ADVERTISEMENT

ಕೋಲಾರ | ಹೊರ ರಾಜ್ಯದ ಎಂಟು ಮಂದಿ ಬಂಧನ

ಗಾಂಜಾ ಸಾಗಿಸಿ ಮಾರಾಟ, ನಂಬರ್ ಪ್ಲೇಟ್ ಬದಲಾಯಿಸಿ ಹಸು ಕಳ್ಳತನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 6:06 IST
Last Updated 20 ಸೆಪ್ಟೆಂಬರ್ 2025, 6:06 IST
ಗಾಂಜಾದೊಂದಿಗೆ ಆರೋಪಿಗಳ ಸೆರೆ
ಗಾಂಜಾದೊಂದಿಗೆ ಆರೋಪಿಗಳ ಸೆರೆ   

ಕೋಲಾರ: ನಗರ ಹೊರವಲಯದ ಟಮಕ ಕೈಗಾರಿಕಾ ಪ್ರದೇಶದ ಬಾಲಾಜಿ ರೈಸ್ ಮಿಲ್ ಮುಂಭಾಗ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಹೊರರಾಜ್ಯದ ಎಂಟು ಮಂದಿಯನ್ನು ವಿಶೇಷ ಪೊಲೀಸ್‌ ತಂಡ ಬಂಧಿಸಿದೆ. ಆರೋಪಿಗಳಿಂದ ₹ 20 ಲಕ್ಷ ಬೆಲೆಯ 20 ಕೆ.ಜಿ 580 ಗ್ರಾಂ ಗಾಂಜಾ ಹಾಗೂ ₹10 ಲಕ್ಷ ಮೌಲ್ಯದ ಕಾರು ವಶಪಡಿಸಿಕೊಳ್ಳಲಾಗಿದೆ.

ಹರಿಯಾಣದ ಮೊಹಮ್ಮದ್ ಆಜಾದ್ (45), ವಾರಿಸ್ (30), ರಾಜು (32), ಮುಬಾರಕ್ (32), ಹಸೀಬ್‌ (20), ಜಾವೀದ್ (26), ರಾಹಿಲ್ (28) ಮತ್ತು ರಾಜಸ್ಥಾನದ ಮೊಹಮ್ಮದ್ ಅಪ್ಸರ್ (30) ಬಂಧಿತ ಆರೋಪಿಗಳು.

ಅಕ್ರಮ ಗಾಂಜಾ ಸಾಗಾಟ ಹಾಗೂ ಮಾರಾಟ ತಡೆಯುವ ಸಲುವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಜಗದೀಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಂ.ಎಚ್. ನಾಗ್ತೆ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ADVERTISEMENT

ಗಾಂಜಾ ಸಾಗಾಟದ ಮಾಹಿತಿಯ ಮೇರೆಗೆ ದಾಳಿ ನಡೆಸಲಾಯಿತು. ಈ ವೇಳೆ ಪ್ರಮುಖ ಆರೋಪಿ ಕೋಲಾರ ನಗರದ ನ್ಯಾಮತ್ ಬೀ ದರ್ಗಾ ನಿವಾಸಿ ನಿಜಾಮುದ್ದೀನ್ ಅಲಿಯಾಸ್‌ ಚೋರ್ ನಿಜಾಮ್ ಮತ್ತು ಮುಬಾರಕ್ ತಲೆಮರೆಸಿಕೊಂಡರು. ಕಾರಿನಲ್ಲಿ ಇದ್ದ ಹರಿಯಾಣ ಮತ್ತು ರಾಜಸ್ಥಾನದ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಗಾಂಜಾ ಸಾಗಾಟ ಮತ್ತು ಮಾರಾಟ, ನಂಬರ್ ಪ್ಲೇಟ್ ಬದಲಾಯಿಸಿ ಹಸು ಕಳ್ಳತನ ಮಾಡುತ್ತಿದ್ದರು ಎಂದಿದ್ದಾರೆ.

ಕಾರ್ಯಾಚರಣೆಯಲ್ಲಿ ಗಲ್‌ಪೇಟೆ ಪೊಲೀಸ್ ಠಾಣೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಲೋಕೇಶ್ ಎಂ.ಜೆ, ಪಿಎಸ್‌ಐ ವಿಠಲ್ ವೈ ತಳವಾರ್, ಸಿಬ್ಬಂದಿ ಮುನಿವೆಂಕಟಸ್ವಾಮಿ, ಷಫೀವುಲ್ಲಾ, ಸುಜ್ಞಾನ್ ಕುಮಾರ್ ಮಂಜುನಾಥ.ಇ.ವಿ, ಶಿವಕುಮಾರ್, ವಿಠಲ್ ಬಿ ಕುಂಭಾರ್ ನಾಗರಾಜ ಇದ್ದರು. ಸಿಬ್ಬಂದಿಯನ್ನು ಎಸ್‌ಪಿ ನಿಖಿಲ್‌ ಶ್ಲಾಘಿಸಿದ್ದಾರೆ.

₹ 20 ಲಕ್ಷ ಬೆಲೆಯ 20 ಕೆ.ಜಿ 580 ಗ್ರಾಂ ಗಾಂಜಾ ವಶ ವಿಶೇಷ ಪೊಲೀಸ್ ತಂಡದ ಕಾರ್ಯಾಚರಣೆ ಹರಿಯಾಣ, ರಾಜಸ್ಥಾನ ಮೂಲದ ಆರೋಪಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.