ADVERTISEMENT

ಒಡಿಶಾಗೆ ಕಾಲ್ನಡಿಗೆ ಪ್ರಯಾಣ

ಮುಳಬಾಗಿಲು ಮೂಲಕ ಸಾಗುತ್ತಿದ್ದಾರೆ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 17 ಮೇ 2020, 16:56 IST
Last Updated 17 ಮೇ 2020, 16:56 IST
ವಲಸೆ ಕಾರ್ಮಿಕರು ಮುಳಬಾಗಿಲು ಮೂಲಕ ಒಡಿಶಾ ರಾಜ್ಯದ ಕಡೆಗೆ ಕಾಲ್ನಡಿಗೆಯಲ್ಲಿ ಸಾಗಿದರು
ವಲಸೆ ಕಾರ್ಮಿಕರು ಮುಳಬಾಗಿಲು ಮೂಲಕ ಒಡಿಶಾ ರಾಜ್ಯದ ಕಡೆಗೆ ಕಾಲ್ನಡಿಗೆಯಲ್ಲಿ ಸಾಗಿದರು   

ಮುಳಬಾಗಿಲು: ಬೆಂಗಳೂರಿನಲ್ಲಿ ವಿವಿಧ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರು ಕಾಲ್ಗಡಿಗೆಯಲ್ಲಿ ಮುಳಬಾಗಿಲು ಮೂಲಕ ಒಡಿಶಾ ರಾಜ್ಯಕ್ಕೆ ಹೋಗುತ್ತಿರುವ ದೃಶ್ಯಗಳು ನಿತ್ಯ ಕಾಣಸಿಗುತ್ತಿವೆ.

ಗಂಟುಮೂಟೆ ಹೊತ್ತುಕೊಂಡು ಅವರು, ಕೋಲಾರ, ಚಿತ್ತೂರು ಜಿಲ್ಲೆಗಳ ಮೂಲಕ ತೆಲಂಗಾಣ ದಾಟಿ ಒಡಿಶಾ ಸೇರಬೇಕಿದೆ.

ಕೆಲವು ಮಹಿಳೆಯರು ಚಿಕ್ಕಮಕ್ಕಳನ್ನು ಕೂಡ ಎತ್ತಿಕೊಂಡು ಸಾಗುತ್ತಿರುತ್ತಾರೆ. ಅವರನ್ನು ನೋಡುತ್ತಿದ್ದರೆ ಮನಸ್ಸು ಮರುಗುತ್ತದೆ ಎಂದು ಬೈಪಾಸ್‌ಗೆ ಹೊಂದಿಕೊಂಡಂತೆ ಜಮೀನು ಇರುವ ರೈತ ಮುನಿವೆಂಕಟರಾಮಯ್ಯ
ಹೇಳಿದರು.

ADVERTISEMENT

ಭಾನುವಾರ ಮಧ್ಯಾಹ್ನ ಬೈಪಾಸ್‌ನ ನರಸಿಂಹತೀರ್ಥದ ಬಳಿ ನಡೆದು ಹೋಗುತ್ತಿದ್ದ ಕಾರ್ಮಿಕರನ್ನು ಮಾತನಾಡಿಸಿದಾಗ, ‘ಬೆಂಗಳೂರಿನಲ್ಲಿ ನೀರಿನ ಟ್ಯಾಂಕರ್‌ಗಳನ್ನು ಶುಚಿ ಮಾಡುವ ಕೆಲಸ ಮಾಡುತ್ತಿದ್ದೆವು. ಇಷ್ಟು ದಿನ ಅವರಿವರು ಕೊಟ್ಟ ಆಹಾರ ಪದಾರ್ಥಗಳಿಂದ ಬದುಕಿದೆವು. ಈಗ ಊರು ಸೇರಿದರೆ ಸಾಕಪ್ಪ ಎಂದು ಹೊರಟಿದ್ದೇವೆ’ ಎಂದರು.

‘ರೈಲು ಪ್ರಯಾಣಕ್ಕೆ ಹೇಗೆ ಹೆಸರು ನೋಂದಾಯಿಸಬೇಕು ಗೊತ್ತಿಲ್ಲ. ಅದಕ್ಕೆ ಬೇಕಾದ ದಾಖಲೆಗಳು, ಹಣ ನಮ್ಮಲ್ಲಿ ಇಲ್ಲ. ಹಾಗಾಗಿ ದಾರಿಯಲ್ಲಿ ಅವರಿವರು ಕೊಡುವ ಅನ್ನ, ನೀರಿನಿಂದ ಜೀವ ಉಳಿಸಿಕೊಂಡು ಊರಿಗೆ ಹೋಗುತ್ತಿದ್ದೇವೆ‘ ಎಂದು
ಹೇಳಿದರು.

‘ಚೆಕ್‌ಪೋಸ್ಟ್‌ಗಳ ಬಳಿ ತಡೆಯುತ್ತಾರೆ. ಹೋಗಲು ಬಿಡಿ, ಇಲ್ಲವೆ ನಮ್ಮನ್ನು ನಿಮ್ಮ ಜತೆ ಇಟ್ಟುಕೊಂಡು ಅನ್ನ ನೀರು ಕೊಡಿ ಎಂದು ಹೇಳಿದೊಡನೆ, ಅವರೆ ಗಡಿ ದಾಟಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.