
ಮಾಲೂರು: ನಗರದ ಕಸ ವಿಲೇವಾರಿ ಘಟಕ ಕಾರ್ಯ ನಿರ್ವಹಿಸುತ್ತಿದ್ದರೂ ಕಸದ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಹಾಗಾಗಿ ನಗರದ ರಸ್ತೆಗಳಲ್ಲಿ ಕಸದ ರಾಶಿ ತುಂಬಿ ದುರ್ನಾತ ಬೀರುತ್ತಿದೆ.
ಸಮರ್ಪಕ ಕಸ ವಿಲೇವಾರಿಯಾಗದ ಹಿನ್ನೆಲೆ ನಗರದ ಹಲವು ರಸ್ತೆಗಳ ಬದಿಯಲ್ಲಿ ಕಸದ ರಾಶಿ ರಾರಾಜಿಸುತ್ತಿವೆ. ಇದರಿಂದ ನಾಗರಿಕರು ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆ ಹಾರೋಹಳ್ಳಿ ಗ್ರಾಮದ ಬಳಿ ಎರಡು ಎಕರೆ ವಿಸ್ತೀರ್ಣದಲ್ಲಿ ಆರಂಭವಾಗಿದ್ದ ಕಸ ವಿಲೇವಾರಿ ಘಟಕ ಗ್ರಾಮಸ್ಥರ ವಿರೋಧದಿಂದ ಸ್ಥಗಿತಗೊಂಡಿದೆ. ನಂತರ ನಗರದ ಸುತ್ತಮುತ್ತಲಿರುವ ಹಾಳು ಬಾವಿ, ಕಲ್ಲು ಕ್ವಾರೆಗಳಲ್ಲಿ ಕಸವನ್ನು ತುಂಬಿಸಲಾಗುತ್ತಿತ್ತು. 2024 ಆಗಸ್ಟ್‌ನಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಪುರಸಭೆ ಮಾಲೂರು ವತಿಯಿಂದ ತಾಲ್ಲೂಕಿನ ದೊಡ್ಡ ಇಗ್ಗಲೂರು ಗ್ರಾಮದ ಬಳಿ 5 ಎಕರೆ ವಿಸ್ತೀರ್ಣದಲ್ಲಿ ₹6 ಕೊಟಿ ವೆಚ್ಚದಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿ ಮತ್ತು ನಿರ್ವಹಣಾ ಘಟಕ ಆರಂಭವಾಯಿತು.
ಘಟಕ ಆರಂಭವಾಗಿ ಅನೇಕ ತಿಂಗಳಾದರೂ ಕಸ ವಿಲೇವಾರಿ ಸಮಪರ್ಕವಾಗಿ ನಡೆಯದ ಹಿನ್ನೆಲೆ ಕಸದ ಸಮಸ್ಯೆ ನಿವಾರಣೆಯಾಯಿತು ಎಂಬ ಭರವಸೆಯಲ್ಲಿದ್ದ ನಗರದ ನಿವಾಸಿಗಳಿಗೆ ಮತ್ತೆ ನಿರಾಸೆಯಾಗಿದೆ.
ಮಾಲೂರಿನಲ್ಲಿ ಅನೇಕ ಕೈಗಾರಿಕೆಗಳು ತಲೆ ಎತ್ತಿದ್ದು, ಸಾವಿರಾರು ಮಂದಿ ನಗರದಲ್ಲಿ ವಾಸವಿದ್ದಾರೆ. ಆದರೆ, ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಸ ವಿಲೇವಾರಿ ಸಮರ್ಪಕವಾಗಿ ನಡೆಯದ ಹಿನ್ನೆಲೆ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಕಸ ಸಂಗ್ರಹಣೆಗೆ ಸಮರ್ಪಕ ವಾಹನವಿಲ್ಲ: ನಗರದ 31 ವಾರ್ಡ್‌ಗಳಲ್ಲಿ ಕಸ ಸಂಗ್ರಹಣೆಗೆ ಸಮರ್ಪಕ ವಾಹನ ಸೌಲಭ್ಯವಿಲ್ಲ. ಹಾಗಾಗಿ ಪ್ರತಿ ವಾರ್ಡ್‌ಗಳಲ್ಲಿ ಸಂಗ್ರಹವಾಗುವ ಕಸವನ್ನು ಬಡಾವಣೆಗಳಲ್ಲೇ ಶೇಖರಿಸಿ, ಎರಡ್ಮೂರು ದಿನಗಳ ನಂತರ ಟ್ಯಾಕ್ಟರ್ ಮೂಲಕ ಕಸವನ್ನು ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತದೆ.
ಪ್ರಸ್ತುತ ನಗರಸಭೆಯಲ್ಲಿ 15 ಆಟೊಗಳಿದ್ದು, ಪ್ರತಿ ದಿನ ಪ್ರತಿ ವಾರ್ಡ್‌ನ ಮನೆ ಬಳಿ ಕಸ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಸ್ವಚ್ಛತಾ ಕಾರ್ಯಕ್ಕಾಗಿ 87 ಪೌರ ಕಾರ್ಮಿಕರು, ಚಾಲಕರು ಮತ್ತು ಸಹಾಯಕರು ಸೇರಿದಂತೆ 20 ಹೊರಗುತ್ತಿಗೆ ನೌಕರರಿದ್ದಾರೆ. ಸರ್ಕಾರದ ನಿಯಮದಂತೆ 700 ಜನಸಂಖ್ಯೆಗೆ ಒಬ್ಬ ಪೌರ ಕಾರ್ಮಿಕರನ್ನು ನಿಯೋಜಿಸಬೇಕು. ಆದರೆ, ನಗರದಲ್ಲಿ ಪೌರ ಕಾರ್ಮಿಕರ ಕೊರತೆಯೂ ಇದೆ. ಹಾಗಾಗಿ 16 ತಿಂಗಳ ಹಿಂದೆ ಘಟಕಕ್ಕೆ ಚಾಲನೆ ಸಿಕ್ಕರೂ, ಇನ್ನೂ ಕಸದ ಸಮಸ್ಯೆ ನಿವಾರಣೆಯಾಗಿಲ್ಲ. ಹಾಗಾಗಿ ಕಸದ ರಾಶಿಯೂ ಕರಗುತ್ತಿಲ್ಲ.
ಪ್ರತಿ ದಿನ 25 ರಿಂದ 30 ಟನ್ ಕಸ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಹಸಿ ಕಸ 15 ರಿಂದ 16 ಟನ್ ಇರುತ್ತದೆ. ಕಸ ವಿಲೇವಾರಿ ಯಂತ್ರಕ್ಕೆ ಹಸಿ ಕಸದಲ್ಲಿನ ತೇವಾಂಶ ತೆಗೆದು ಹಾಕಬೇಕಿರುವುದರಿಂದ ವಿಲೇವಾರಿ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ ದುರ್ವಾಸನೆ ಬೀರುತ್ತಾ ಸುತ್ತಮುತ್ತಲಿನ ಪರಿಸರ ನಾಶವಾಗುತ್ತಿವೆ ಎಂಬುದು ಗ್ರಾಮಸ್ಥರ ಅಳಲಾಗಿದೆ.
ನಗರದ ಸ್ವಚ್ಛತೆಗೆ ಸಾರ್ವಜನಿಕರ ಸ್ವಚ್ಛತೆ ಅಗತ್ಯ
ನಗರಸಭೆಯಿಂದ ಪ್ರತಿ ವಾರ್ಡ್‌ಗೂ ಕಸದ ವಾಹನ ಕಳುಹಿಸುತ್ತಿದ್ದೇವೆ. ಆದರೆ ಕಸವನ್ನು ಆಟೊಗೆ ಹಾಕದೆ ರಸ್ತೆ ಬದಿಯಲ್ಲಿ ಕಸ ಹಾಕುತ್ತಿದ್ದಾರೆ. ಮಹಡಿಯಲ್ಲಿ ಇರುವವರು ಮೇಲಿಂದ ರಸ್ತೆ ಬದಿಗೆ ಕಸ ಸುರಿಯುತ್ತಾರೆ. ಹಾಗಾಗಿ ನಗರದಲ್ಲಿ ಕಸದ ಸಮಸ್ಯೆಯೂ ಹೆಚ್ಚಾಗಿದೆ. ಪ್ರತಿಯೊಬ್ಬರೂ ಮನೆ ಸ್ವಚ್ಛಗೊಳಿಸಿದಂತೆ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕಾರ್ಮಿಕರ ಸಂಖ್ಯೆ ಏರಿಕೆಯಾಗುತ್ತದೆ. ಇದರಿಂದ ಕಸ ವಿಲೇವಾರಿ ಸಮಸ್ಯೆ ಸರಿದೂಗಿಸಲು ಸಾಧ್ಯವಾಗುತ್ತದೆ - ರಾಜಣ್ಣ, ನಗರಸಭೆ ಆರೋಗ್ಯಾಧಿಕಾರಿ
ಕಾರ್ಮಿಕರ ಕೊರತೆ
ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಾಹಣಾ ಘಟಕದಲ್ಲಿ ಐದು ಮಂದಿ ಮಾತ್ರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು ಆಮೆಗತಿಯಲ್ಲಿ ವಿಲೇವಾರಿ ಸಾಗುತ್ತಿದೆ. ಘಟಕದಲ್ಲಿ ಕಸದ ರಾಶಿ ಬಿದ್ದಿದೆ. ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿ ದಿನ ಬರುವ ಕಸವನ್ನು ವಿಲೇವಾರಿ ಮಾಡಲು ಕಾರ್ಮಿಕರ ಕೊರತೆ ಇದೆ. ಕಸ ವಿಲೇವಾರಿ ಮಾಡುವಾಗ ನಮ್ಮ ಆರೋಗ್ಯ ಕೆಡುತ್ತದೆ. ತುಂಬಾ ಜಾಗರೂಕವಾಗಿ ಮಾಡಬೇಕು. ಸ್ಥಳದ ಕೊರತೆಯಿಂದ ಶೀಘ್ರ ಕಸ ವಿಲೇವಾರಿಯಾಗುತ್ತಿಲ್ಲ - ರಾಮಚಂದ್ರ ಘನ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಾಹಣಾ ಘಟಕದ ಕಾರ್ಮಿಕ
ಮನೆಗಳ ಬಳಿ ನಗರಸಭೆಯ ವಾಹನ ಸರಿಯಾದ ಸಮಯಕ್ಕೆ ಬರುವುದಿಲ್ಲ. ಕೆಲಸಕ್ಕೆ ಹೋಗುವವರು ಮನೆಯಲ್ಲಿ ಕಸ ಶೇಖರಿಸಿ ನಂತರ ಅವರೇ ಕಸ ಹಾಕುವಂತಾಗಿದೆ.ಗಾಯತ್ರಿ, ಮಾಲೂರು ನಗರದ ರೈಲ್ವೆ ಫಿಡರ್ ಬಡಾವಣೆ ನಿವಾಸಿ
ಪೌರ ಕಾರ್ಮಿಕರ ಕೊರಯಿಂದ ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ. ರಸ್ತೆ ಬದಿಗಳಲ್ಲಿ ವಾರಗಟ್ಟಲೇ ಕಸದ ರಾಶಿಗಳು ಬಿದ್ದಿರುತ್ತವೆ. ಇದರಿಂದ ದುರ್ವಾಸನೆ ಬೀರಿ ಸಾರ್ವಜನಿಕರು ಓಡಾಡಲು ಕಷ್ಟವಾಗುತ್ತಿದೆ.ಶ್ರೀನಿವಾಸ್, ಮಾರುತಿ ಬಡಾವಣೆ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.