ADVERTISEMENT

ಕೋಲಾರ| ಸರ್ಕಾರದಿಂದ ಬಾರದ ಬಾಕಿ ಹಣ: ಜಿಲ್ಲಾಸ್ಪತ್ರೆ ಉಚಿತ ಸ್ಕ್ಯಾನಿಂಗ್‌ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 6:32 IST
Last Updated 19 ಫೆಬ್ರುವರಿ 2026, 6:32 IST
ಕೋಲಾರದ ಎಸ್‌ಎನ್‌ಆರ್‌ ಜಿಲ್ಲಾಸ್ಪ‍ತ್ರೆ
ಕೋಲಾರದ ಎಸ್‌ಎನ್‌ಆರ್‌ ಜಿಲ್ಲಾಸ್ಪ‍ತ್ರೆ   

ಕೋಲಾರ: ಸರ್ಕಾರದಿಂದ ಬಾಕಿ ಹಣ ಬಾರದ ಕಾರಣ ನಗರದ ಎಸ್ಎನ್‌ಆರ್‌ ಜಿಲ್ಲಾಸ್ಪತ್ರೆಯ ಸ್ಕ್ಯಾನಿಂಗ್ ವ್ಯವಸ್ಥೆ ಗುತ್ತಿಗೆ ನೀಡಿರುವ ಕಂಪನಿಯವರು ಸೇವೆ ಸ್ಥಗಿತಗೊಳಿಸಿದ್ದಾರೆ. ಈ ಪರಿಣಾಮ ರೋಗಿಗಳು ಹಾಗೂ ಅವರ ಸಂಬಂಧಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಸಿ.ಟಿ ಸ್ಕ್ಯಾನಿಂಗ್‌, ಎಂ‌ಆರ್‌ಐ ಸ್ಕ್ಯಾನಿಂಗ್‌ ಉಚಿತವಾಗಿ ಮಾಡಲಾಗುತಿತ್ತು. ಆದರೆ, ಹಣ ಕೊಟ್ಟರೆ ಮಾತ್ರ ಸೇವೆ ನೀಡುವುದಾಗಿ ಸ್ಕ್ಯಾನಿಂಗ್‌ ವಿಭಾಗದ ಸಿಬ್ಬಂದಿ ಹೇಳಿದ್ದಾರೆ. ಹೀಗಾಗಿ, ಬುಧವಾರ ಆಸ್ಪತ್ರೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

‘ನಾವೆಲ್ಲಾ ಬಡವರು. ಇಷ್ಟೊಂದು ಹಣ ಇಲ್ಲ. ಇಷ್ಟು ದಿನ ಉಚಿತವಾಗಿ ಮಾಡುತ್ತಿದ್ದ ಸ್ಕ್ಯಾನಿಂಗ್‌ಗೆ ಈಗ ಏಕೆ ಹಣ ಕೊಡಬೇಕು’ ಎಂದು ರೋಗಿಗಳು ಹಾಗೂ ಅವರ ಕುಟುಂಬದವರು ‍ಪ್ರಶ್ನಿಸಿದರು

ADVERTISEMENT

ಈ ವೇಳೆ ಸ್ಕ್ಯಾನಿಂಗ್ ಘಟಕದ ಸಿಬ್ಬಂದಿ ಹಾಗೂ ರೋಗಿಗಳ ಸಂಬಂಧಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಕೂಡಲೇ ಉಚಿತ ಸ್ಕ್ಯಾನಿಂಗ್‌ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಸರ್ಕಾರವು ಕಂಪನಿಯೊಂದಕ್ಕೆ ಸ್ಕ್ಯಾನಿಂಗ್‌ ಘಟಕವನ್ನು ಹೊರಗುತ್ತಿಗೆ ನೀಡಿದೆ. ಹಲವು ವರ್ಷಗಳಿಂದ ಈ ಕಂಪನಿಯವರೇ ಸ್ಕ್ಯಾನಿಂಗ್ ಘಟಕ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಮೂರು ವರ್ಷಗಳಿಂದ ಹಣ ಹೋಗಿಲ್ಲ. ಕೋಟ್ಯಂತರ ರೂಪಾಯಿ ಬಾಕಿ ಇದೆ ಎನ್ನಲಾಗಿದೆ.

ಬಾಕಿ ನೀಡಿದರೆ ಸೇವೆ ಮುಂದುವರಿಸುವುದಾಗಿ ಕಂಪನಿಯವರು ಹೇಳಿದ್ದಾರೆ. ರೋಗಿಗಳು ಹಣ ನೀಡಿದರೆ ಸ್ಕ್ಯಾನಿಂಗ್‌ ಮಾಡುವುದಾಗಿಯೂ ತಿಳಿಸಿದ್ದಾರೆ.

ಈ ಆಸ್ಪತ್ರೆಯ ಹೊರಗುತ್ತಿಗೆ ಸಿಬ್ಬಂದಿ ಕೂಡ ಕೆಲ ತಿಂಗಳಿಂದ ವೇತನ ನೀಡಿಲ್ಲವೆಂದು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

‘ನಾವು ಹಣಕ್ಕಾಗಿಯೇ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಹೀಗೆ ಹಣ ಬಾಕಿ ಉಳಿಸಿಕೊಂಡರೆ ನಾವು ಬದುಕುವುದು ಹೇಗೆ’ ಎಂದು ಸಿಬ್ಬಂದಿ ಗೋಳು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.