ADVERTISEMENT

ಕೋಲಾರ | ಜಿಲ್ಲಾ ಬಂದ್‌; ಶೂ ಎಸೆತ ವಿರುದ್ಧ ಜನಾಕ್ರೋಶ

ಮುಚ್ಚಿದ ಅಂಗಡಿ, ಶಾಲೆ; ರಸ್ತೆಗಿಳಿಯದ ಸಾರಿಗೆ ಬಸ್–ಸ್ವಯಂ ಪ್ರೇರಿತ ಬಂದ್ ಭಾಗಶಃ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 7:01 IST
Last Updated 18 ಅಕ್ಟೋಬರ್ 2025, 7:01 IST
ಬಂದ್‌ ವೇಳೆ ಬಿಕೋ ಎನ್ನುತ್ತಿದ್ದ ಕೋಲಾರದ ಎಂ.ಜಿ.ರಸ್ತೆ
ಬಂದ್‌ ವೇಳೆ ಬಿಕೋ ಎನ್ನುತ್ತಿದ್ದ ಕೋಲಾರದ ಎಂ.ಜಿ.ರಸ್ತೆ   

ಕೋಲಾರ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಕಡೆಗೆ ವಕೀಲರೊಬ್ಬರು ಶೂ ಎಸೆದು ಅಪಮಾನ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟಗಳು ಶುಕ್ರವಾರ ಕರೆ ನೀಡಿದ್ದ ಸ್ವಯಂ ಪ್ರೇರಿತ ಬಂದ್‌ ವೇಳೆ ಜನಾಕ್ರೋಶ ವ್ಯಕ್ತವಾಯಿತು.

ನಗರದಲ್ಲಿ ಬಂದ್‌ ಭಾಗಶಃ ಯಶಸ್ವಿಯಾಗಿದ್ದು, ಸಾರಿಗೆ ಸಂಸ್ಥೆ ಬಸ್‌ಗಳು ಹೊರತುಪಡಿಸಿ ಉಳಿದಂತೆ ವಾಹನ ಸಂಚಾರ ಅಭಾದಿತವಾಗಿತ್ತು. ಮಧ್ಯಾಹ್ನದ ವೇಳೆಗೆ ಸಾರಿಗೆ ವಾಹನಗಳು ಎಂದಿನಂತೆ ಸಂಚರಿಸಿದವು.

ದಲಿತ ಸಂಘಟನೆಗಳು, ರೈತ ಸಂಘ, ಸಿಪಿಎಂ, ಕನ್ನಡಪರ ಸಂಘಟನೆ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ಇದರ ಹಿನ್ನೆಲೆಯಲ್ಲಿ ವ್ಯಾಪಕ ಪ್ರಚಾರ ನಡೆಸಿ ಅಂಗಡಿ ಮಾಲೀಕರು, ಹೋಟೆಲ್, ಮಾಂಸದ ಅಂಗಡಿಗಳು, ವರ್ತಕರು... ಹೀಗೆ ವಿವಿಧ ಕ್ಷೇತ್ರಗಳ ಬೆಂಬಲ ಕೋರಿದ್ದರು. ಬಂದ್‌ಗೆ ಕೆಲವರು ಸ್ವಯಂ ಪ್ರೇರಿತವಾಗಿ ಅಂಗಡಿ, ಮಳಿಗೆ ಮುಚ್ಚಿ ಬೆಂಬಲ ಸೂಚಿಸಿದ್ದರು.

ADVERTISEMENT

ಬೆಳ್ಳಂ ಬೆಳಿಗ್ಗೆ ರಸ್ತೆಗೆ ಇಳಿದ ವಿವಿಧ ಸಂಘಟನೆಗಳ ಮುಖಂಡರು, ಕೆಎಸ್‌ಆರ್‌ಟಿಸಿ ಡಿಪೋದಿಂದ ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯದಂತೆ ಗೇಟ್ ಮುಚ್ಚಿ ಪ್ರತಿಭಟನೆ ನಡೆಸಿದರು. ಶೂ ಎಸೆದ ವಕೀಲನ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಸ್ ನಿಲ್ದಾಣ, ಕ್ಲಾಕ್ ಟವರ್, ಡೂಂ ಲೈಟ್ ವೃತ್ತ, ಮೆಕ್ಕೆ ವೃತ್ತ, ಬಂಗಾರಪೇಟೆ ವೃತ್ತ, ಬಸ್ ನಿಲ್ದಾಣದ ವೃತ್ತಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಬಂದ್ ನಡುವೆಯೂ ಅಂಗಡಿಗಳು, ಬಾರ್‌ಗಳು ಕದ್ದುಮುಚ್ಚಿ ವ್ಯಾಪಾರ ನಡೆಸಿದವು.

ಪ್ರತಿಭಟನಕಾರರು ರಸ್ತೆಗಳಲ್ಲಿ ಬೈಕ್ ರ‍್ಯಾಲಿ ನಡೆಸಿ ಅಲ್ಲಲ್ಲಿ ತೆರೆದಿದ್ದ ಹೋಟೆಲ್, ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸಿದರು. ಬಂದ್ ಮಾಹಿತಿಯಿಲ್ಲದೆ ಹೊರಗಡೆಯಿಂದ ನಗರ ಪ್ರವೇಶಿಸಿದ ವಾಹನಗಳಿಗೆ ಪ್ರತಿಭಟನಕಾರರು ಗಾಳಿ ಬಿಚ್ಚಿ ಸಂಚರಿಸದಂತೆ ಎಚ್ಚರಿಕೆ ನೀಡಿದರು.

ಬಂದ್‌ನಿಂದಾಗಿ ಬಸ್ ನಿಲ್ದಾಣ, ಎಂ.ಜಿ ರಸ್ತೆ ಬಿಕೋ ಎನ್ನುತ್ತಿತ್ತು. ಇನ್ನು ದ್ವಿಚಕ್ರ ವಾಹನ, ಆಟೊಗಳು, ಕಾರುಗಳು, ಕೈಗಾರಿಕೆಗಳ ಸಿಬ್ಬಂದಿ ಕರೆದೊಯ್ಯುವ ಬಸ್ಸುಗಳು ಎಂದಿನಂತೆ ಸಂಚಾರಿಸಿದವು. ಆಟೊ ಚಾಲಕರು ಬಂದ್‌ಗೆ ಬೆಂಬಲ ಸೂಚಿಸಿರಲಿಲ್ಲ.

ಸರ್ಕಾರಿ ಶಾಲೆಗಳಿಗೆ ಈಗಾಗಲೇ ರಜೆ ಇದೆ. ಕೆಲವು ಖಾಸಗಿ ಶಾಲೆಗಳು ತೆರೆದಿದ್ದು, ಅವುಗಳನ್ನು ಪ್ರತಿಭಟನಕಾರರು ಮುಚ್ಚಿಸಿ ರಜೆ ಕೊಡಿಸಿದ್ದು ಕಂಡು ಬಂತು. ಉಳಿದಂತೆ ಮುಸ್ಲಿಂ ಸಮುದಾಯದವರು ಶುಕ್ರವಾರ ಕಾರಣ ಅಂಗಡಿಗಳನ್ನು ಮಧ್ಯಾಹ್ನದವರೆಗೆ ಮುಚ್ಚಿದ್ದರು. ಉಳಿದ ಅಂಗಡಿಗಳವರೂ ಬಂದ್ ಮಾಡಿ ಬೆಂಬಲ ಸೂಚಿಸಿದರು.

ಖಾಸಗಿ ಶಾಲೆಗಳು, ಕಾಲೇಜುಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದ ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಉದ್ಯೋಗಿಗಳು ಬಸ್ಸಿಲ್ಲದೆ ಪರದಾಡಿದರು. ಕೆಲವರು ವಾಪಸ್ ಮನೆಗಳಿಗೆ ತೆರಳಿದರು. ಗ್ರಾಮೀಣ ಭಾಗದಿಂದ ನಗರಕ್ಕೆ ಬಂದಿದ್ದವರು ವಿಧಿಯಿಲ್ಲದೆ ಆಟೊ ಮೊರೆ ಹೋದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಭಾದಿತವಾಗಿತ್ತು.

ಸರ್ಕಾರಿ ಕಚೇರಿಗಳಲ್ಲಿ ಕೆಲವನ್ನು ಮುಚ್ಚಿಸಲಾಗಿತ್ತಾದರೂ, ಕೆಲವೆಡೆ ಬಾಗಿಲು ಹಾಕಿಕೊಂಡು ನೌಕರರು ಕೆಲಸ ಮಾಡುತ್ತಿದ್ದರು. ಜಿಲ್ಲಾಡಳಿತ ಭವನದ ಮೇಲೆ ಬಂದ್‌ನ ಯಾವುದೇ ಪ್ರಭಾವ ಕಂಡು ಬರಲಿಲ್ಲ. ಚಿತ್ರಮಂದಿರಗಳಲ್ಲಿ ಬೆಳಗ್ಗಿನ ಪ್ರದರ್ಶನ ರದ್ದು ಮಾಡಲಾಗಿತ್ತು.

ನರಸಾಪುರ, ವೇಮಗಲ್ ಕೈಗಾರಿಕೆಗಳಿಂದ ನಗರಕ್ಕೆ ಪ್ರವೇಶಿಸಿದ ಕಂಪನಿ ವಾಹನಗಳು ಕಾರ್ಮಿಕರನ್ನು ಇಳಿಸಿದ ನಂತರ ಮತ್ತೆ ಹೋಗದಂತೆ ತಡೆದು ನಂತರ ಬಿಟ್ಟು ಕಳುಹಿಸಿದರು.

ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ, ಪ್ರತಿಭಟನಕಾರರು ಮನೆಗಳಿಗೆ ತೆರಳುತ್ತಿದ್ದಂತೆ ಸಂಜೆ 4 ಗಂಟೆ ನಂತರ ಗ್ರಾಮೀಣ ಭಾಗ, ಹೊರ ರಾಜ್ಯ, ಹೊರ ಜಿಲ್ಲೆಗಳಿಗೆ ಬಸ್‌ಗಳ ಸಂಚಾರ ಆರಂಭಿಸಲಾಯಿತು.

ಬೈಕ್ ರ‍್ಯಾಲಿಯಲ್ಲಿ ಸಿಪಿಎಂ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ದಸಂಸ ಮುಖಂಡ ಟಿ.ವಿಜಯಕುಮಾರ್, ಭೀಮ ಸೇನೆ ರಾಜ್ಯ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ಗಮನ ಸಂಘಟನೆಯ ಶಾಂತಮ್ಮ, ನಗರಸಭೆ ಮಾಜಿ ಸದಸ್ಯ ಸಲಾವುದ್ದೀನ್ ಬಾಬು, ಅಲ್ಪಸಂಖ್ಯಾತರ ಮುಖಂಡ ಅನ್ವರ್ ಪಾಷ, ಪಿ.ವಿ.ಸಿ. ಕೃಷ್ಣಪ್ಪ.ಎ. ವರದೇನಹಳ್ಳಿ ವೆಂಕಟೇಶ್, ಹಾರೋಹಳ್ಳಿ ರವಿ, ರಮಣ, ಸಿ.ವಿ.ನಾಗರಾಜ್‌, ಶ್ರೀರಂಗ, ಸಂಗಸಂದ್ರ ವಿಜಯ ಕುಮಾರ್, ಸುಬ್ರಮಣಿ, ಈನೆಲ ಈಜಲ ವೆಂಕಟಚಲಪತಿ ಇದ್ದರು.

ಪ್ರತಿಭಟನಕಾರರು ಕೋಲಾರ ಕೆಎಸ್‌ಆರ್‌ಟಿಸಿ ಡಿಪೊ ಬಂದ್‌ ಪ್ರತಿಭಟನೆ ನಡೆಸಿದರು
ಬಂದ್‌ ವೇಳೆ ಕೋಲಾರ ಬಸ್‌ ನಿಲ್ದಾಣ ಖಾಲಿ ಖಾಲಿ
ಸಾರಿಗೆ ಬಸ್ಸಿಲ್ಲದೇ ಲಗೇಜಿನೊಂದಿಗೆ ಹಿಂದಿರುಗಿದ ಜನರು
ಬಂದ್‌ ವೇಳೆ ಬಿಗಿ ಬಂದೋಬಸ್ತ್‌ ಕಲ್ಪಿಸಿದ್ದ ಪೊಲೀಸರು
ಆಟೊ ಭರ್ತಿ ಪ್ರಯಾಣಿಸಲು ಪರದಾಟ

ಸಿಜೆಐ ಮೇಲೆ ಶೂ ಎಸೆತ ಖಂಡಿಸಿ ಕರೆ ನೀಡಿದ್ದ ಬಂದ್‌ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟಗಳಿಂದ ಪ್ರತಿಭಟನೆ ಸಾರಿಗೆ ಬಸ್ಸಿಲ್ಲದೆ ಪರದಾಟ, ಕೆಲವೆಡೆ ಜನಜೀವನ ಅಸ್ತವ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.