ADVERTISEMENT

ಕೋಲಾರ: ರೈತರ ನೆರವಿಗೆ ಧಾವಿಸಿದ ಸಂಸದ ಎಸ್‌.ಮುನಿಸ್ವಾಮಿ, 6 ಟನ್ ತರಕಾರಿ ಖರೀದಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 19:30 IST
Last Updated 13 ಏಪ್ರಿಲ್ 2020, 19:30 IST
ಸಂಸದ ಎಸ್‌.ಮುನಿಸ್ವಾಮಿ ಕೋಲಾರ ಎಪಿಎಂಸಿಯಲ್ಲಿ ಸೋಮವಾರ ತರಕಾರಿ ಖರೀದಿಸಿದರು.
ಸಂಸದ ಎಸ್‌.ಮುನಿಸ್ವಾಮಿ ಕೋಲಾರ ಎಪಿಎಂಸಿಯಲ್ಲಿ ಸೋಮವಾರ ತರಕಾರಿ ಖರೀದಿಸಿದರು.   

ಕೋಲಾರ: ಕೊರೊನಾ ಸೋಂಕಿನ ಕಾರಣಕ್ಕೆ ದಿಗ್ಬಂಧನ ಜಾರಿಯಾಗಿರುವ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ರೈತರ ನೆರವಿಗೆ ಧಾವಿಸಿರುವ ಸಂಸದ ಎಸ್‌.ಮುನಿಸ್ವಾಮಿ ಅವರು ಇಲ್ಲಿನ ಎಪಿಎಂಸಿಯಲ್ಲಿ ಸೋಮವಾರ ಸುಮಾರು 6 ಟನ್‌ ತರಕಾರಿ ಖರೀದಿಸಿದರು.

ದಿಗ್ಬಂಧನದ ಕಾರಣಕ್ಕೆ ಸರಕು ಸಾಗಣೆ ಸೇವೆಯಲ್ಲಿ ವ್ಯತ್ಯಯವಾಗಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ದಿಢೀರ್‌ ಕುಸಿದಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನ್ನದಾತರ ಕಷ್ಟಕ್ಕೆ ಸ್ಪಂದಿಸುತ್ತಿರುವ ಸಂಸದ ಮುನಿಸ್ವಾಮಿ ಅವರು ಜಿಲ್ಲೆಯ ವಿವಿಧೆಡೆ ರೈತರಿಂದ ನೇರವಾಗಿ ತರಕಾರಿ ಖರೀದಿ ಮಾಡಿ ಬಡ ಜನರಿಗೆ ಹಂಚುತ್ತಿದ್ದಾರೆ.

ಎಪಿಎಂಸಿಯಲ್ಲಿ ಬೆಳಿಗ್ಗೆ ರೈತರನ್ನು ಭೇಟಿಯಾಗಿ ಅಹವಾಲು ಆಲಿಸಿದ ಸಂಸದರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಮಾರುಕಟ್ಟೆಯಲ್ಲಿ ಮಾರಾಟವಾಗದೆ ಉಳಿದಿದ್ದ ಕ್ಯಾಪ್ಸಿಕಂ, ಬೀಟ್ರೂಟ್, ಮೂಲಂಗಿ, ಹೂಕೋಸು, ಬದನೆಕಾಯಿ ಸೇರಿದಂತೆ ವಿವಿಧ ತರಕಾರಿಗಳನ್ನು ರೈತರಿಗೂ ನಷ್ಟವಾಗದಂತೆ ಯೋಗ್ಯ ಬೆಲೆಗೆ ಖರೀದಿಸಿ ಸ್ಥಳದಲ್ಲೇ ಹಣ ನೀಡಿದರು.

ADVERTISEMENT

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ‘ಕೊರೊನಾ ಸೋಂಕು ನಿಯಂತ್ರಿಸುವ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ದೇಶದೆಲ್ಲೆಡೆ ದಿಗ್ಬಂಧನ ಜಾರಿಗೊಳಿಸಿದೆ. ಇದರಿಂದ ಸರಕು ಸಾಗಣೆ ಸೇವೆಯಲ್ಲಿ ವ್ಯತ್ಯಯವಾಗಿ ತರಕಾರಿಗಳಿಗೆ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಅವರನ್ನು ಸಂಕಷ್ಟದಿಂದ ಪಾರು ಮಾಡಲು ನೇರವಾಗಿ ತರಕಾರಿ ಖರೀದಿ ಮಾಡುತ್ತಿದ್ದೇನೆ’ ಎಂದು ಹೇಳಿದರು.

‘ಕೊರೊನಾ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ರೈತರ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅವರಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ. ರೈತರಿಂದ ತರಕಾರಿ ಖರೀದಿಸಿ ಬಡವರಿಗೆ ಉಚಿತವಾಗಿ ವಿತರಿಸುತ್ತೇವೆ. ಸೋಮವಾರ ಒಂದೇ ದಿನ ಸುಮಾರು ಒಂದೂವರೆ ಲೋಡ್‌ ತರಕಾರಿ ಖರೀದಿಸಲಾಗಿದೆ. ಮಂಗಳವಾರದಿಂದ ಹೆಚ್ಚು ತರಕಾರಿ ಖರೀದಿಸುತ್ತೇವೆ’ ಎಂದು ವಿವರಿಸಿದರು.

ಎಪಿಎಂಸಿ ಅಧ್ಯಕ್ಷ ಡಿ.ಎಲ್.ನಾಗರಾಜ್, ಕಾರ್ಯದರ್ಶಿ ರವಿಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.