ADVERTISEMENT

ಯಾವುದೇ ಪಡಿತರ ಚೀಟಿ ರದ್ದತಿ ಇಲ್ಲ: BPLಗೆ ಅರ್ಹರಲ್ಲದವರು APLಗೆ: ಮುನಿಯಪ್ಪ

ಬಿಪಿಎಲ್‌ಗೆ ಅರ್ಹರಲ್ಲದವರು ಎಪಿಎಲ್‌ಗೆ ಸೇರ್ಪಡೆ: ಆಹಾರ ಸಚಿವ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 15:28 IST
Last Updated 20 ನವೆಂಬರ್ 2024, 15:28 IST
<div class="paragraphs"><p>ಕೆ.ಎಚ್‌.ಮುನಿಯಪ್ಪ</p></div>

ಕೆ.ಎಚ್‌.ಮುನಿಯಪ್ಪ

   

ಕೋಲಾರ: ‘ಬಿಪಿಎಲ್‌ ಪಡಿತರ ಚೀಟಿಗೆ ಯಾರು ಅರ್ಹರಲ್ಲವೋ ಅಂಥವರನ್ನು ಎಪಿಎಲ್‍ಗೆ ಬದಲಾಯಿಸಲಾಗುತ್ತದೆಯೇ ಹೊರತು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ’ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಪಿಎಲ್‌, ಎಪಿಎಲ್‌ ಪಡಿತರ ಚೀಟಿಗಳನ್ನು ರದ್ದು ಮಾಡಲಾಗುತ್ತದೆ ಎಂಬುದಾಗಿ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಅಷ್ಟೆ. ಸರ್ಕಾರ ಎಲ್ಲೂ ಹೇಳಿಲ್ಲ. ಬಿಪಿಎಲ್‌ ಹಾಗೂ ಎಪಿಎಲ್‌ ಪಡಿತರ ಚೀಟಿ ರದ್ದಾಗುವುದಿಲ್ಲ’ ಎಂದರು.

ADVERTISEMENT

‘ದಕ್ಷಿಣ ಭಾರತದ ಯಾವುದೇ ರಾಜ್ಯಗಳಲ್ಲಿ ಶೇ 50ರಷ್ಟು ಬಿಪಿಎಲ್ ಪಡಿತರ ಚೀಟಿಗಳು ಇಲ್ಲ. ಕರ್ನಾಟಕವು ಆರ್ಥಿಕವಾಗಿ ಸುಭದ್ರವಾಗಿ ಇರುವ ರಾಜ್ಯವಾಗಿದ್ದು, ತೆರಿಗೆ ಪಾವತಿಸುವುದರಲ್ಲಿ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿದೆ. ಹೀಗಿದ್ದರೂ ಶೇ 75 ರಿಂದ 80 ರಷ್ಟು ಬಿಪಿಎಲ್ ಚೀಟಿಗಳು ಇರಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ. ಇದು ಈ ಸರ್ಕಾರದಲ್ಲಿ ಮಾತ್ರವಲ್ಲ; ಸುಮಾರು 10 ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಕಾಂಗ್ರೆಸ್ ಅಲ್ಲದೇ; ಬಿಜೆಪಿ ಹಾಗೂ ಮೈತ್ರಿ ಸರ್ಕಾರದಲ್ಲಿಯೂ ಚರ್ಚೆಗಳಾಗಿವೆ. ಹೀಗಾಗಿ, ಬಿಪಿಎಲ್‍ಗೆ ಅರ್ಹರಲ್ಲದವರನ್ನು ಎಪಿಎಲ್‍ಗೆ ಬದಲಾಯಿಸಲಾಗುತ್ತದೆ’ ಹೇಳಿದರು.

‘ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ ಕೆಲಸದಲ್ಲಿ ಇರುವವರು, ವಾರ್ಷಿಕ ಆದಾಯ ₹ 1.20 ಲಕ್ಷ ಮೇಲಿರುವಂಥವರನ್ನು ಗುರುತಿಸಿ ಎಪಿಎಲ್‍ ಪಟ್ಟಿಯಲ್ಲಿ ಇಡಲಾಗುವುದು’ ಎಂದರು.

‘ಗ್ಯಾರಂಟಿ ಯೋಜನೆಗಳ ಹೊರೆ ತಪ್ಪಿಸಲು ಬಿಪಿಎಲ್‌ ಪಡಿತರ ಚೀಟಿ ರದ್ದುಪಡಿಸಲಾಗುತ್ತಿದೆ ಎಂಬುದು ಬಿಜೆಪಿಯವರ ಆರೋಪವಾಗಿದೆ. ಸರ್ಕಾರಕ್ಕೆ ಆರ್ಥಿಕವಾಗಿ ಯಾವುದೇ ತೊಂದರೆಯಿಲ್ಲ. ಈಗಾಗಲೇ ₹ 8 ಸಾವಿರ ಕೋಟಿ ಇಲಾಖೆಗೆ ಬಂದಿದೆ, ಫಲಾನುಭವಿಗಳಿಗೆ ಡಿಬಿಟಿ ಮೂಲಕ ಸಕಾಲಕ್ಕೆ ಹಣ ಪಾವತಿಸಲಾಗುತ್ತಿದೆ. ರಾಜ್ಯ ಸರ್ಕಾರ ಯಾವುದೇ ಸಾಲ ಮಾಡಿಲ್ಲ, ಹಿಂದಿನ ಸರ್ಕಾರದ ಸಾಲ ತೀರಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

‘ಗ್ಯಾರಂಟಿಗಳಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿಲ್ಲ, ಎಲ್ಲ ಕಡೆ ಕೆಲಸ ಆರಂಭವಾಗಿವೆ. ಕಳೆದ ವರ್ಷ ಸ್ವಲ್ಪ ಹಿನ್ನೆಡೆಯಾಗಿದ್ದು, ಈ ವರ್ಷ ಸರಿಯಾಗಿದೆ. ಅನುದಾನಕ್ಕೆ ತೊಂದರೆಯಿಲ್ಲ’ ಎಂದು ಸ್ಪಷ್ಟಪಡಿಸಿದರು.

ಅನರ್ಹರನ್ನು ಗುರುತಿಸಿ ಬಿಪಿಎಲ್‌ನಿಂದ ಎಪಿಎಲ್‍ಗೆ ಇಡಲಾಗುತ್ತದೆಯೇ ಹೊರತು ರದ್ದು ಮಾಡಲ್ಲ. ಗುರುವಾರ ಅಂಕಿಅಂಶ ಸಮೇತ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇನೆ
ಕೆ.ಎಚ್.ಮುನಿಯಪ್ಪ ಆಹಾರ ಸಚಿವ

ಅರ್ಹರಿಗೆ ಬಿಪಿಎಲ್‌ ಕಾರ್ಡ್‌ ತಪ್ಪಿ ಹೋಗಬಾರದು

‘ಒಂದು ವೇಳೆ ಬಿಪಿಎಲ್‌ ಕಾರ್ಡ್‌ ವಿಚಾರದಲ್ಲಿ ಬಡವರಿಗೆ ತೊಂದರೆಯಾದಲ್ಲಿ ತಹಶೀಲ್ದಾರ್‌ಗೆ ಗಮನಕ್ಕೆ ತಂದರೆ ಒಂದು ವಾರದೊಳಗಾಗಿ ಸಮಸ್ಯೆ ಬಗೆಹರಿಸಲಾಗುವುದು. ಅರ್ಹರಿಗೆ ಬಿಪಿಎಲ್‌ ಕಾರ್ಡ್‌ ತಪ್ಪಿ ಹೋಗಬಾರದು. ಅಕಸ್ಮಾತ್‌ ತಪ್ಪಿ ಹೋಗಿದ್ದರೆ ವಾಪಸ್‌ ಕೊಡಲಾಗುವುದು. ಹಾಗೆಯೇ ಚೀಟಿ ಇಲ್ಲವೆಂದು ಆರೋಗ್ಯ ಸೌಲಭ್ಯ ವಿಚಾರದಲ್ಲಿ ತೊಂದರೆ ಆಗಲು ಬಿಡಲ್ಲ’ ಎಂ‌ದು ಕೆ.ಎಚ್‌.ಮುನಿಯ‌ಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.