ADVERTISEMENT

ಸುರಿವ ಮಳೆಯಲ್ಲಿ ಶಾಸಕಿ ರೂಪಕಲಾ ಪ್ರತಿಭಟನೆ

ಕೆಜಿಎಫ್‌ನ ಅಶೋಕನಗರ ರಸ್ತೆ ವಿಸ್ತರಣೆ ಕಾಮಗಾರಿ ವಿಳಂಬ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 14:56 IST
Last Updated 19 ಸೆಪ್ಟೆಂಬರ್ 2020, 14:56 IST
ಕೆಜಿಎಫ್‌ನ ಅಶೋಕನಗರ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ಕಾಂಗ್ರೆಸ್‌ ಶಾಸಕಿ ಎಂ.ರೂಪಕಲಾ ಕೋಲಾರದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಮಳೆ ನಡುವೆಯೂ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಕೆಜಿಎಫ್‌ನ ಅಶೋಕನಗರ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ಕಾಂಗ್ರೆಸ್‌ ಶಾಸಕಿ ಎಂ.ರೂಪಕಲಾ ಕೋಲಾರದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಮಳೆ ನಡುವೆಯೂ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.   

ಕೋಲಾರ: ಜಿಲ್ಲೆಯ ಕೆಜಿಎಫ್‌ನ ಅಶೋಕನಗರ ರಸ್ತೆ ವಿಸ್ತರಣೆ ಕಾಮಗಾರಿ ವಿಳಂಬ ಖಂಡಿಸಿ ಕಾಂಗ್ರೆಸ್‌ ಶಾಸಕಿ ಎಂ.ರೂಪಕಲಾ ಇಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಮಳೆಯನ್ನೂ ಲೆಕ್ಕಿಸದೆ ಏಕಾಂಗಿಯಾಗಿ ಸತತ ಮೂರ್ನಾಲ್ಕು ತಾಸು ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 11 ಗಂಟೆ ಸುಮಾರಿಗೆ ಹೋರಾಟ ಆರಂಭಿಸಿದ ರೂಪಕಲಾ ಅವರು ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ಆದರೆ, ಜಿಲ್ಲಾಧಿಕಾರಿ ಮಧ್ಯಾಹ್ನದವರೆಗೂ ಕಚೇರಿಗೆ ಬರಲಿಲ್ಲ. ಆದರೂ ಪಟ್ಟು ಸಡಿಲಿಸದ ರೂಪಕಲಾ ಅವರು ಮಳೆಯಲ್ಲೂ ಹೋರಾಟ ಮುಂದುವರಿಸಿದರು.

‘ಅಶೋಕನಗರ ರಸ್ತೆ ವಿಸ್ತರಣೆಗೆ 2014ರಲ್ಲೇ ಅನುದಾನ ಬಿಡುಗಡೆಯಾಗಿ ಸ್ವಲ್ಪ ಕಾಮಗಾರಿ ನಡೆದಿದೆ. ಆದರೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬಾಕಿ ಕಾಮಗಾರಿ ಪೂರ್ಣಗೊಳಿಸಲು ವಿಳಂಬ ಮಾಡುತ್ತಿದ್ದಾರೆ. ಇದರ ಹಿಂದೆ ಕೆಲ ಪ್ರಭಾವಿಗಳ ಒತ್ತಡವಿದೆ’ ಎಂದು ರೂಪಕಲಾ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಎಂ.ಜಿ ವೃತ್ತದಿಂದ ಸ್ಕೂಲ್ ಆಫ್ ಮೈನ್ಸ್‌ವರೆಗೆ 1.82 ಕಿ.ಮೀ ಜೋಡಿ ರಸ್ತೆ ನಿರ್ಮಾಣಕ್ಕೆ ಸರ್ಕಾರ ₹ 9.50 ಕೋಟಿ ಮಂಜೂರು ಮಾಡಿದೆ. ಸ್ಕೂಲ್‌ ಆಫ್‌ ಮೈನ್ಸ್‌ನಿಂದ ಅಶೋಕನಗರ ಗೇಟ್‌ವರೆಗೆ ಕಾಮಗಾರಿ ನಡೆದಿದೆ. 200 ಮೀಟರ್‌ ಕಾಮಗಾರಿ ಬಾಕಿಯಿದ್ದು, ಸಾರ್ವಜನಿಕರ ಓಡಾಟಕ್ಕೆ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ’ ಎಂದು ಹೇಳಿದರು.

ಕೈಗೊಂಬೆ: ‘ಲೋಕೋಪಯೋಗಿ ಇಲಾಖೆ ಕಚೇರಿ ಎದುರುವ ಕ್ಷೇತ್ರದ ಜನರ ಜತೆ 6 ತಿಂಗಳ ಹಿಂದೆ ಪ್ರತಿಭಟನೆ ಮಾಡಿದ್ದೆ. ಆದರೂ ಅಧಿಕಾರಿಗಳು ಕಾಮಗಾರಿ ಆರಂಭಿಸಿಲ್ಲ. ಜಿಲ್ಲಾಡಳಿತ ಜನಪರವಾಗಿ ಕೆಲಸ ಮಾಡುವುದು ಬಿಟ್ಟು ರಾಜಕಾರಣಿಗಳು ಹಾಗೂ ಪ್ರಭಾವಿಗಳ ಪರ ಕೆಲಸ ಮಾಡುತ್ತಿದೆ. ಅಧಿಕಾರಿಗಳು ಕೆಲ ರಾಜಕಾರಣಿಗಳ ಕೈಗೊಂಬೆಯಾಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಶೋಕ ರಸ್ತೆ ವಿಸ್ತರಣೆ ಕಾಮಗಾರಿಗೆ ಅನುಮೋದನೆ ಸಿಕ್ಕಿದ್ದರೂ ಜಿಲ್ಲಾಡಳಿತದ ನಿರ್ಲಕ್ಷ್ಯದ ಕಾರಣಕ್ಕೆ 6 ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಜಿಲ್ಲಾಡಳಿತದ ಬೇಜವಾಬ್ದಾರಿ ಖಂಡಿಸಿ ವಿಧಾನಸಭೆ ಅಧಿವೇಶನಕ್ಕೆ ಗೈರಾಗಲು ನಿರ್ಧರಿಸಿದ್ದೇನೆ’ ಎಂದು ಎಚ್ಚರಿಕೆ ನೀಡಿದರು.

‘ಕಾಮಗಾರಿ ವಿಚಾರವಾಗಿ ಕ್ಷೇತ್ರದ ಜನ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದೇನೆ. ಜಿಲ್ಲಾಧಿಕಾರಿಗೆ ಸಮಸ್ಯೆಯ ಗಂಭೀರತೆ ತಿಳಿಸಲು ಈ ಪ್ರಯತ್ನ ಮಾಡಿದ್ದೇನೆ. ಕಾಮಗಾರಿ ಆರಂಭದ ವಿಚಾರದಲ್ಲಿ ಜಿಲ್ಲಾಡಳಿತ ಮೊಂಡುತನ ಮುಂದುವರಿಸಿದರೆ ಮುಂದಿನ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆ’ ಎಂದು ಗುಡುಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.