ಪ್ರಾತಿನಿಧಿಕ ಚಿತ್ರ
ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿಯಲ್ಲಿ ರೈತರು ಹಿಡಿದು ಕೊಟ್ಟಿದ್ದ ಕೇಬಲ್ ಕಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಬಿಟ್ಟು ಕಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ರಾತ್ರಿ ಪೂಲಕುಂಟ್ಲಪಲ್ಲಿ, ಹೊಸೊಡ್ಯ, ಬೈರಗಾನಪಲ್ಲಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಕೇಬಲ್ ಕಳ್ಳತನ ನಡೆದಿತ್ತು. ಕಳ್ಳತನ ಮಾಡಿದ ಕೇಬಲ್‌ಗಳನ್ನು ಖದೀಮರು ಸುಡುತ್ತಿದ್ದ ವೇಳೆ ರೈತರು ಒಬ್ಬ ವ್ಯಕ್ತಿಯನ್ನು ಹಿಡಿದಿದ್ದು, ಮತ್ತೊಬ್ಬ ಪರಾರಿಯಾಗಿದ್ದ.
‘ಕೇಬಲ್ ಸುಡುತ್ತಿದ್ದ ಕಳ್ಳನೊಬ್ಬನನ್ನು ಹಿಡಿದು 112 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದೆವು. ಬಳಿಕ ಆರೋಪಿಯನ್ನು ಗೌನಿಪಲ್ಲಿ ಪೊಲೀಸರಿಗೆ ಒಪ್ಪಿಸಲಾಯಿತು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟು ಕಳಿಸಿದ್ದಾರೆ’ ಎಂದು ರೈತರಾದ ಕೃಷ್ಣ, ಸುಧಾಕರ್ ಹೇಳಿದ್ದಾರೆ.
ಕೂಡಲೇ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ಬಿಡುಗಡೆ ಮಾಡಿದ ಆರೋಪಿಯನ್ನು ಮತ್ತು ತಪ್ಪಿಸಿಕೊಂಡ ಆರೋಪಿಯನ್ನು ಬಂಧಿಸಿ ಕೇಬಲ್ ವಶಪಡಿಸಿಕೊಂಡು ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಸುಧಾಕರ್ ಪೂಲಕುಂಟ್ಲಪಲ್ಲಿ, ಗೆಂಗಿರೆಡ್ಡಿ, ಚೌಡರೆಡ್ಡಿ, ಪಾಟಾಲಪ್ಪ, ಕೃಷ್ಣ, ಮಂಜು, ಆನಂದ್ ಸಿ, ಸತೀಶ್, ಹೊಸೊಡ್ಯ ನರೇಂದ್ರ, ಶಿವಾರೆಡ್ಡಿ, ಬೈರಗಾನಪಲ್ಲಿ ರಮಣಾರೆಡ್ಡಿ ಸೇರಿ ಹಲವು ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.