ADVERTISEMENT

ಬಂಗಾರಪೇಟೆ: ಹಾಜರಾತಿ ಪುಸ್ತಕಕ್ಕೆ ಸೀಮಿತವಾದ ವೈದ್ಯರ ಲಭ್ಯತೆ

ಪ್ರಜಾವಾಣಿ ವಿಶೇಷ
Published 12 ಜನವರಿ 2026, 5:18 IST
Last Updated 12 ಜನವರಿ 2026, 5:18 IST
ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದ ಪಶು ಆಸ್ಪತ್ರೆಗೆ ಬೀಗ ಹಾಕಿರುವುದು
ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದ ಪಶು ಆಸ್ಪತ್ರೆಗೆ ಬೀಗ ಹಾಕಿರುವುದು   

ಬಂಗಾರಪೇಟೆ: ಗ್ರಾಮೀಣ ಜನತೆಯ ಬೆನ್ನೆಲುಬು ಹೈನುಗಾರಿಕೆ. ಅನೇಕ ಮಂದಿ ಹೈನುಗಾರಿಕೆ ನಂಬಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ತಾಲ್ಲೂಕಿನಲ್ಲಿ ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾದರೆ ಚಿಕಿತ್ಸೆ ನೀಡಲು ವೈದ್ಯರಿಲ್ಲ. ಕೆಲವೆಡೆ ವೈದ್ಯರಿದ್ದರೂ ಕಾಳಜಿ ಇಲ್ಲ. ಇನ್ನೂ ಕೆಲವೆಡೆ ಪಶು ಆಸ್ಪತ್ರೆಗಳು ಮಾತ್ರ ಇವೆ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲ್ಲೂಕಿನಾದ್ಯಂತ ಬಲಮಂದೆ, ಗುಲ್ಲಹಳ್ಳಿ, ತೊಪ್ಪನಹಳ್ಳಿ, ಚಿಕ್ಕಅಂಕಂಡಹಳ್ಳಿ, ಕಾಮಸಮುದ್ರ, ಬೂದಿಕೋಟೆ, ಚಿನ್ನಕೋಟೆ, ಸಿದ್ದನಹಳ್ಳಿ, ಬೋಡಗುರ್ಕಿ, ದೊಡ್ಡಚಿನ್ನಹಳ್ಳಿ, ಬಂಗಾರಪೇಟೆಯಲ್ಲಿ ಪಶು ಆಸ್ಪತ್ರೆಯಿದೆ. ಆದರೆ, ಬಲಮಂದೆ, ಗುಲ್ಲಹಳ್ಳಿ, ತೊಪ್ಪನಹಳ್ಳಿ, ಬೂದಿಕೋಟೆ ಪಶು ಆಸ್ಪತ್ರೆಗಳಲ್ಲಿ ಪಶುವೈದ್ಯರಿಲ್ಲದೆ ಪ್ರಭಾರ ವೈದ್ಯರಿದ್ದಾರೆ.

ಅನೇಕ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಹುದ್ದೆಗಳು ಖಾಲಿ ಇವೆ. ಆದರೂ ಸಹ ವೈದ್ಯರು ಕೇಂದ್ರ ಸ್ಥಾನದಲ್ಲಿ ವಾಸವಿರದೆ ನಗರ ಪ್ರದೇಶಗಳಿಂದ ಬಂದು ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿರುವ ಗ್ರೂಪ್ ಡಿ ನೌಕರರೇ ಅನಿವಾರ್ಯವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ವೈಜ್ಞಾನಿಕ ಜ್ಞಾನವಿಲ್ಲದ ಇವರಿಂದ ಪಡೆಯುವ ಚಿಕಿತ್ಸೆ ಕೆಲವೊಮ್ಮೆ ಪ್ರಾಣಿಗಳ ಜೀವಕ್ಕೆ ಮುಳುವಾಗುತ್ತಿದೆ.

ADVERTISEMENT

ಜಾನುವಾರುಗಳು ಹಠಾತ್ ರೋಗಕ್ಕೆ ತುತ್ತಾದಾಗ ರೈತರು ಆಸ್ಪತ್ರೆಗೆ ಓಡುತ್ತಾರೆ. ಆದರೆ, ಅಲ್ಲಿ ವೈದ್ಯರಿರುವುದಿಲ್ಲ. ನಮ್ಮ ಕಣ್ಣೆದುರೇ ಹಸುಗಳು ಒದ್ದಾಡಿ ಪ್ರಾಣ ಬಿಡುತ್ತಿವೆ. ರಾತ್ರಿ ವೇಳೆಯಂತೂ ಚಿಕಿತ್ಸೆ ಸಿಗುವುದು ಮರೀಚಿಕೆಯಾಗಿದೆ ಎಂಬುದು ರೈತರ ಆರೋಪವಾಗಿದೆ.

ಪಶು ಆಸ್ಪತ್ರೆಯಲ್ಲಿ ವೈದ್ಯರ ಲಭ್ಯತೆ ಕೇವಲ ಹಾಜರಾತಿ ಪುಸ್ತಕಕ್ಕೆ ಸೀಮಿತವಾಗಿದೆ. ರೈತರು ತಮ್ಮ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ಕೋರಿ ಬಂದಾಗ ವೈದ್ಯರು ಇರುವುದಿಲ್ಲ. ಜೊತೆಗೆ ನಗರ ಪ್ರದೇಶಗಳಿಂದ ಬಂದು ವೈದ್ಯರು ವಾರದ ಸಹಿಗಳನ್ನು ಒಟ್ಟಿಗೆ ಹಾಕಿ ಹೋಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಆಸ್ಪತ್ರೆಗೆ ಬರುವ ಔಷಧಿ, ಉಪಕರಣಗಳು ಮತ್ತು ಸರ್ಕಾರಿ ಸೌಲಭ್ಯ ಜಾನುವಾರುಗಳಿಗೆ ತಲುಪುತ್ತಿಲ್ಲ. ವೈದ್ಯರ ಅನುಪಸ್ಥಿತಿಯಲ್ಲಿ ಇವುಗಳ ವಿತರಣೆ ಪಾರದರ್ಶಕವಾಗಿಲ್ಲ. ಸರ್ಕಾರಿ ಪಶು ಆಸ್ಪತ್ರೆಗಳಿಗೆ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿ, ಲಸಿಕೆಗಳು ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳು ಸರಬರಾಜು ಆಗುತ್ತಿವೆ. ಆದರೆ, ವೈದ್ಯರು ಸ್ಥಳದಲ್ಲಿ ಇಲ್ಲದಿದ್ದಾಗ ಇವುಗಳ ಹಾದಿ ತಪ್ಪುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಉಚಿತ ಸರ್ಕಾರಿ ಸೇವೆ ಎಂಬುದು ಕೇವಲ ಹೆಸರಿಗಷ್ಟೇ ಸೀಮಿತವಾಗಿದೆ. ವಾಸ್ತವದಲ್ಲಿ ರೈತರು ಖಾಸಗಿ ವೈದ್ಯರ ದುಬಾರಿ ಶುಲ್ಕದ ಅಡಿಯಲ್ಲಿ ನಲುಗಿ ಹೋಗುತ್ತಿದ್ದಾರೆ. ಸರ್ಕಾರಿ ವೈದ್ಯರು ಲಭ್ಯವಿಲ್ಲದಿದ್ದಾಗ, ಖಾಸಗಿ ವೈದ್ಯರನ್ನು ಕರೆಸು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಹಾಲಿನಿಂದ ಬರುವ ಆದಾಯವೂ ಅದರ ಚಿಕಿತ್ಸೆಗೆ ವೆಚ್ಚವಾಗುತ್ತಿದೆ ಎಂಬುದು ರೈತರ ಆಳಲಾಗಿದೆ.

ಬಂಗಾರಪೇಟೆ ಸಂಚಾರಿ ಪಶು ಚಿಕಿತ್ಸಾಲಯದ ವಾಹನ

ಮನೆ ಬಾಗಿಲಿಗೆ ಚಿಕಿತ್ಸೆ 

ತಾಲ್ಲೂಕಿನಲ್ಲಿ 13 ಪಶು ವೈದ್ಯರ ಹುದ್ದೆಗಳಿವೆ. ಅದರಲ್ಲಿ ಒಂಬತ್ತು ಮಂದಿ ವೈದ್ಯರಿದ್ದಾರೆ. ಮೂರು ಕಾಯಂ ಐದು ಮಂದಿ ಹೊರಗುತ್ತಿಗೆ ವೈದ್ಯರಿದ್ದಾರೆ. ನಾಲ್ಕು ಹುದ್ದೆಗಳು ಖಾಲಿ ಇವೆ. ಶೀಘ್ರ ವೈದ್ಯರ ಸಮಸ್ಯೆಯನ್ನು ಬಗೆಹರಿಸಲಾಗುವುದು. ಆಸ್ಪತ್ರೆಯಲ್ಲಿ ವೈದ್ಯರ ಲಭ್ಯತೆ ಕುರಿತು ದೂರುಗಳು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪಶುಗಳ ತುರ್ತು ಚಿಕಿತ್ಸೆಗೆ ಪಶು ವೈದ್ಯಕೀಯ ಸಹಾಯವಾಣಿ ಸಂಖ್ಯೆ 1962 ಸಂಖ್ಯೆಗೆ ಕರೆ ಮಾಡಿ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನವಿದ್ದು ಪಶುವೈದ್ಯರು ಮನೆ ಬಾಗಿಲಿಗೆ ಬಂದು ಚಿಕಿತ್ಸೆಗೆ ನೀಡಲಿದ್ದಾರೆ. ಡಾ.ಸುದರ್ಶನ್ ಸಹಾಯಕ ನಿರ್ದೇಶಕರು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಬಂಗಾರಪೇಟೆ

ಕಾಲುಬಾಯಿ ರೋಗ ಚರ್ಮಗಂಟು ರೋಗ ಮತ್ತು ಗಂಟಲು ಬೇನೆಗೆ ಸಕಾಲದಲ್ಲಿ ಲಸಿಕೆ ಹಾಕುತ್ತಿಲ್ಲ. ಇದರಿಂದಾಗಿ ಪಶುಗಳು ರೋಗಿಗಳಿಗೆ ತುತ್ತಾಗುತ್ತಿವೆ.
–ವೆಂಕಟರಾಮಪ್ಪ, ಬೋಡೆನಹಳ್ಳಿ ನಿವಾಸಿ
ನಮಗೆ ಕೇವಲ ಪೇಪರ್ ಮೇಲಿನ ವೈದ್ಯರಲ್ಲ ನಮ್ಮ ಕೊಟ್ಟಿಗೆಯ ಬಾಗಿಲಿಗೆ ಬರುವ ವೈದ್ಯರು ಬೇಕು. ಸಹಿ ಹಾಕಲು ಬರುವವರು ಬೇಡ ಸೇವೆ ನೀಡುವವರು ಬೇಕು.
–ಭತ್ತ್ಯಪ್ಪ, ಗುಂಡರ್ಲಹಳ್ಳಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ
ವೈದ್ಯರು ಆಸ್ಪತ್ರೆಗೆ ಬಾರದಿದ್ದರೂ ಕಾಗದದಲ್ಲಿ ಹಸುಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಬರೆದು ಔಷಧಿಗಳ ಖರ್ಚನ್ನು ತೋರಿಸಲಾಗುತ್ತದೆ. ಈ ಕಾಗದದ ಮೇಲಿನ ಚಿಕಿತ್ಸೆಗೂ ವಾಸ್ತವಕ್ಕೂ ಸಂಬಂಧವೇ ಇರುವುದಿಲ್ಲ‌.
–ಆರ್.ಕೆ.ಶಿವಕುಮಾರ್, ಹೈನುಗಾರ
ರೈತರಿಗೆ ಉಚಿತವಾಗಿ ಸಿಗಬೇಕಾದ ಔಷಧಗಳು ಆಸ್ಪತ್ರೆ ಕಪಾಟಿನಿಂದ ಹೊರಬರುವುದೇ ಇಲ್ಲ. ಇವುಗಳನ್ನು ಅಕ್ರಮವಾಗಿ ಖಾಸಗಿ ಮೆಡಿಕಲ್ ಶಾಪ್‌ಗಳಿಗೆ ಮಾರಾಟ ಮಾಡಲಾಗುತ್ತಿದೆ.
–ವೇಣು ಮಂಚಹಳ್ಳಿ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.