ADVERTISEMENT

ಕೋಲಾರ: ಈಜುಕೊಳ ನಿರ್ಮಾಣಕ್ಕೆ ಕೂಡಿಬಂದ ಕಾಲ!

ಜಿಲ್ಲೆಯಲ್ಲಿ ಈಜುಪಟುಗಳ ತಾಲೀಮಿಗೆ ಇರಲಿಲ್ಲ ಸೌಲಭ್ಯ, ಈಗ ₹ 4.70 ಕೋಟಿ ಅನುದಾನ

ಕೆ.ಓಂಕಾರ ಮೂರ್ತಿ
Published 12 ಜನವರಿ 2026, 5:24 IST
Last Updated 12 ಜನವರಿ 2026, 5:24 IST
ಕೋಲಾರದಲ್ಲಿ ಈಜುಕೊಳ ನಿರ್ಮಾಣಕ್ಕೆ ಮೀಸಲಿಟ್ಟಿರುವ ಮಿನಿ ಕ್ರೀಡಾಂಗಣ ಹಿಂಭಾಗದ ಜಾಗ
ಕೋಲಾರದಲ್ಲಿ ಈಜುಕೊಳ ನಿರ್ಮಾಣಕ್ಕೆ ಮೀಸಲಿಟ್ಟಿರುವ ಮಿನಿ ಕ್ರೀಡಾಂಗಣ ಹಿಂಭಾಗದ ಜಾಗ   

ಕೋಲಾರ: ಜಿಲ್ಲೆಯಲ್ಲಿ ಈಜುಕೊಳ ನಿರ್ಮಾಣಕ್ಕೆ ಕೊನೆಗೂ ಕಾಲ ಕೂಡಿಬಂದಿದ್ದು, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ₹ 4.70 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.

ಜಿಲ್ಲೆಯಲ್ಲಿ ಪ್ರತಿಭಾವಂತ ಈಜುಪಟುಗಳಿದ್ದರೂ ಸರ್ಕಾರದಿಂದ ನಿರ್ಮಾಣವಾದ ಒಂದೂ ಈಜುಕೊಳ ಇರಲಿಲ್ಲ. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುವ ಈಜುಪಟುಗಳು ತಾಲೀಮು ನಡೆಸಲು ಬೆಂಗಳೂರು ನಗರಿಯನ್ನೇ ನೆಚ್ಚಿಕೊಳ್ಳಬೇಕಿದೆ. ಇನ್ನು ಕೆಲ ರೆಸಾರ್ಟ್‌ಗಳು, ಖಾಸಗಿ ಶಾಲೆಗಳಲ್ಲಿ ಈಜುಕೊಳವಿದ್ದು ಕ್ರೀಡಾಪಟುಗಳಿಗೆ, ಸಾರ್ವಜನಿಕರಿಗೆ ಸುಲಭವಾಗಿ ಕೈಗೆಟುಕುವಂತಿಲ್ಲ.

ನಗರದ ಮಿನಿ ಕ್ರೀಡಾಂಗಣದ ಹಿಂಭಾಗದ ಜಾಗದಲ್ಲಿ ಈ ಈಜುಕೊಳ ನಿರ್ಮಿಸಲಾಗುತ್ತಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೋಮವಾರ ಭೂಮಿಪೂಜೆ ನೆರವೇರಿಸಲಿದ್ದಾರೆ. 25 ಮೀಟರ್‌ ಉದ್ದದ ಈಜುಕೊಳ ನಿರ್ಮಾಣವಾಗಲಿದ್ದು, ಒಳಾಂಗಣ ಮಾದರಿಯಲ್ಲಿ ಚಾವಣಿಯನ್ನು ಒಳಗೊಂಡಿರಲಿದೆ. ಇದರಿಂದ ಈಜುಕೊಳದ ನಿರ್ವಹಣೆ ಸುಲಭವಾಗುತ್ತದೆ.

ADVERTISEMENT

ಈಜುಕೊಳ ತಲೆ ಎತ್ತಿದರೆ ಜಿಲ್ಲಾಮಟ್ಟದ ಸ್ಪರ್ಧೆ ನಡೆಸಬಹುದು. ಜೊತೆಗೆ ಕ್ರೀಡಾಪಟುಗಳ ತಾಲೀಮಿಗೂ ನೆರವಾಗಲಿದೆ. ಶಾರ್ಟ್ ಕೋರ್ಸ್‌ ಈಜು ತರಬೇತಿ ನಡೆಸಬಹುದು. ಅಲ್ಲದೇ, ಹೊಸದಾಗಿ ಕಲಿಯುವವರಿಗೂ ಸಹಾಯವಾಗಲಿದೆ.

‘ಜಿಲ್ಲೆಯ ಮಕ್ಕಳಲ್ಲಿ ಈಜು ಬಗ್ಗೆ ಬಹಳ ಆಸಕ್ತಿ ಇದೆ. ಹೀಗಾಗಿ, ಕ್ರೀಡಾ ಇಲಾಖೆಯು ತಾಲ್ಲೂಕಿಗೆ ಒಂದು ಈಜುಕೊಳ ನಿರ್ಮಿಸಬೇಕು. ಈಗ ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಜೊತೆಗೆ ಕೋಚ್‌ಗಳನ್ನೂ ನೇಮಕ ಮಾಡಬೇಕು. ಆಗ ಮತ್ತಷ್ಟು ಮಕ್ಕಳಲ್ಲಿ ಈಜು ಕ್ರೀಡೆ ಬಗ್ಗೆ ಆಸಕ್ತಿ ಮೂಡುತ್ತದೆ’ ಎಂದು ಹಿರಿಯ ಈಜುಪಟುಗಳು ಹಾಗೂ ಕೋಚ್‌ಗಳು ಹೇಳುತ್ತಾರೆ.

ರೆಸಾರ್ಟ್‌ಗಳಲ್ಲಿರುವ ಖಾಸಗಿ ಈಜುಕೊಳದಲ್ಲಿ ಶುಲ್ಕ ಏಪ್ರಿಲ್‌–ಮೇ ತಿಂಗಳಲ್ಲಿ ಬೇಸಿಗೆ ಈಜು ಶಿಬಿರ ನಡೆಸಲಾಗುತ್ತದೆ. ಸುಮಾರು 300 ಮಕ್ಕಳು ಪಾಲ್ಗೊಳ್ಳುತ್ತಾರೆ. ಬೆಮಲ್‌ನಲ್ಲೂ ಈಜುಕೊಳವಿದ್ದು, ಸಾರ್ವಜನಿಕರಿಗೆ ಪ್ರವೇಶವಿಲ್ಲ.

ಕೋಲಾರ ಜಿಲ್ಲೆಯ ರೆಸಾರ್ಟ್‌ವೊಂದರ  ಖಾಸಗಿ ಈಜುಕೊಳ

ದಶಕದ ಕೂಗಿಗೆ ಮನ್ನಣೆ

ಕೋಲಾರ ಜಿಲ್ಲೆಯ ಪ್ರತಿಭೆಗಳ ತಾಲೀಮಿಗಾಗಿ ಈಜುಕೊಳ ನಿರ್ಮಿಸಬೇಕೆಂಬುದು ದಶಕಗಳ ಕೂಗು. ಅದು ಕನಸಾಗಿಯೇ ಉಳಿದಿತ್ತು. ಕೆಲ ವರ್ಷಗಳ ಹಿಂದೆ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಆಗಿನ ಅಧಿಕಾರಿಗಳು 25 ಮೀಟರ್‌ ಉದ್ದದ ಈಜುಕೊಳ ನಿರ್ಮಿಸುವ ಪ್ರಸ್ತಾವವನ್ನು ಇಲಾಖೆಯ ಮೇಲಧಿಕಾರಿಗಳಿಗೆ ಸಲ್ಲಿಸಿದ್ದರು. ಜಿಲ್ಲಾ ಒಳಾಂಗಣ ಕ್ರೀಡಾಂಗಣದ ಹಿಂಬದಿಯ ಹಳೆ ಕಟ್ಟಡ ತೆರವುಗೊಳಿಸಿದ್ದು ಆ ಜಾಗದಲ್ಲಿ ಈಜುಕೊಳ ನಿರ್ಮಿಸಲು ಜಾಗ ಗುರುತಿಸಿದ್ದರು. ದಶಕಗಳ ಕೂಗಿಗೆ ಕೊನೆಗೂ ಮನ್ನಣೆ ಸಿಕ್ಕಿದೆ. ಆದರೆ ರಾಜ್ಯ ಸರ್ಕಾರದಿಂದ ಮಂಜೂರಾಗಿರುವ ಈ ಈಜುಕೊಳದ ಸ್ವರೂಪದ ಬಗ್ಗೆ ಜಿಲ್ಲೆಯ ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಸರಿಯಾದ ಮಾಹಿತಿಯೇ ಇಲ್ಲ. ಶಂಕುಸ್ಥಾಪನೆಗೆ ದಿನಾಂಕ ನಿಗದಿ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಇಲಾಖೆಯ ಸಹಾಯಕ ನಿರ್ದೇಶಕಿ ಆರ್.ಗೀತಾ ಅವರ ವರ್ಗಾವಣೆ ಆಗಿದ್ದು ಅವರ ಜಾಗಕ್ಕೆ ಜಯಲಕ್ಷ್ಮಿ ಎಂಬುವರು ಬಂದಿದ್ದಾರೆ.    

25 ಮೀಟರ್‌ ಉದ್ದದ ಈಜುಕೊಳ ನಿರ್ಮಿಸಲು ಕ್ರೀಡಾ ಇಲಾಖೆಯ ಕೇಂದ್ರ ಕಚೇರಿಯಿಂದ ಟೆಂಡರ್‌ ಆಗಿದ್ದು ಸೋಮವಾರ ಶಂಕುಸ್ಥಾಪನೆ ನೆರವೇರಲಿದೆ
–ಜಯಲಕ್ಷ್ಮಿ ಟಿ., ಸಹಾಯಕ ನಿರ್ದೇಶಕಿ ಕ್ರೀಡಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.