ಮುಳಬಾಗಿಲು: ಸುಮಾರು ನಾಲ್ಕೂವರೆ ತಿಂಗಳ ಹಿಂದೆ ಕಳ್ಳತನ ಮಾಡಿದ್ದ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿರುವ ಘಟನೆ ಶನಿವಾರ ನಡೆದಿದೆ.
ಬಂಗಾರಪೇಟೆ ತಾಲ್ಲೂಕಿನ ಕಣಬೆಳ್ಳಿ ಗ್ರಾಮದ ವೆಂಕಟೇಶ್ (47) ಆರೋಪಿ. ಡಿಸೆಂಬರ್ 25, 2024ರಂದು ಆತ ಮುಳಬಾಗಿಲು ತಾಲ್ಲೂಕಿನ ಉತ್ತನೂರು ಗ್ರಾಮದ ಜಯಮ್ಮ ಎಂಬುವವರ ಮನೆಗೆ ನುಗ್ಗಿ, ಬೀರುವಿನಲ್ಲಿದ್ದ ₹50 ಸಾವಿರ ಹಣ, 25 ಗ್ರಾಂ ಬಂಗಾರದ ಕಿವಿ ಓಲೆ, ಹಾಗೂ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದ. ಈ ಸಂಬಂಧ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಹೆಚ್ಚುವರಿ ವರಿಷ್ಠಾಧಿಕಾರಿಗಳಾದ ರವಿಶಂಕರ್, ಜಗದೀಶ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಡಿ.ಸಿ.ನಂದಕಮಾರ್, ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಜಿ.ಸತೀಶ್ ಕುಮಾರ್ ಸೂಚನೆಯಂತೆ ಸಬ್ ಇನ್‌ಸ್ಪೆಕ್ಟರ್ ಅರುಣ್ ಗೌಡ ಪಾಟೀಲ್, ಎಲ್. ಮಮತಾ, ಸತೀಶ್, ಲಕ್ಷ್ಮಿನಾರಾಯಣ ಹಾಗೂ ನಾಗಾರ್ಜುನ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ.
ಬಂಧಿತನನ್ನು ವಿಚಾರಣೆ ನಡೆಸಿದಾಗ ಒಟ್ಟು ಮೂರು ಕಡೆ ಕಳ್ಳತನ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಬಂಧಿತನಿಂದ 60 ಗ್ರಾಂ ಬಂಗಾರದ ಆಭರಣಗಳು ಹಾಗೂ ₹20 ಸಾವಿರ ನಗದು ವಶಪಡಿಸಿಕೊಳ್ಳಲಾಗಿದ್ದು, ಕಳ್ಳತನ ಮಾಡಿದ ಒಟ್ಟು ಆಭರಣಗಳ ಮೌಲ್ಯ ₹6 ಲಕ್ಷ ಎಂದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.