ADVERTISEMENT

ಕೇಂದ್ರ ಬಜೆಟ್ ವಿರೋಧಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 14:46 IST
Last Updated 18 ಫೆಬ್ರುವರಿ 2020, 14:46 IST
ಕೇಂದ್ರ ಸರ್ಕಾರಿ ಜನ ವಿರೋಧಿ ಬಜೆಟ್ ಮಂಡಿಸಿದೆ ಎಂದು ಆರೋಪಿಸಿ ಸಿಪಿಎಂ ಕಾರ್ಯಕರ್ತರು ಕೋಲಾರದಲ್ಲಿ ಮಂಗಳವಾರ ಧರಣಿ ನಡೆಸಿದರು.
ಕೇಂದ್ರ ಸರ್ಕಾರಿ ಜನ ವಿರೋಧಿ ಬಜೆಟ್ ಮಂಡಿಸಿದೆ ಎಂದು ಆರೋಪಿಸಿ ಸಿಪಿಎಂ ಕಾರ್ಯಕರ್ತರು ಕೋಲಾರದಲ್ಲಿ ಮಂಗಳವಾರ ಧರಣಿ ನಡೆಸಿದರು.   

ಕೋಲಾರ: ಕೇಂದ್ರ ಸರ್ಕಾರ ಜನ ವಿರೋಧಿ ಬಜೆಟ್‌ ಮಂಡಿಸಿದೆ ಎಂದು ಆರೋಪಿಸಿ ಮಂಗಳವಾರ ಸಿಪಿಎಂ ಕಾರ್ಯಕರ್ತರು ಇಲ್ಲಿನ ಬಸ್‌ ನಿಲ್ದಾಣದ ವೃತ್ತದಲ್ಲಿ ರಸ್ತೆ ತಡೆ ಮಾಡಿ ಧರಣಿ ನಡೆಸಿದರು.

ಬಸ್‌ ನಿಲ್ದಾಣದ ವೃತ್ತದಲ್ಲಿ ಜಮಾಯಿಸಿ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಸಚಿವರ ವಿರುದ್ಧ ಘೋಷಣೆ ಕೂಗಿದರು.

ಸಿಪಿಎಂ ಜಿಲ್ಲಾ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ‘ಕೇಂದ್ರ ಸರ್ಕಾರ ಬಡವರ, ರೈತರ, ಕಾರ್ಮಿರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ. ಕಾರ್ಪೊರೇಟ್‌ ಹಾಗೂ ಬಂಡವಾಳಶಾಹಿಗಳ ಪರ ನೀತಿಗಳನ್ನು ಜಾರಿಗೆ ತರುತ್ತಿದೆ’ ಎಂದು ದೂರಿದರು.

ADVERTISEMENT

‘ಕೇಂದ್ರ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದ್ದು, ಸಮಾಜದ ಎಲ್ಲ ವರ್ಗದ ಜನರ ನೆಮ್ಮದಿ ಹಾಳು ಮಾಡುತ್ತಿದೆ. ಎಲ್‌ಐಸಿಯಲ್ಲಿನ ಶೇರು ಹಿಂಪಡಿಕೆ ಸೇರಿದಂತೆ ರಾಷ್ಟ್ರೀಯ ಆಸ್ತಿಗಳನ್ನು ದೊಡ್ಡ ಪ್ರಮಾಣದಲ್ಲಿ ಖಾಸಗೀಕರಿಸುವುದನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಸಿಪಿಎಂ ತಾಲ್ಲೂಕು ಘಟಕದ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಮಾತನಾಡಿ, ‘ಯಾವುದೇ ಕಾರಣಕ್ಕೂ ಕಾರ್ಖಾನೆಗಳನ್ನು ಮುಚ್ಚಬಾರದು. ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬೇಕು. ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಯೋಜನೆಗಳನ್ನು ರೂಪಿಸಬೇಕು’ ಎಂದು ಆಗ್ರಹಿಸಿದರು.

‘ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಸಿಪಿಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎಂ.ವಿಜಿ ಕೃಷ್ಣ, ಎನ್.ಎನ್‌.ಶ್ರೀರಾಮ್, ವಿ.ನಾರಾಯಣರೆಡ್ಡಿ, ಆಶಾ, ಎಂ.ಬೀಮ್ ರಾಜ್, ಅಪ್ಪಯ್ಯಣ್ಣ, ನಾಗರಾಜಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.