
ಕೋಲಾರ: ನಗರದ ಸಂಚಾರ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ಪೊಲೀಸರ ಸಮ್ಮುಖದಲ್ಲಿ ವಿಕ್ರಂ ಚಾರಿಟೆಬಲ್ ಟ್ರಸ್ಟ್‌ನಿಂದ ನೂರಾರು ಮಂದಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಲಾಯಿತು.
‘2017 ರಲ್ಲಿ ನನ್ನ ಪುತ್ರ ಅಪಘಾತದಲ್ಲಿ ನಿಧನ ಹೊಂದಿದ್ದು, ಅಂದಿನಿಂದ ಟ್ರಸ್ಟ್‌ನಿಂದ ಪ್ರತಿ ವರ್ಷ 300 ರಿಂದ 500 ಹೆಲ್ಮೆಟ್ ವಿತರಣೆ ಮಾಡಿಕೊಂಡು ಬರಲಾಗುತ್ತಿದೆ. ಜೀವನವಿಡೀ ನೋವು ಯಾರಿಗೂ ಬರಬಾರದು. ತಂದೆ ತಾಯಿಯ ಮಾತನ್ನು ಮಕ್ಕಳು ಕೇಳಬೇಕು’ ಎಂದು ಟ್ರಸ್ಟ್ ಅಧ್ಯಕ್ಷ ಲಿಂಗಾಪುರ ಕೃಷ್ಣಪ್ಪ ಹೇಳಿದರು.
ವಾಹನ ಚಾಲನೆ ವೇಳೆ ಹೆಲ್ಮೆಟ್ ಧರಿಸುವುದರಿಂದ ಅಪಾಯದಿಂದ ಪಾರಾಗಬಹುದು. ಹೆಲ್ಮೆಟ್‍ಗಳನ್ನು ಮನೆಯಲ್ಲಿ ಇಡದೆ ಚಾಲನೆ ಸಮಯದಲ್ಲಿ ಕಡ್ಡಾಯವಾಗಿ ಬಳಸಿ ಜೀವ ರಕ್ಷಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಬೈಕ್‍ಗಳಿಗೆ ಲಕ್ಷಾಂತರ ರೂಪಾಯಿ ನೀಡಿ ಖರೀದಿಸುತ್ತೇವೆ. ಆದರೆ, ಸಾವಿರ ರೂಪಾಯಿ ನೀಡಿ ಹೆಲ್ಮೆಟ್ ಖರೀದಿಗೆ ಹಿಂದೇಟು ಹಾಕುತ್ತೇವೆ. ಆ ಮನೋಭಾವ ಬದಲಾಗಬೇಕು ಎಂದರು.
ಡಿವೈಎಸ್ಪಿ ಎಂ.ಎಚ್.ನಾಗ್ತೆ ಮಾತನಾಡಿ, ‘ಅಪಘಾತ ಹಾಗೂ ಸಾವುಗಳು ಹೆಚ್ಚುತ್ತಿದ್ದು, ನಿತ್ಯವೂ ಹೆಲ್ಮೆಟ್ ಧರಿಸಬೇಕು. ದಂಡ ಮುಖ್ಯವಲ್ಲ ಕಾನೂನು ಪಾಲನೆ ಮಾಡುವುದು ಮುಖ್ಯ. ಹೆಲ್ಮೆಟ್ ಧರಿಸದಿದ್ದರೆ ಬೈಕ್ ಜಪ್ತಿ ಮಾಡಲಾಗುವುದು. ಅದಕ್ಕಾಗಿ ಎರಡು ಮೈದಾನ ಖಾಲಿ ಮಾಡುತ್ತಿದ್ದೇವೆ. ಅಲ್ಲಿ ತುಂಬಿ ಬಿಡುತ್ತೇವೆ. ಇದು ಕಡೆಯ ಅಸ್ತ್ರ’ ಎಂದು ಎಚ್ಚರಿಸಿದರು.
ವಾಹನಗಳನ್ನು ಮೈದಾನದಲ್ಲಿ ಹಾಕಿದ ಬಳಿಕ ಹೆಲ್ಮೆಟ್‍ನೊಂದಿಗೆ ಬಂದು, ದಂಡ ಪಾವತಿಸಿ ಬಿಡಿಸಿಕೊಂಡು ಹೋಗಬೇಕಾಗುತ್ತದೆ ಎಂದು ನುಡಿದರು.
ಇನ್‌ಸ್ಪೆಕ್ಟರ್ ಎಂ.ಜೆ.ಲೋಕೇಶ್ ಮಾತನಾಡಿ, ದಂಡ ಪಾವತಿಗೆ ಸರ್ಕಾರವು ಶೇ 50 ರಷ್ಟು ರಿಯಾಯಿತಿಯ ಅವಕಾಶ ನೀಡಿದ್ದು, ಬಳಸಿಕೊಳ್ಳಿ ಎಂದರು.
ಸಂಚಾರ ಠಾಣೆ ಪಿಎಸ್‍ಐ ಭಾರತಿ ಮಾತನಾಡಿ, ‘ಏಳು ವರ್ಷಗಳ ಹಿಂದೆ ಮಗನನ್ನು ಕಳೆದುಕೊಂಡಿರುವ ಲಿಂಗಾಪುರ ಕೃಷ್ಣಪ್ಪ ಬೇರೆ ಯಾರ ಮನೆಯಲ್ಲೂ ಅಂತಹ ಘಟನೆ ಮರುಕಳಿಸಬಾರದೆಂದು ಉಚಿತ ಹೆಲ್ಮೆಟ್ ವಿತರಣೆ ಮಾಡುತ್ತಿದ್ದಾರೆ. ಡಿ. 1 ರಿಂದ ಕೋಲಾರದಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು, ನಿಯಮ ಪಾಲಿಸಿ ಇಲಾಖೆಗೆ ಸಹಕರಿಸಿ’ ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.