
ಮುಳಬಾಗಿಲು: ನಂಗಲಿ ಗ್ರಾಮದ 190 ವರ್ಷಗಳ ಇತಿಹಾಸವುಳ್ಳ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಭಾನುವಾರ ಶಾಲಾ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆಯಿತು.
ಬ್ರಿಟಿಷರು ಆಳ್ವಿಕೆ ಮಾಡುವ ಸಮಯದಲ್ಲಿ ಸ್ಥಾಪನೆಯಾಗಿರುವ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬಣ್ಣ ಬಣ್ಣದ ವಸ್ತ್ರ ಹಾಗೂ ವೇಷ ಭೂಷಣಗಳಲ್ಲಿ ಮಿಂಚಿದರು. ಕಾರ್ಯಕ್ರಮದಲ್ಲಿ ಬಹುತೇಕ ಎಲ್ಲ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.
ವಿದ್ಯಾರ್ಥಿಗಳು ಕತ್ತಿವರಸೆ, ಕರಾಟೆ, ಯೋಗ, ಭರತ ನಾಟ್ಯ ಹಾಗೂ ನಾನಾ ಬಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಈಚೆಗಷ್ಟೇ ಇದೇ ಶಾಲೆಯಲ್ಲಿ ಪ್ರೌಢಶಾಲೆ ಪ್ರಾರಂಭವಾಗಿರುವ ಪರಿಣಾಮವಾಗಿ ವಿದ್ಯಾರ್ಥಿಗಳು ಎಲ್ಲ ಶಾಲೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ನೃತ್ಯ, ನಾಟಕ, ಕತ್ತಿವರಸೆ, ಯೋಗದ ಕಾರ್ಯಕ್ರಮ ಪ್ರದರ್ಶಿಸಿದರು.
ಶಾಸಕ ಸಮೃದ್ಧಿ ಮಂಜುನಾಥ್, ಹಲವರು ಪೌಢಶಾಲೆ ಪ್ರಾರಂಭಿಸಬಾರದು ಎಂದು ಅಡ್ಡಿಪಡಿಸಿದರು. ಆದರೂ, ಪ್ರೌಢಶಾಲೆ ಪ್ರಾರಂಭಿಸಿಯೇ ತೀರಿದ್ದಾಗಿ ಹೇಳಿದರು.
ನಂಗಲಿಯಲ್ಲಿ 100 ಹಾಸಿಗೆಗಳ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗುತ್ತಿದೆ. ಮುಂದೆ ನಂಗಲಿಗೆ ಮಹಾದ್ವಾರ, ಅಂಬೇಡ್ಕರ್ ಭವನ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು. ಇದೇ ತಿಂಗಳಲ್ಲಿ ನಂಗಲಿ ಗ್ರಾಮವನ್ನು ಪಟ್ಟಣ ಪಂಚಾಯಿತಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಶೀಘ್ರದಲ್ಲೇ ಪಟ್ಟಣ ಪಂಚಾಯಿತಿ ಮಾಡಿಸುವುದಾಗಿ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಸಿ.ಶ್ರೀಧರ್, ಎನ್.ಎಸ್.ಶೇಷಾದ್ರಿ, ರಘುಪತಿ ರೆಡ್ಡಿ, ಎನ್.ಎಂ.ರಾಘವೇಂದ್ರ, ನಗವಾರ ಸತ್ಯಣ್ಣ, ಸರ್ಕಾರಿ ಸಹಾಯಕ ಎಂಜಿನಿಯರ್ ನಾಗರಾಜ್, ಮುಖ್ಯ ಶಿಕ್ಷಕ ಪ್ರೇಮ್ ಕುಮಾರ್, ಜಗನ್ನ, ಮೋಹನ್, ಶ್ರೀನಿವಾಸರೆಡ್ಡಿ, ಓಬಳ ರೆಡ್ಡಿ, ಕ್ಷೇತ್ರ ಶಿಕ್ಷಣ ಅಧಿಕಾರಿ ಎನ್.ರಾಮಚಂದ್ರಪ್ಪ, ಸಬ್ ಇನ್ ಸ್ಪೆಕ್ಟರ್ ಎಚ್.ಡಿ.ವಿದ್ಯಾಶ್ರೀ, ಗೊಲ್ಲಹಳ್ಳಿ ಜಗದೀಶ್, ವೆಂಕಟಗಿರಿಯಪ್ಪ, ಭಾಸ್ಕರ್ ರೆಡ್ಡಿ, ಕಿಶೋರ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.