ADVERTISEMENT

ಪಾಕ್‌ ವಿರುದ್ಧ ಕೋಲಾರ ಟೊಮೆಟೊ ವಾರ್‌!

ಮುಂದೆಂದೂ ಪಾಕ್‌ಗೆ ಟೊಮೆಟೊ ಸಾಗಿಸಲ್ಲ: ಪಹಲ್ಗಾಮ್‌ ದಾಳಿ ಬಳಿಕ ರೈತರು, ವರ್ತಕರು, ಮಂಡಿ ಮಾಲೀಕರ ನಿರ್ಧಾರ

ಕೆ.ಓಂಕಾರ ಮೂರ್ತಿ
Published 2 ಮೇ 2025, 5:47 IST
Last Updated 2 ಮೇ 2025, 5:47 IST
<div class="paragraphs"><p>ಕೋಲಾರದ ಎಪಿಎಂಸಿ ಮಾರುಕಟ್ಟೆ</p></div>

ಕೋಲಾರದ ಎಪಿಎಂಸಿ ಮಾರುಕಟ್ಟೆ

   

ಕೋಲಾರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಗೆ ಪ್ರತೀಕಾರವಾಗಿ ಕೋಲಾರದ ಕೆಲವು ರೈತರು  ಮುಂದೆಂದೂ ಪಾಕಿಸ್ತಾನಕ್ಕೆ ತಾವು ಬೆಳೆಯುವ ಟೊಮೆಟೊ ಅಥವಾ ಮಾವಿನ ಹಣ್ಣು ರಫ್ತು ಮಾಡದಿರಲು ನಿರ್ಧರಿಸಿದ್ದಾರೆ. 

ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎನಿಸಿರುವ ಕೋಲಾರ ಎಪಿಎಂಸಿಯ ವರ್ತಕರು, ಮಂಡಿ ಮಾಲೀಕರು ಕೂಡ ರೈತರ ನಿಲುವಿಗೆ ಬೆಂಬಲ ಸೂಚಿಸಿದ್ದಾರೆ. ಪಾಕಿಸ್ತಾನಕ್ಕೆ ಶಾಶ್ವತವಾಗಿ ಟೊಮೆಟೊ ಪೂರೈಕೆ ನಿಲ್ಲಿಸುವ ನಿರ್ಧಾರಕ್ಕೆ ಬದ್ಧರಿರುವುದಾಗಿ ಹೇಳಿದ್ದಾರೆ.

ADVERTISEMENT

ಪ್ರತಿ ವರ್ಷ ಸುಗ್ಗಿ ಸಂದರ್ಭದಲ್ಲಿ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ಕೋಲಾರದಿಂದ ಹೆಚ್ಚು ಟೊಮೆಟೊ ಹಾಗೂ ಮಾವಿನ ಹಣ್ಣು ಸರಬರಾಜು ಆಗುತ್ತಿದೆ. 

2016ರ ‘ಉರಿ’ ಸರ್ಜಿಕಲ್‌ ಸ್ಟ್ರೈಕ್‌ ಹಾಗೂ 2019ರ ಬಾಲಾಕೋಟ್‌ ಸರ್ಜಿಕಲ್‌ ಸ್ಟ್ರೈಕ್‌ ಬಳಿಕ ಪಾಕಿಸ್ತಾನಕ್ಕೆ ಟೊಮೆಟೊ ಸಾಗಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಆಗ ಪಾಕಿಸ್ತಾನದಲ್ಲಿ ಕೆ.ಜಿ ಟೊಮೆಟೊ ದರ ₹300ರವರೆಗೆ ಏರಿಕೆ ಆಗಿತ್ತು.

ನಂತರದ ವರ್ಷಗಳಲ್ಲಿ ಮತ್ತೆ ಪಾಕಿಸ್ತಾನದಿಂದ ಬೇಡಿಕೆ ಹೆಚ್ಚಾದಾಗ ಆಗಾಗ ಟೊಮೆಟೊ ಪೂರೈಸಲಾಗುತಿತ್ತು. ಎಪಿಎಂಸಿಯಿಂದ ಅಧಿಕೃತವಾಗಿ ಸಾಗಣೆ ಮಾಡದಿದ್ದರೂ ಟೊಮೆಟೊ ಖರೀದಿ ಮಾಡಿದ ಉತ್ತರ ಭಾರತದ ವರ್ತಕರು, ಮಹಾರಾಷ್ಟ್ರದ ದಲ್ಲಾಳಿಗಳು ಪಾಕಿಸ್ತಾನಕ್ಕೆ ಕಳಿಸುತ್ತಿದ್ದರು.

ಸಾಮಾನ್ಯವಾಗಿ ಜೂನ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ಕೋಲಾರದಲ್ಲಿ ಟೊಮೆಟೊ ಸುಗ್ಗಿ ಅವಧಿ. ಈ ಸಂದರ್ಭದಲ್ಲಿ ಎಪಿಎಂಸಿಯಲ್ಲಿ ಯಥೇಚ್ಚವಾಗಿ ಟೊಮೆಟೊ ಆವಕವಾಗುತ್ತದೆ. ಕೋಲಾರವಲ್ಲದೇ ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಆಂಧ್ರಪ್ರದೇಶದ ಗಡಿ ಭಾಗದಿಂದಲೂ ಕೋಲಾರ ಎಪಿಎಂಸಿಗೆ ಟೊಮೆಟೊ ಬರುತ್ತದೆ.

‘ಸುಗ್ಗಿ ಸಮಯದಲ್ಲಿ ಎಪಿಎಂಸಿಗೆ ಹೆಚ್ಚು ಟೊಮೆಟೊ ಆವಕವಾಗುವುದರಿಂದ ವಿವಿಧೆಡೆಗೆ ಸರಬರಾಜು ಮಾಡಲೇಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತದೆ. ಸಾಮಾನ್ಯವಾಗಿ ಪಾಕಿಸ್ತಾನಕ್ಕೆ ಇತ್ತೀಚಿನ ವರ್ಷಗಳಲ್ಲಿ ಪೂರೈಕೆ ಕಡಿಮೆ ಆಗಿದೆ. ಇನ್ನುಮುಂದೆ ‌ನಮ್ಮಿಂದ ಟೊಮೆಟೊ ಖರೀದಿಸುವ ವರ್ತಕರು ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಸಾಗಿಸಬಾರದು. ನಮಗೆ ನಷ್ಟವಾದರೂ ಪರವಾಗಿಲ್ಲ’ ಎಂದು ಹುತ್ತೂರು ಗ್ರಾಮದ ಟೊಮೆಟೊ ಬೆಳೆಗಾರ ಸತೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಹಲ್ಗಾಮ್‌ನಲ್ಲಿ ನಡೆದ ದಾಳಿ ಬಳಿಕ ಮನನೊಂದಿದ್ದೇವೆ. ಪಾಕಿಸ್ತಾನಕ್ಕೆ ಯಾವುದೇ ರೀತಿಯಲ್ಲಿ ಟೊಮೆಟೊ ಸಾಗಣೆ ಮಾಡಬಾರದೆಂಬ ಒತ್ತಡ ರೈತರು, ವರ್ತಕರು, ಮಂಡಿ ಮಾಲೀಕರಿಂದ ಬರುತ್ತಿದೆ. ಈ ಸಂಬಂಧ ಕೇಂದ್ರ ಸರ್ಕಾರದ ತೀರ್ಮಾನಗಳಿಗೆ ನಾವು ಬದ್ಧರಾಗಿರುತ್ತೇವೆ. ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸಭೆ ಸೇರಿ ಚರ್ಚಿಸುತ್ತೇವೆ’ ಎಂದು ಮಂಡಿ ಮಾಲೀಕ ಸಿಎಂಆರ್‌ ಶ್ರೀನಾಥ್ ಹೇಳಿದರು.

ಕಳೆದ ವರ್ಷ ಬಾಂಗ್ಲಾದೇಶದಲ್ಲಿ ತಲ್ಲಣ ಉಂಟಾದಾಗಲೂ, ಹಿಂದೂಗಳ ಮೇಲೆ ಹಲ್ಲೆ ನಡೆದಾಗಲೂ ಕೋಲಾರದಿಂದ ಟೊಮೆಟೊ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. 

ಕೋಲಾರದ ಎಂಪಿಎಂಸಿ ಮಾರುಕಟ್ಟೆಯ ನೋಟ
‘ಉರಿ’ ಸರ್ಜಿಕಲ್‌ ಸ್ಟ್ರೈಕ್‌ ಬಳಿಕ ಸ್ಥಗಿತಗೊಂಡಿದ್ದ ಟೊಮೆಟೊ ಪೂರೈಕೆ ಟೊಮೆಟೊ ಖರೀದಿಸುವ ಉತ್ತರ ಭಾರತದ ವರ್ತಕರಿಂದ ಪಾಕ್‌ಗೆ ಸಾಗಣೆ ಟೊಮೆಟೊ ಸುಗ್ಗಿ ವೇಳೆ ಬಾಂಗ್ಲಾದೇಶ, ನೇಪಾಳಕ್ಕೂ ಸರಬರಾಜು
‘ಉರಿ’ ಘಟನೆ ಬಳಿ ನಮ್ಮಿಂದ ಪಾಕಿಸ್ತಾನಕ್ಕೆ ಟೊಮೆಟೊ ಸಾಗಣೆ ಬಹುತೇಕ ಸ್ಥಗಿತಗೊಂಡಿದೆ. ಇಲ್ಲಿಂದ ನೇರವಾಗಿ ಸಾಗಣೆ ಆಗುತ್ತಿಲ್ಲ. ಸುಗ್ಗಿ ವೇಳೆ ಬಾಂಗ್ಲಾ ನೇಪಾಳಕ್ಕೆ ಪೂರೈಕೆ ಆಗುತ್ತದೆ
ಎನ್‌.ಕಿರಣ್‌ ಕಾರ್ಯದರ್ಶಿ ಎಪಿಎಂಸಿ
ಬೇಡಿಕೆ ಬಂದಾಗ ಇಲ್ಲಿ ಬೆಲೆ ಕುಸಿದಾಗ ಪಾಕಿಸ್ತಾನಕ್ಕೆ ಟೊಮೆಟೊ ಸಾಗಣೆ ಮಾಡುತ್ತಿದ್ದದ್ದು ಉಂಟು. ಇನ್ನು ಆ ದೇಶಕ್ಕೆ ಸಾಗಣೆ ಮಾಡಲೇಬಾರದೆಂಬುದು ನಮ್ಮೆಲ್ಲರ ನಿಲುವು
ಸಿಎಂಆರ್‌ ಶ್ರೀನಾಥ್‌ ಸಿಎಂಆರ್‌ ಮಂಡಿ ಮಾಲೀಕ ಎಪಿಎಂಸಿ
ಟೊಮೆಟೊಗೆ ರೇಟ್‌ ಸಿಗದಿದ್ದರೂ ಪರವಾಗಿಲ್ಲ ಪಾಕಿಸ್ತಾನಕ್ಕೆ ಸಾಗಿಸಬಾರದು. ತೋಟದಲ್ಲೇ ಬಿಟ್ಟರೂ ಚರಂಡಿಗೆ ಎಸೆದರೂ ಪರವಾಗಿಲ್ಲ. ದೇಶ ವಿಚಾರ ಬಂದಾಗ ರೈತರು ಒಗ್ಗಟ್ಟಾಗುತ್ತಾರೆ
ಸತೀಶ್‌ ಟೊಮೆಟೊ ಬೆಳೆಗಾರ ಹುತ್ತೂರು (ಕೋಲಾರ)

ನಾಲ್ಕು ಸಾವಿರ ಹೆಕ್ಟೇರ್‌ ಟೊಮೆಟೊ ಬೆಳೆ ನಿರೀಕ್ಷೆ

ಕೋಲಾರ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಈ ವರೆಗೆ 1500 ಹೆಕ್ಟೇರ್‌ನಲ್ಲಿ ಟೊಮೆಟೊ ಬೆಳೆಯಲಾಗಿದೆ. ಈ ಋತುವಿನಲ್ಲಿ ನಾಲ್ಕು ಸಾವಿರ ಹೆಕ್ಟೇರ್‌ ಬೆಳೆಯುವ ನಿರೀಕ್ಷೆ ಇದೆ. ಕಳೆದ ವರ್ಷ ಫೆಬ್ರುವರಿಯಿಂದ ಮೇ ವರೆಗೆ 5970 ಹೆಕ್ಟೇರ್‌ ಟೊಮೆಟೊ ಬೆಳೆಯಲಾಗಿತ್ತು. ಜೂನ್‌ನಿಂದ ಡಿಸೆಂಬರ್‌ವರೆಗೆ ಟೊಮೆಟೊ ಸುಗ್ಗಿ ಇರುತ್ತದೆ. ಈ ಅವಧಿಯಲ್ಲಿ ನೇಪಾಳ ಬಾಂಗ್ಲಾದೇಶ ಹಾಗೂ ದೇಶದ ವಿವಿಧ ರಾಜ್ಯಗಳಿಗೆ ಟೊಮೆಟೊ ಸಾಗಣೆ ಆಗುತ್ತದೆ. ಸುಗ್ಗಿ ಅವಧಿಯಲ್ಲಿ ಪ್ರತಿ ದಿನ 2ರಿಂದ 3 ಲಕ್ಷ ಕ್ರೇಟ್‌ಗಳ (10 ಟನ್‌) ಟೊಮೆಟೊ ಆವಕವಿರುತ್ತದೆ. ನಿತ್ಯ 1500ಕ್ಕೂ ಅಧಿಕ ವಾಹನಗಳ ಸಂಚಾರವಿರುತ್ತದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.