲ್ಲಿ ಆರ್ಥಿಕ ಹಾಗೂ ಕೈಗಾರಿಕಾ ಬೆಳವಣಿಗೆಗೆ ಮತ್ತಷ್ಟು ವೇಗ ಸಿಗಲಿದೆ.
ಜಿಲ್ಲೆ ಪಾಲಿಗೆ ಹೆಮ್ಮೆಯ ವಿಚಾರ ಏರ್‌ಬಸ್ ಎಚ್ 125 ಲಘು ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕ ತಲೆಎತ್ತಿರುವುದು ಕೋಲಾರ ಜಿಲ್ಲೆಯ ಪಾಲಿಗೆ ಹೆಮ್ಮೆಯ ವಿಚಾರ. ಇದು ಸಿವಿಲ್ ಉದ್ದೇಶಕ್ಕೂ ಹಾಗೂ ರಕ್ಷಣಾ ಕ್ಷೇತ್ರದಲ್ಲೂ ಬಳಕೆ ಮಾಡಬಹುದು. ರಕ್ಷಣಾ ಕ್ಷೇತ್ರಕ್ಕೆ ಹೆಲಿಕಾಪ್ಟರ್ ಅಗತ್ಯವಿದ್ದಾಗ ಕೊಡಲು ಸಿದ್ಧರಿರುವುದಾಗಿ ಟಾಟಾ ಕಂಪನಿಯವರು ಹೇಳಿದ್ದಾರೆ. ಈ ಭಾಗದಲ್ಲಿ ಆರ್ಥಿಕ ಬೆಳವಣಿಗೆಗೆ ಹಾಗೂ ಉದ್ಯೋಗಾವಕಾಶ ಹೆಚ್ಚಲು ಇದು ಕಾರಣವಾಗಲಿದೆ. ಈ ಪ್ರದೇಶವನ್ನು ಏರೋಸ್ಪೇಸ್ ಕಾರಿಡಾರ್ ಮಾಡುವ ಇರಾದೆ ಹೊಂದಿರುವುದಾಗಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರ ಪ್ರಸ್ತಾವ ಕೊಟ್ಟರೆ ಕೇಂದ್ರದಲ್ಲಿ ಈ ಕೆಲಸ ಮಾಡಿಕೊಡಲು ನಾನು ಸಿದ್ಧಎಂ.ಮಲ್ಲೇಶ್ ಬಾಬು ಸಂಸದ
20 ವರ್ಷಗಳಲ್ಲಿ 500 ಹೆಲಿಕಾಪ್ಟರ್: ಪಾಟೀಲ
ಟಾಟಾ-ಏರ್‌ಬಸ್ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ ಘಟಕದಲ್ಲಿ ಮುಂದಿನ 20 ವರ್ಷಗಳಲ್ಲಿ 500ಎಚ್-125 ಲಘು ಹೆಲಿಕಾಪ್ಟರ್ ಸಿದ್ಧವಾಗಲಿವೆ. ರಾಜ್ಯದಲ್ಲಿ ಈ ಘಟಕ ಸ್ಥಾಪನೆಯಾಗಿರುವುದು ಐತಿಹಾಸಿಕ ಸಾಧನೆಯಾಗಿವೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದರು. ಈ ಘಟಕಕ್ಕೆ ನಾನು ಕೈಗಾರಿಕಾ ಸಚಿವನಾದ ಮೇಲೆ 17 ಎಕರೆ ಜಾಗ ಕೊಡಿಸಿದ್ದು ಕೇವಲ ಒಂದೂವರೆ ವರ್ಷದಲ್ಲಿ ಉದ್ಘಾಟನೆ ಆಗುತ್ತಿರುವುದು ಸಂತಸದ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.