ADVERTISEMENT

ಕೋಲಾರ | ಆರೋಗ್ಯ, ಶಿಕ್ಷಣದ ಪ್ರಗತಿಯಿಂದ ಸುಸ್ಥಿರ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 6:30 IST
Last Updated 18 ಜನವರಿ 2026, 6:30 IST
ಕೋಲಾರದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಕಾರ್ಯಾಗಾರಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಹಾಗೂ ಗಣ್ಯರು ಚಾಲನೆ ನೀಡಿದರು
ಕೋಲಾರದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಕಾರ್ಯಾಗಾರಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಹಾಗೂ ಗಣ್ಯರು ಚಾಲನೆ ನೀಡಿದರು   

ಕೋಲಾರ: ಜಿಲ್ಲೆಗಳು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ದೃಷ್ಟಿಯಿಂದ ಅಭಿವೃದ್ಧಿ ಹೊಂದಿದರೆ ಮಾತ್ರ ರಾಜ್ಯದ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ‘ಜಿಲ್ಲಾ ಮಾನವ ಅಭಿವೃದ್ಧಿ ವರದಿ-2025 ಹಾಗೂ ಸಮಗ್ರ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ-2031 ವರದಿಗಳ ತಯಾರಿಕೆ’ ಕುರಿತು ಅಧಿಕಾರಿಗಳಿಗೆ, ಸಹಾಯಕ ಸಂಯೋಜಕರಿಗೆ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಿಶ್ವದ 193 ಜಿಲ್ಲೆಗಳ ಪೈಕಿ ನಮ್ಮ ದೇಶವು ಅಭಿವೃದ್ಧಿ ದೃಷ್ಟಿಯಿಂದ 130ನೇ ಸ್ಥಾನದಲ್ಲಿದೆ. ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ಇಲ್ಲಿ ಬೆಳವಣಿಗೆಗೆ ವಿಫುಲ ಅವಕಾಶವಿದೆ. ನಮ್ಮಲ್ಲಿನ ಪ್ರತಿಭಾನ್ವಿತರು ಇತರ ದೇಶದಲ್ಲಿ ನೌಕರಿ, ಉದ್ಯಮ ಮಾಡಿ ಹೆಸರು ಗಳಿಸಿದ್ದಾರೆ. ನಾವು ಇನ್ನಷ್ಟು ದಾಪುಗಾಲು ಹಾಕಿ ಅಭಿವೃದ್ಧಿಯತ್ತ ಸಾಗಬೇಕು ಎಂದರು.

ADVERTISEMENT

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಿರಿಯ ನಿರ್ದೇಶಕ ಹಾಗೂ ಪದನಿಮಿತ್ತ ಜಂಟಿ ನಿರ್ದೇಶಕ ಬಸವರಾಜು ಎಸ್. ಮಾತನಾಡಿ, ‘ಜಿಲ್ಲೆಗಳ ಮಾನವ ಅಭಿವೃದ್ಧಿ 2025 ಸಿದ್ಧಪಡಿಸಲು ಎಲ್ಲಾ 31 ಜಿಲ್ಲೆಗಳಲ್ಲಿಯೂ ತರಬೇತಿ ನಡೆಸಲಾಗುವುದು. ಆರೋಗ್ಯ, ಶಿಕ್ಷಣ ಹಾಗೂ ಜನಗಳ ಜೀವನ ಮಟ್ಟದ ಮೇಲೆ ಅಭಿವೃದ್ಧಿಯ ಅಂಶಗಳು ಒಳಪಟ್ಟಿದೆ. 2015ರ ನಂತರ ಈ ಕುರಿತು ವರದಿ ಮಂಡನೆಯಾಗಿಲ್ಲ. ವಿವಿಧ ಮುಖ್ಯ ಇಲಾಖೆಗಳ ಜೊತೆಗೂಡಿ ಈ ವರದಿಯನ್ನು ತಯಾರಿಸಲು ಸಹಕರಿಸಬೇಕು’ ಎಂದು ಕೋರಿದರು.

ಗ್ಯಾರೆಂಟಿ ಯೋಜನೆಗಳು ಜನಸಾಮಾನ್ಯರ ಮೇಲೆ ಬೀರಿರುವ ಪ್ರಭಾವ, ಜಿಲ್ಲೆ ಅಳವಡಿಸಿಕೊಂಡಿರುವ ಉತ್ತಮ ಅಭ್ಯಾಸಗಳು, ಇತರ ಜಿಲ್ಲೆಗಳಿಂದ ತೆಗೆದುಕೊಳ್ಳಬಹುದಾದ ಒಳ್ಳೆಯ ಮಾದರಿಗಳು ಸಹ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯವೆನಿಸಿವೆ. ಆದ್ಯಾಗಿಯೂ ಲಿಂಗ ತಾರತಮ್ಯ, ನಿರುದ್ಯೋಗ, ಬಡತನ ಜನರನ್ನು ಕಾಡುತ್ತಿದೆ. ಈ ವರದಿ ಸಲ್ಲಿಸುವ ಕುರಿತು ಜಿಲ್ಲಾ ಮಟ್ಟದಲ್ಲಿಯೂ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತ ಸಿಇಒ ನೇತೃತ್ವದಲ್ಲಿ ಸಮಿತಿ ಸಹ ರಚಿಸಲಾಗಿದೆ. ಇದರಿಂದ ಅಭಿವೃದ್ಧಿ ಪೂರಕವಾದ ಅಂಶಗಳು ಬೆಳಕಿಗೆ ಬರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ನಿವೃತ್ತ ಹೆಚ್ಚುವರಿ ನಿರ್ದೇಶಕ ಹಾಗೂ ಸಮಾಲೋಚಕ ಸಿ.ಕೆಂಪಯ್ಯ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ತಾಂತ್ರಿಕ ಸಂಯೋಜಕಿ ‍ಪ್ರೊ.ಡಿ.ಕುಮುದಾ, ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಂಯೋಜಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.