
ಮುಳಬಾಗಿಲು: ತಾಲ್ಲೂಕಿನ ಆವಣಿಯ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ರಾಮಲಿಂಗೇಶ್ವರ ಸ್ವಾಮಿ ರಥೋತ್ಸವ ಶಿವರಾತ್ರಿ ನಡೆದ ಎರಡನೇ ದಿನ ಆಚರಿಸಿಕೊಂಡು ಬರುವುದು ಪ್ರತೀತಿ. ಅದರಂತೆ ಈ ಬಾರಿಯೂ ನಡೆದಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಅಲ್ಲದೆ ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ ಮತ್ತಿತರರ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು.
ರಥೋತ್ಸವಕ್ಕೆ ಶಾಸಕ ಸಮೃದ್ಧಿ ಮಂಜುನಾಥ್, ತಹಶೀಲ್ದಾರ್ ವಿ.ಗೀತಾ, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಚಾಲನೆ ನೀಡಿದರು. ರಥಕ್ಕೆ ಚಾಲನೆ ಸಿಕ್ಕ ತಕ್ಷಣ ಭಕ್ತರು ಕೇಕೆ ಹಾಕುತ್ತಾ, ಜೈ ಶ್ರೀರಾಮ್, ಜೈ ಹನುಮಾನ್, ಜೈ ಸೀತಾಮಾತಾ ಎಂಬ ಘೋಷಣೆ ಕೂಗಿದರು. ಜೊತೆಗೆ ಹೂ, ಬಾಳೆಹಣ್ಣು, ದವಣ, ಉಪ್ಪು ಮತ್ತಿತರರ ಮಂಗಳಕರ ವಸ್ತುಗಳನ್ನು ಎರಚಿ ಹರಕೆ ತೀರಿಸಿದರು.
ರಥವನ್ನು ನಾನಾ ಬಗೆಯ ಹೂಗಳಿಂದ ಶಿವನ ಅಡ್ಡನಾಮ ಹಾಗೂ ಮೂರನೇ ಕಣ್ಣಿನ ಆಕಾರದಲ್ಲಿ ಅಲಂಕರಿಸಲಾಗಿತ್ತು. ರಥವು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ರಥೋತ್ಸವದ ಪ್ರಯುಕ್ತ ದೇವರ ಮೂಲ ವಿಗ್ರಹವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಜೊತೆಗೆ ದೇವಾಲಯದಲ್ಲಿ ಅಭಿಷೇಕ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆದವು. ಬೆಳಗ್ಗೆಯಿಂದ ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು.
ಜಾತ್ರೆಯಲ್ಲಿ ಭಕ್ತರಿಗೆ ಅನ್ನದಾನ ನಡೆಯಿತು. ಜೊತೆಗೆ ವಾಹನ ದಟ್ಟಣೆ ಉಂಟಾಗದಂತೆ ಆವಣಿಯ ನಾಲ್ಕೂ ಕಡೆ ರಸ್ತೆ ಪಕ್ಕದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಆವಣಿಯ ಮುಖ್ಯ ದ್ವಾರದಿಂದ ದೇವಾಲಯದವರೆಗೂ ಹಾಗೂ ಸೀತಮ್ಮನ ಬೆಟ್ಟದ ಮೇಲಿನವರೆಗೂ ಭಕ್ತರು ಕಿಕ್ಕಿರಿದು ತುಂಬಿದ್ದರು. ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಥೋತ್ಸವಕ್ಕೆ ಹೆಲಿಕಾಪ್ಟರ್ ಮೂಲಕ ಬಂದ ಉಸ್ತುವಾರಿ ಸಚಿವ: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಕೋಲಾರ ಶಾಸಕ ಕೊತ್ತೂರು ಜಿ. ಮಂಜುನಾಥ್, ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಆದಿನಾರಾಯಣ ಮತ್ತಿತರರು ರಥೋತ್ಸವ ನೋಡಲು ಮುಳಬಾಗಿಲು ಹೊರವಲಯದವರೆಗೂ ಹೆಲಿಕಾಪ್ಟರ್ ಮೂಲಕ ಬಂದು ಸ್ವಾಮಿಯ ದರ್ಶನ ಪಡೆದು ತೆರಳಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಮಾಜಿ ಸಚಿವ ಎಚ್.ನಾಗೇಶ್, ಎಎಸ್‌ಪಿ ಮನಿಷಾ ಮೋಹಿನ್, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಪಿ.ಬಾಗೇವಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿಪ್ರಿಯ, ಸಿ.ಎಂ.ಆರ್.ಶ್ರೀನಾಥ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.