
ಕೋಲಾರ: ಸಮಾಜದಲ್ಲಿ ಜೀತ ಪದ್ಧತಿಯಂತಹ ಅನಿಷ್ಠ ಇಂದಿಗೂ ಜೀವಂತವಾಗಿರುವುದು ದುರದೃಷ್ಟಕರ. ಇದನ್ನು ಬೇರುಸಹಿತ ಕಿತ್ತೆಸೆಯಲು ನಾವೆಲ್ಲರೂ ಸಂಕಲ್ಪ ಮಾಡಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ. ಬಾಗೇವಾಡಿ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮುಕ್ತಿ ಒಕ್ಕೂಟ ಕರ್ನಾಟಕ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಡತನ ಮತ್ತು ಆರ್ಥಿಕ ಸಂಕಷ್ಟಗಳಿಂದಾಗಿ ಸಣ್ಣಪುಟ್ಟ ಸಾಲಗಳನ್ನು ಪಡೆದು ಜನರು ಜೀತ ಪದ್ಧತಿಗೆ ಸಿಲುಕುತ್ತಿದ್ದಾರೆ. ಇದು ಕ್ರಮೇಣ ಬಡ್ಡಿಯಿಂದ ಚಕ್ರಬಡ್ಡಿಯಾಗಿ ಮಾರ್ಪಟ್ಟು, ಒಂದು ಇಡೀ ತಲೆಮಾರನ್ನೇ ಶೋಷಣೆಯ ಸುಳಿಗೆ ತಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂವಿಧಾನದ ವಿಧಿ 23ರ ಅಡಿಯಲ್ಲಿ ಬಲವಂತದ ದುಡಿಮೆಯನ್ನು ನಿಷೇಧಿಸಲಾಗಿದೆ. 1976ರ ಜೀತ ಪದ್ಧತಿ ನಿರ್ಮೂಲನಾ ಕಾಯ್ದೆಯು ಜಾರಿಗೆ ಬಂದಾಗಿನಿಂದ ದೇಶದಾದ್ಯಂತ ಸುಮಾರು 3 ಲಕ್ಷ ಹಾಗೂ ಕರ್ನಾಟಕದಲ್ಲಿ 80 ಸಾವಿರಕ್ಕೂ ಹೆಚ್ಚು ಜನರನ್ನು ಜೀತಮುಕ್ತಗೊಳಿಸಲಾಗಿದೆ ಎಂದು ಅಂಕಿಅಂಶಗಳನ್ನು ಹಂಚಿಕೊಂಡರು.
ಜೀತ ಪದ್ಧತಿಯು ಕೇವಲ ಆರ್ಥಿಕ ಅಸಮಾನತೆಯಲ್ಲ; ಇದು ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಯ ಪ್ರತಿಫಲವೂ ಹೌದು. ಮುಖ್ಯವಾಗಿ ಇಟ್ಟಿಗೆ ಕಾರ್ಖಾನೆಗಳು, ಕೃಷಿ ಕ್ಷೇತ್ರ ಮತ್ತು ಅಸಂಘಟಿತ ವಲಯಗಳಲ್ಲಿ ಈ ಪದ್ಧತಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ವಿವರಿಸಿದರು.
ಪೋಷಕರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ. ಆರ್ಥಿಕ ಸಂಕಷ್ಟದಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಬದಲು ಕೆಲಸಕ್ಕೆ ಕಳುಹಿಸುವುದು ಅವರ ಭವಿಷ್ಯಕ್ಕೆ ಕಂಟಕವಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಜಾಗೃತರಾಗಿ ಜಿಲ್ಲೆಯನ್ನು ಜೀತಮುಕ್ತಗೊಳಿಸಲು ಕೈಜೋಡಿಸಬೇಕು ಎಂದು ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ನಟೇಶ್ ಮಾತನಾಡಿ, ‘ಕನಿಷ್ಠ ವೇತನ ನೀಡದೆ, ವಿಶ್ರಾಂತಿ ಇಲ್ಲದೆ ದುಡಿಸಿಕೊಳ್ಳುವುದು ಅಥವಾ ಅತಿ ಹೆಚ್ಚಿನ ಸಾಲದ ಬಡ್ಡಿಗೆ ಕಟ್ಟಿಹಾಕಿ ಶೋಷಿಸುವುದು ಕಾನೂನಿನ ಅಡಿ ಶಿಕ್ಷಾರ್ಹ ಅಪರಾಧವಾಗಿದೆ’ ಎಂದು ಎಚ್ಚರಿಸಿದರು.
ಸಮಾಜದಲ್ಲಿ ಎಲ್ಲಾದರೂ ಇಂತಹ ಪದ್ಧತಿ ಕಂಡುಬಂದಲ್ಲಿ ಕೂಡಲೇ ವಿಜಿಲೆನ್ಸ್ ಕಮಿಟಿ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಡಿವೈಎಸ್ಪಿ ವಿ.ಕೃಷ್ಣಪ್ಪ ಮಾತನಾಡಿ, ‘ಜೀತ ಪದ್ಧತಿಯು ಮನುಷ್ಯನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಅನಿಷ್ಠ ಪದ್ಧತಿಯಾಗಿದೆ. ಅಜ್ಞಾನ ಮತ್ತು ಶಿಕ್ಷಣದ ಕೊರತೆಯಿಂದಾಗಿ ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಜೀತದಾಳುಗಳನ್ನು ಕಾಣಬಹುದಾಗಿದೆ. ಇದು ಮಾನವ ಹಕ್ಕುಗಳ ನೇರ ಉಲ್ಲಂಘನೆ’ ಎಂದರು.
ಮದ್ದೂರು ತಾಲ್ಲೂಕಿನ ಕೋಣಸಾಲೆ ಗ್ರಾಮದ ಹಂದಿ ಫಾರ್ಮ್ ಒಂದರಲ್ಲಿ ಎರಡು ಕುಟುಂಬಗಳನ್ನು ಕಾನೂನುಬಾಹಿರವಾಗಿ ಕೂಡಿಹಾಕಿದ್ದ ಪ್ರಕರಣವನ್ನು ನೆನಪಿಸಿದ ಅವರು, ಪೊಲೀಸರು ಮತ್ತು ಉಪವಿಭಾಗಾಧಿಕಾರಿ ಜಂಟಿ ದಾಳಿ ನಡೆಸಿ 10 ಜನರನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಿದ ಘಟನೆಯನ್ನು ಹಂಚಿಕೊಂಡರು.
ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್ ಮಾತನಾಡಿ, ‘ಜೀತ ಪದ್ಧತಿಯಿಂದ ಮುಕ್ತರಾದವರಿಗೆ ದೈಹಿಕ ಮತ್ತು ಮಾನಸಿಕ ನೆರವು ನೀಡುವುದು ಹಾಗೂ ಅವರ ಪುನರ್ವಸತಿಗೆ ಶ್ರಮಿಸುವುದು ವಿವಿಧ ಇಲಾಖೆಗಳ 52 ಪ್ರಾಧಿಕಾರಗಳ ಜವಾಬ್ದಾರಿಯಾಗಿದೆ’ ಎಂದರು.
ಇದಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ಮೆಕ್ಕೆ ವೃತ್ತದ ವರೆಗೆ ಜಾಥಾ ನಡೆಯಿತು. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಿಗೆ ಜೀತ ಪದ್ಧತಿ ನಿರ್ಮೂಲನೆ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಶಾಂತ ಜೀವ ಜ್ಯೋತಿ ಎನ್.ಜಿ.ಒ ನಿರ್ದೇಶಕ ಷಣ್ಮುಖ ಸುಂದರಂ, ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.
50 ವರ್ಷಗಳ ಹಿಂದೆಯೇ ಜೀತ ಪದ್ಧತಿ ನಿರ್ಮೂಲನಾ ಕಾಯ್ದೆ ಜಾರಿಗೆ ಬಂದಿದ್ದರೂ ಇಂದಿಗೂ ಸಮಾಜದಲ್ಲಿ ಈ ಪಿಡುಗು ಜೀವಂತವಾಗಿರುವುದು ವಿಷಾದನೀಯಆರ್.ನಟೇಶ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.