ಶ್ರೀನಿವಾಸಪುರ: ಕಾಯಂ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶನಿವಾರ ಪಟ್ಟಣದ ಪುರಸಭೆ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘದ ಸಿಬ್ಬಂದಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು.
ಪುರಸಭೆ ಪೌರಕಾರ್ಮಿಕರು, ನೌಕರರು, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಕಾಯಂ ಮಾಡುವ ಸಲುವಾಗಿ ಮುಷ್ಕರ ನಡೆಸಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರಿ ನೌಕರರಿಗೆ ನೀಡುವಂತಹ ಜ್ಯೋತಿ, ಆರೋಗ್ಯ ಸಂಜೀವಿನಿ, ಕೆಜಿಐಡಿ ಸೇರಿದಂತೆ ಇತರೆ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ಪುರಸಭೆ ವ್ಯವಸ್ಥಾಪಕ ನವೀನ್ ಚಂದ್ರ ಹೇಳಿದರು.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ, ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಇರುವ ನೌಕರರನ್ನು ಸದರಿ ಅಧಿನಿಯಮದಿಂದ ಕೈಬಿಟ್ಟು ಸಕ್ರಮಾತಿಗೊಳಿಸುವಂತೆ, ವಿಶೇಷ ನೇಮಕಾತಿಯಡಿ ಆಯ್ಕೆಯಾದ ಪೌರಕಾರ್ಮಿಕರಿಗೆ ಎಸ್‌ಎಫ್‌ಸಿ ವೇತನ ನಿಧಿಯಿಂದ ವೇತನ ಪಾವತಿಸುವಂತೆ, ನಗರ ಸ್ಥಳೀಯ ಸಂಸ್ಥೆಗಳಿಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರನ್ನು ವಿಶೇಷ ನೇಮಕಾತಿಯಡಿ ಪರಿಗಣಿಸುವ ಬಗ್ಗೆ, ಬಿ.ಟಿ ಸಿಬ್ಬಂದಿ/ ಕಂಪ್ಯೂಟರ್ ಆಪರೇಟರ್/ ವಾಹನ ಚಾಲಕ, ಸ್ಯಾನಿಟರಿ ಸೂಪರ್ ವೈಸರ್ ಹಾಗೂ ಇತರೆ ವೃಂದದ ನೌಕರರನ್ನು ವಿಲೀನಗೊಳಿಸುವಂತೆ ಆಗ್ರಹಿಸಿದರು. ತಮ್ಮ ಬೇಡಿಕೆ ಈಡೇರುವವರೆ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದರು.
ಮನವಿ ಪತ್ರವನ್ನು ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಅವರಿಗೆ ನೀಡಿದರು. ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ಮಾತನಾಡಿ, ತಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಪುರಸಭೆ ಸದಸ್ಯ ಸಂಜಯ್‌ಸಿಂಗ್, ನಾಗೇಶ್, ನಾಮಿನಿ ಸದಸ್ಯ ನರಸಿಂಹಮೂರ್ತಿ, ಪೌರಕಾರ್ಮಿಕರ ಸಂಘ ಅಧ್ಯಕ್ಷ ಆಂಜಪ್ಪ, ಕಾರ್ಯದರ್ಶಿ ಸುರೇಶ್‌ಕುಮಾರ್, ಪರಿಸರ ಎಂಜಿನಿಯರ್ ಲಕ್ಷ್ಮೀಶ, ಕಂದಾಯ ನಿರೀಕ್ಷಕ ಎನ್.ಶಂಕರ್, ನಾಗೇಶ್, ಗೌತಮ್, ಪ್ರತಾಪ್, ವೆಂಕಟೇಶಯ್ಯ, ಶ್ರೀನಾಥ್,ಎನ್.ಪಿ.ಎಸ್.ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಪೃಥ್ವಿ, ಆರೋಗ್ಯ ಇಲಾಖೆ ಗಿರೀಶ್, ಸ್ವಚ್ಛತಾ ಸಿಬ್ಬಂದಿ, ಹೊರಗುತ್ತಿಗೆ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.