ADVERTISEMENT

ಕೋಲಾರ: ಎಸ್‌ಪಿಬಿ ಸಾಧನೆ ಚರಿತ್ರೆಯಲ್ಲಿ ಅಜರಾಮರ; ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 15:21 IST
Last Updated 26 ಸೆಪ್ಟೆಂಬರ್ 2020, 15:21 IST
ಜನಪದ ಕಲಾವಿದರ ಒಕ್ಕೂಟವು ಕೋಲಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಜನಪದ ಕಲಾವಿದರ ಒಕ್ಕೂಟವು ಕೋಲಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.   

ಕೋಲಾರ: ‘ಭಾಷೆ, ಗಡಿಗಳನ್ನು ಮೀರಿ ಸಂಗೀತ ರಸಿಕರನ್ನು ರಂಜಿಸಿದ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅಗಲಿಕೆಯಿಂದ ಸಂಗೀತ ಲೋಕಕ್ಕೆ ದೊಡ್ಡ ನಷ್ಟವಾಗಿದೆ’ ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ (ಕುಡಾ) ಅಧ್ಯಕ್ಷ ಓಂಶಕ್ತಿ ಚಲಪತಿ ಹೇಳಿದರು.

ಜನಪದ ಕಲಾವಿದರ ಒಕ್ಕೂಟವು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಬಾಲಸುಬ್ರಹ್ಮಣ್ಯಂ ಅವರು ದೈಹಿಕವಾಗಿ ದೂರಾಗಿರಬಹುದು. ಆದರೆ, ಅವರು ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ಬಾಲಸುಬ್ರಹ್ಮಣ್ಯಂ ಅವರು ದೇಶ ಕಂಡ ಮಹಾನ್‌ ಗಾನ ಗಾರುಡಿಗ. ಅವರಿಂದ ಬಹಳಷ್ಟು ಕಲಾವಿದರು ಬದುಕು ಕಟ್ಟಿಕೊಂಡಿದ್ದಾರೆ. ಎಸ್‌ಪಿಬಿ ಅವರ ಹೆಸರು ಕೇಳುತ್ತಲೇ ಮಧುರ ಹಾಡುಗಳು ಮನಸ್ಸಿನಲ್ಲಿ ಗುನುಗುಟ್ಟುತ್ತವೆ. ಅವರು ಮಾಡಿದ ಸಾಧನೆ ಭಾರತೀಯ ಚಿತ್ರರಂಗದ ಚರಿತ್ರೆಯಲ್ಲಿ ಅಜರಾಮರ’ ಎಂದು ಬಣ್ಣಿಸಿದರು.

ADVERTISEMENT

‘ಗಾಯನದಿಂದಲೇ ದೇಶದ ಸಂಗೀತ ರಸಿಕರನ್ನು ಮಂತ್ರಮುಗ್ಧಗೊಳಿಸಿದ್ದ ಬಾಲಸುಬ್ರಹ್ಮಣ್ಯಂ ಅವರ ಕಂಠಕ್ಕೆ ಸಾಟಿಯಿಲ್ಲ. ಅವರು ಗಾಯನದ ಜತೆಗೆ ನಟನೆಯಲ್ಲೂ ಛಾಪು ಮೂಡಿಸಿದ್ದರು. ಅವರ ಗಾಯನ ಮೋಡಿಗೆ ಮಾರು ಹೋಗದ ಸಂಗೀತ ರಸಿಕರೇ ಇಲ್ಲ’ ಎಂದು ಸ್ಮರಿಸಿದರು.

‘ಸರಸ್ವತಿ ಪುತ್ರ ಬಾಲಸುಬ್ರಹ್ಮಣ್ಯಂ ಅವರು ಗಾಯನದ ಮೂಲಕ ವಿಶ್ವದ ಗಮನ ಸೆಳೆದಿದ್ದರು. ಕನ್ನಡ ನಾಡಿನ ಸಾಂಸ್ಕೃತಿಕ ಲೋಕ ಶ್ರೀಮಂತಗೊಳಿಸಿದವರಲ್ಲಿ ಎಸ್‌ಪಿಬಿ ಅಗ್ರಮಾನ್ಯರಾಗಿದ್ದಾರೆ. ಅವರ ಯುಗಳ ಗೀತೆಗಳಿಗೆ ಮನಸೋಲದವರೇ ಇಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಾಲಾಜಿ ಹೇಳಿದರು.

ಮನ್ವಂತರ ಪ್ರಕಾಶನ ಮತ್ತು ಮನ್ವರಂತರ ಜನಸೇವಾ ಟ್ರಸ್ಟ್ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ರಾಜ್ಯ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೃಷ್ಣ, ಪ್ರಧಾನ ಕಾರ್ಯದರ್ಶಿ ಪದ್ಮಾ, ಸಂಘಟನಾ ಕಾರ್ಯದರ್ಶಿ ರಾಮಪ್ಪ, ಗೌರವಾಧ್ಯಕ್ಷ ಸೋಮಣ್ಣ, ಕರ್ನಾಟಕ ಆರ್ಕೆಸ್ಟ್ರಾ ಮಾಲೀಕರು ಹಾಗೂ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಅಮರನಾಥ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.