ADVERTISEMENT

ಶ್ರೀನಿವಾಸಪುರದ ರಸ್ತೆಗಳ ಬದಿಯಲ್ಲಿ ಕೊಳೆಯುತ್ತಿರುವ ಮಾವಿನ ರಾಶಿ

ಆರ್.ಚೌಡರೆಡ್ಡಿ
Published 18 ಜೂನ್ 2023, 23:35 IST
Last Updated 18 ಜೂನ್ 2023, 23:35 IST
ಶ್ರೀನಿವಾಸಪುರದ ಇಂದಿರಾ ನಗರದ ರಸ್ತೆಯೊಂದರ ಮೇಲೆ ಎಸೆಯಲಾಗಿರುವ ಮಾವಿನ ವಾಟೆ
ಶ್ರೀನಿವಾಸಪುರದ ಇಂದಿರಾ ನಗರದ ರಸ್ತೆಯೊಂದರ ಮೇಲೆ ಎಸೆಯಲಾಗಿರುವ ಮಾವಿನ ವಾಟೆ   

ಶ್ರೀನಿವಾಸಪುರ: ಪಟ್ಟಣದ ಮಾವು ಮಾರುಕಟ್ಟೆ ಸುತ್ತ ಆವರಿಸಿಕೊಂಡಿರುವ ಇಂದಿರಾ ನಗರ, ಕೊಳೆತ ಮಾವು ಹಾಗೂ ಕೊಳೆ ತುಂಬಿದ ಚರಂಡಿಗಳಿಂದ ಕೊಳೆತು ನಾರುತ್ತಿದೆ.

ಹೌದು, ಇಂದಿರಾ ನಗರದ ಕಡೆ ಮುಖ ಮಾಡಿದರೆ ರಸ್ತೆ ಬದಿಯಲ್ಲಿ ಕೊಳೆಯುತ್ತಿರುವ ಮಾವಿನ ರಾಶಿಗಳ ದರ್ಶನವಾಗುತ್ತದೆ. ದುರ್ನಾತ ಸಹಿಸಲಾಗದೆ ಮೂಗು ಮುಚ್ಚಿಕೊಂಡು ಮುಂದೆ ಸಾಗಿದರೆ ಕಸಕಡ್ಡಿ ತುಂಬಿರುವ ಹಾಗೂ ಕೊಳೆತು ನಾರುತ್ತಿರುವ ಚರಂಡಿಗಳು ಸ್ವಾಗತಿಸುತ್ತವೆ.

ಇಂದಿರಾ ನಗರದ ಹೃದಯ ಭಾಗದಲ್ಲಿ ಏಷ್ಯಾದಲ್ಲಿಯೇ ಅತಿ ದೊಡ್ಡದೆಂದು ಹೇಳಲಾದ ಮಾವಿನ ಮಾರುಕಟ್ಟೆ ಇದೆ. ಈಗ ಮಾವಿನ ಸುಗ್ಗಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ. ಪ್ರತಿ ದಿನ ಸಾವಿರಾರು ಟನ್ ಮಾವು ಮಾರುಕಟ್ಟೆಗೆ ಬರುತ್ತದೆ. ಹಾಗೆ ತರಲಾದ ಮಾವಿನ ಪೈಕಿ ಶೇ 25ರಷ್ಟು ಕೊಳೆ ರೋಗಕ್ಕೆ ತುತ್ತಾಗಿರುತ್ತದೆ. ಅಂಥ ಮಾವು ಮಂಡಿಗಳಲ್ಲಿ ತಿರಸ್ಕರಿಸಲ್ಪಡುತ್ತದೆ. ಉಚಿತವಾಗಿ ದೊರೆಯುವ ಈ ಮಚ್ಚೆ ಮಾವನ್ನು ಇಂದಿರಾ ನಗರದ ನಿವಾಸಿಗಳು ಕೊಂಡೊಯ್ದು, ಹೋಳು ಮಾಡಿ ಒಣಗಿಸುತ್ತಾರೆ. ಆಮ್ ಚೂರ್ ತಯಾರಕರಿಗೆ ಮಾರಿ ಹಣ ಸಂಪಾದಿಸುತ್ತಾರೆ.

ADVERTISEMENT

ಆಮ್ ಚೂರ್ ಹೋಳು ಉತ್ಪಾದನೆ ಇಂದಿರಾ ನಗರದಲ್ಲಿ ಗೃಹೋದ್ಯಮದಂತೆ ನಡೆಯುತ್ತಿದೆ. ಹಾಗಾಗಿ ಅಗಾಧ ಪ್ರಮಾಣದ ಮಾವಿನ ಬೀಜ ಮತ್ತು ತ್ಯಾಜ್ಯ ಬೀಳುತ್ತದೆ. ಅದನ್ನು ಹೊರಗೆ ಸಾಗಿಸುವ ಗೋಜಿಗೆ ಹೋಗದೆ ರಸ್ತೆಗಳ ಮೇಲೆ ಹಾಗೂ ಚರಂಡಿಗಳಲ್ಲಿ ಸುರಿಯಲಾಗುತ್ತಿದೆ. ಹಾಗೆ ಸುರಿದ ಮಾವಿನ ತ್ಯಾಜ್ಯ ಎಲ್ಲೆಂದರಲ್ಲಿ ಕೊಳೆತು ಆರೋಗ್ಯ ಸಮಸ್ಯೆ ತಂದೊಡ್ಡಿದೆ. ಅದರ ಜತೆಗೆ ಕಂಡಿಗಳಲ್ಲಿ ಕೊಳೆಯುವ ಕಾಯಿ ತೆಗೆದು ರಸ್ತೆ ಬದಿಯಲ್ಲಿ ಸುರಿಯಲಾಗಿದೆ.

ಕೊಳೆತ ಮಾವು, ಮಾವಿನ ವಾಟೆ ಚರಂಡಿಗಳಲ್ಲಿ ನೀರು ಹರಿಯದಂತೆ ತಡೆದಿದೆ. ಬಹುತೇಕ ಚರಂಡಿಗಳು ಕೊಳೆಯುತ್ತಿದ್ದು, ಸೊಳ್ಳೆಗಳ ಆವಾಸವಾಗಿ ಪರಿಣಮಿಸಿವೆ. ಕೊಳೆಯುತ್ತಿರುವ ಮಾವಿನ ರಾಶಿಗಳಲ್ಲಿ ನೊಣಗಳ ಉತ್ಪಾದನೆಯಾಗುತ್ತಿದ್ದು, ಜನ ವಸತಿ ಪ್ರದೇಶವನ್ನು ಆಕ್ರಮಿಸಿಕೊಂಡಿವೆ. ನೊಣಗಳ ಹಾವಳಿಯಿಂದಾಗಿ ನಿವಾಸಿಗಳು ನೆಮ್ಮದಿಯಿಂದ ತಟ್ಟೆಯ ಮುಂದೆ ಕುಳಿತು ಊಟ ಮಾಡಲು ಸಾಧ್ಯವಾಗುತ್ತಿಲ್ಲ.

ಎಪಿಎಂಸಿ ಮಾರುಕಟ್ಟೆ ಪ್ರಾಂಗಣಕ್ಕೆ ಭದ್ರವಾದ ಕಾಂಪೌಂಡ್ ಇಲ್ಲದ ಪರಿಣಾಮವಾಗಿ, ಮಂಡಿ ಕಾರ್ಮಿಕರು ಸಮೀಪದ ರಸ್ತೆಗಳನ್ನು ಬಹಿರ್ದೆಸೆಗೆ ಬಳಸುವುದುಂಟು. ಪ್ರಾಂಗಣದಲ್ಲಿ ಮೂಲ ಸೌಕರ್ಯ ಕೊರತೆಯಿಂದಾಗಿ ಅಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಉಪದ್ರವದಿಂದಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಿದೆ.
‘ಮಾವಿನ ಮಾರುಕಟ್ಟೆಯಿಂದಾಗಿ ನಾವು ಪ್ರತಿ ವರ್ಷ ಅನಾರೋಗ್ಯಕರ ಪರಿಸರದಲ್ಲಿ ಜೀವಿಸಬೇಕಾಗಿ ಬಂದಿದೆ. ಪುರಸಭೆಯಿಂದ ಪರಿಸ್ಥಿತಿ ಸುಧಾರಣೆಗೆ ಪೂರಕವಾದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಮ್ಮನ್ನು ದೇವರೇ ಕಾಪಾಡಬೇಕು’ ಎಂಬುದು ನಿವಾಸಿಗಳ ಅಳಲು.

ನೀರು ಹರಿಯದೆ ಕೊಳೆತು ನಾರುತ್ತಿರುವ ಚರಂಡಿ
ಕಸ ಕಡ್ಡಿ ತುಂಬಿರುವ ಚರಂಡಿ
ರಸ್ತೆ ಬದಿಯಲ್ಲಿ ದುವರ್ಾಸನೆ ಬೀರುತ್ತಿರುವ ಕೊಳೆತ ಮಾವಿನ ರಾಶಿ

ನೊಣಗಳ ಹಾವಳಿ ಹೆಚ್ಚಿದೆ

ಕೊಳೆತ ಮಾವು ಇಂದಿರಾ ನಗರದ ನಿವಾಸಿಗಳಿಗೆ ಶಾಪವಾಗಿ ಪರಿಣಮಿಸಿದೆ. ಸ್ವಚ್ಛತೆ ಕೊರತೆಯಿಂದಾಗಿ ಸೊಳ್ಳೆ ಹಾಗೂ ನೊಣಗಳ ಹಾವಳಿ ಹೆಚ್ಚಿದೆ. ಮನೆಯಲ್ಲಿನ ಆಹಾರ ಪದಾರ್ಥಗಳ ಮೇಲೆ ನೊಣ ಕೂರುವುದರಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಪುರಸಭೆ ಅಧಿಕಾರಿಗಳು ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಾರೆಪ್ಪ ನಿವಾಸಿ ಪುರಸಭೆ ಗಮನ ಹರಿಸುತ್ತಿಲ್ಲ ಇಂದಿರಾ ನಗರದ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದ ಪರಿಣಾಮವಾಗಿ ದುರ್ನಾತ ಬೀರುತ್ತಿವೆ. ಮೋರಿಗಳಲ್ಲಿ ಮಾವಿನ ಬೀಜ ಹಾಗೂ ಕೊಳೆತ ಮಾವು ತುಂಬಿಕೊಂಡಿದೆ. ನೀರು ನಿಂತಲ್ಲೇ ನಿಂತು ಸೊಳ್ಳೆಗಳ ಉತ್ಪಾದನೆಯಾಗುತ್ತಿದೆ. ನಿವಾಸಿಗಳಿಗೆ ಜ್ವರ ಬಾಧೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇಷ್ಟಾದರೂ ಪುರಸಭೆ ಗಮನ ಹರಿಸುತ್ತಿಲ್ಲ. ಮಹಮದ್ ಮಜರ್ ಪಾಷ ನಿವಾಸಿ ಸ್ವಚ್ಛತೆ ಪಾಲನೆ ಅರಿವು ಇಂದಿರಾ ನಗರದಲ್ಲಿ ಉಂಟಾಗಿರುವ ಪರಿಸರ ಮಾಲಿನ್ಯಕ್ಕೆ ಅಲ್ಲಿನ ನಿವಾಸಿಗಳೇ ಕಾರಣ. ಆಮ್‌ಚೂರ್ ತಯಾರಿಕೆಗೆ ಮಾವಿನ ತಿರುಳು ಕತ್ತರಿಸಿದ ಬಳಿಕ ಉಳಿಯುವ ವಾಟೆಯನ್ನು ಹೊರಗೆ ಸಾಗಿಸದೆ ಮನೆ ಮುಂದಿನ ಚರಂಡಿ ಹಾಗೂ ರಸ್ತೆಗೆ ಎಸೆಯಲಾಗುತ್ತಿದೆ. ನಿವಾಸಿಗಳಿಗೆ ಸ್ವಚ್ಛತೆ ಪಾಲನೆ ಕುರಿತು ಅರಿವು ಮೂಡಿಸಲಾಗುವುದು. ಪುರಸಭೆಯಿಂದ ರಸ್ತೆ ಚರಂಡಿ ಸ್ವಚ್ಛಗೊಳಿಸಲಾಗುವುದು. ವೈ.ಎನ್.ಸತ್ಯನಾರಾಯಣ ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.