ADVERTISEMENT

ಪ್ರಿಯಕರನ ಜತೆ ಸೇರಿ ಗಂಡನ ಕೊಲೆ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 11:26 IST
Last Updated 7 ಡಿಸೆಂಬರ್ 2019, 11:26 IST
ಕೆಜಿಎಫ್‌ನ ಪೊಲೀಸರು ಬಂಧಿಸಿರುವ ಕೊಲೆ ಆರೋಪಿಗಳು
ಕೆಜಿಎಫ್‌ನ ಪೊಲೀಸರು ಬಂಧಿಸಿರುವ ಕೊಲೆ ಆರೋಪಿಗಳು   

ಕೆಜಿಎಫ್‌: ಪ್ರಿಯಕರನ ಜತೆಗೂಡಿ ಗಂಡನಿಗೆ ಮದ್ಯ ಕುಡಿಸಿ ಕೊಲೆ ಮಾಡಿದ ಗಾಯತ್ರಿ ಮತ್ತು ಆಕೆಯ ಪ್ರಿಯಕರ ಯಲ್ಲಪ್ಪ ಎಂಬುವವರನ್ನು ಬೆಮಲ್‌ ನಗರ ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್‌ 1ರಂದು ಐಮರಸಪುರದ ಬಿಜಿಎಂಎಲ್‌ ಕಾಡಿನಲ್ಲಿ ಅರೆಕೊಳೆತ ಶವ ಪತ್ತೆಯಾಗಿತ್ತು. ಅದನ್ನು ಭಾಗಶಃ ಸುಡಲಾಗಿತ್ತು. ಈ ಸಂಬಂಧವಾಗಿ ತನಿಖೆ ನಡೆಸಿದ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಫಾರೆನ್ಸಿಕ್‌ ತಜ್ಞರನ್ನು ಕರೆಸಿಕೊಂಡಿದ್ದರು. ಅಲ್ಲಿ ಅರೆಸುಟ್ಟ ಮೊಬೈಲ್‌ ಸಹ ಪತ್ತೆಯಾಗಿತ್ತು. ಮೊಬೈಲ್‌ನ ಐಎಂಇಐ ನಂಬರ್ ಮೂಲವನ್ನು ಹಿಡಿದುಕೊಂಡು, ಅದರ ಮಾಲೀಕನನ್ನು ಪತ್ತೆ ಹಚ್ಚಲು ಶುರು ಮಾಡಿದರು.

ದಾಸರಹೊಸಹಳ್ಳಿ ಬಳಿಯ ಅನಂತಪುರದ ವಾಸಿ ಶೋಭಾ ಎಂಬುವವರಿಗೆ ಮೊಬೈಲ್‌ ಸೇರಿದೆ ಎಂದು ಗೊತ್ತಾಯಿತು. ಅವರನ್ನು ವಿಚಾರಿಸಿದಾಗ, ಆ ಫೋನ್‌ ಅನ್ನು ತಂಗಿಯಾದ ಗಾಯತ್ರಿಗೆ ಕೊಟ್ಟಿರುವುದಾಗಿ ಶೋಭಾ ತಿಳಿಸಿದ್ದರು.

ADVERTISEMENT

ಮೊಬೈಲ್‌ ಕರೆಗಳ ಜಾಡನ್ನು ಹಿಡಿದು ಹೊರಟ ಪೊಲೀಸರು ಗಾಯತ್ರಿ ಹೆಚ್ಚಾಗಿ ಯಲ್ಲಪ್ಪ ಎಂಬಾತನ ಜೊತೆಗೆ ಮಾತನಾಡುತ್ತಿದ್ದಳು ಎಂಬ ಅಂಶ ಗೊತ್ತಾಯಿತು.

ಅನುಮಾನಗೊಂಡ ಪೊಲೀಸರು ಗಾಯತ್ರಿ ಮತ್ತು ಯಲ್ಲಪ್ಪನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ, ಇಬ್ಬರ ನಡುವಿನ ಅನೈತಿಕ ಸಂಬಂಧ ಹೊರಗೆ ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ.

ಸದಾ ಮದ್ಯವ್ಯಸನಿಯಾಗಿದ್ದ ಗಂಡ ವೆಂಕಟೇಶ್‌ ಕಾಟವನ್ನು ತಪ್ಪಿಸಿಕೊಳ್ಳಲು ಗಾಯತ್ರಿ ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ ಯಲ್ಲಪ್ಪನ ಜತೆ ಸಲುಗೆ ಬೆಳೆಸಿಕೊಂಡಿದ್ದರು.

ಐಮರಸ ಪುರದ ಕಾಡಿಗೆ ಗಂಡ ಮತ್ತು ಯಲ್ಲಪ್ಪನ ಜತೆಗೆನವೆಂಬರ್ 24ರಂದು ಗಾಯತ್ರಿ ಹೋಗಿದ್ದಳು. ಅಲ್ಲಿ ಗಂಡನಿಗೆ ಮದ್ಯ ಕುಡಿಸಿ ಪ್ರಿಯಕರನ ಜತೆಸೇರಿ ದೊಣ್ಣೆಯಿಂದ ಹೊಡೆದು ಸಾಯಿಸಿದಳು. ದ್ವಿಚಕ್ರ ವಾಹನದಲ್ಲಿದ್ದ ಪೆಟ್ರೋಲನ್ನು ತೆಗೆದು, ಶವದ ಮೇಲೆ ಹಾಕಿ ಬೆಂಕಿ ಇಟ್ಟರು.

ತಂತ್ರಜ್ಞಾನದ ಮೂಲಕ ಕೊಲೆ ಪ್ರಕರಣವನ್ನು ಪತ್ತೆ ಹಚ್ಚಿದ ಡಿವೈಎಸ್ಪಿ ಶ್ರಿನಿವಾಸಮೂರ್ತಿ, ಸರ್ಕಲ್ ಇನ್ಸ್‌ಸ್ಪೆಕ್ಟರ್‌ ಮುಸ್ತಾಕ್‌ಪಾಷ, ಎಎಸ್‌ಐಗಳಾದ ನಾರಾಯಣಸ್ವಾಮಿ, ಗಾಯತ್ರಿ, ಆನಂದ್‌, ಸಿಬ್ಬಂದಿ ಶಂಕರ್, ಜಬೀರ್ ಪಾಷ, ಅನೀಷ್‌ ಪಾಷ, ಮಹೇಂದ್ರ ಪ್ರಸಾದ್, ಶಿವಕುಮಾರ್‌, ನವೀನ್‌, ಸುನಿಲ್‌ಕುಮಾರ್‌, ಸಂಪತ್‌ಕುಮಾರ್ ತಂಡಕ್ಕೆ ರಿವಾರ್ಡ್ ರೋಲ್‌ ನೀಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.