ADVERTISEMENT

ಕೋಲಾರ | ಆರ್‌ಟಿಐ ದುರ್ಬಳಕೆ: ಹಣದ ದಂಧೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 15:46 IST
Last Updated 30 ಜೂನ್ 2020, 15:46 IST

ಕೋಲಾರ: ‘ಸಾಮಾಜಿಕ ಕಾರ್ಯಕರ್ತ ಎಸ್.ನಾರಾಯಣಸ್ವಾಮಿ ಅವರು ಮಾಹಿತಿ ಹಕ್ಕು ಕಾಯ್ದೆ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳಿಗೆ ಕಿರುಕುಳ ನೀಡಿ ಹಣ ವಸೂಲಿ ದಂಧೆ ನಡೆಸುತ್ತಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಆರೋಪಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿ.ಪಂ ನಿರ್ಗಮಿತ ಸಿಇಒ ಜಿ.ಜಗದೀಶ್‌ ಅವರನ್ನು ಅಭಿನಂದಿಸುವ ಸಂದರ್ಭದಲ್ಲಿ ಪಿಡಿಒಗಳು ಬಾಡಿಗೆಗೆ ತಂದಿದ್ದ ಬೆಳ್ಳಿ ಗದೆ, ಕಿರೀಟ ಮತ್ತು ಚಿನ್ನದ ಉಂಗುರವನ್ನು ಉಡುಗೊರೆಯಾಗಿ ಕೊಟ್ಟು ಮೆಚ್ಚುಗೆ ಸೂಚಿಸಿದ್ದರು. ನಾರಾಯಣಸ್ವಾಮಿ ಈ ವಿಚಾರವಾಗಿ ಕೋರ್ಟ್‌ ಮೆಟ್ಟಿಲೇರಿರುವುದು ಖಂಡನೀಯ’ ಎಂದು ಹೇಳಿದರು.

‘ಸರ್ಕಾರದಿಂದ ಪೊಲೀಸ್‌ ಭದ್ರತೆ ಪಡೆದಿರುವ ನಾರಾಯಣಸ್ವಾಮಿ ಅವರು ಬಡವರಿಗೆ ಉಪಯೋಗವಾಗುವ ಒಳ್ಳೆಯ ಕೆಲಸ ಮಾಡಿಲ್ಲ. ಇವರಿಗೆ ನೀಡಿರುವ ಪೊಲೀಸ್‌ ಭದ್ರತೆ ಹಿಂಪಡೆಯಬೇಕು. ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುವುದೇ ಇವರ ವೃತ್ತಿ. ಇವರ ವಿರುದ್ಧ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಪಿಡಿಒಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಟ್ಟಿಗೆ ಸೇರಿ ಜಗದೀಶ್‌ ಅವರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಿದ್ದರು. ಹೀಗಾಗಿ ಪಿಡಿಒಗಳು ಆತಂಕಪಡುವ ಅಗತ್ಯವಿಲ್ಲ. ನ್ಯಾಯಾಲಯಕ್ಕೆ ಸತ್ಯ ಮನವರಿಕೆ ಮಾಡಿಕೊಟ್ಟು ಕೆಟ್ಟ ಚರಿತ್ರೆ ಸೃಷ್ಟಿಸುವ ನಾರಾಯಣಸ್ವಾಮಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.