
ಸಾವು (ಪ್ರಾತಿನಿಧಿಕ ಚಿತ್ರ)
ಮಾಲೂರು: ತಾಲ್ಲೂಕಿನ ದೊಮ್ಮಲೂರು ಗ್ರಾಮದ ಬಳಿಯ ಆದಿಶೇಷ ಲೇಔಟ್‌ನಲ್ಲಿ ಬುಧವಾರ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಉಂಟಾದ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮಿಳುನಾಡಿನ ಕೃಷ್ಣಗಿರಿ ಮೂಲದ ಕಂಬತ್ (28), ಅವರ ಹೆಂಡತಿ ಅಮ್ಮು (24) ಹಾಗೂ ಅವರ ಮಗು 2 ವರ್ಷದ ಯಾಮಿನಿ ಮೃತರು.
ಎಲೆಕ್ಟ್ರಿಷಿಯನ್ ಆಗಿದ್ದ ಕಂಬತ್ ಅವರು ತಮ್ಮ ಹೆಂಡತಿ ಮತ್ತು ಮಗಳೊಂದಿಗೆ ಇಲ್ಲಿನ ಆದಿಶೇಷ ಲೇಔಟ್‌ನಲ್ಲಿರುವ ಸೆಕ್ಯೂರಿಟಿ ಕ್ಯಾಬಿನ್‌ನಲ್ಲಿ ವಾಸವಾಗಿದ್ದರು. ಈ ಕ್ಯಾಬಿನ್‌ಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಹೀಗಾಗಿ, ಪಕ್ಕದ ತೋಟದ ಮನೆಯಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದರು ಎನ್ನಲಾಗಿದೆ. ಸೋಮವಾರ ತಡರಾತ್ರಿ 12 ಗಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕಿಟ್ ಆಗಿ, ಇಡೀ ಕ್ಯಾಬಿನ್‌ಗೆ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯಲ್ಲಿ ಸುಟ್ಟು ಗಾಯಗೊಂಡಿದ್ದ ಕಂಬಲ್, ಅಮ್ಮು ಮತ್ತು ಯಾಮಿನಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು. ಆದರೆ, ಅವರು ಮೃತಪಟ್ಟಿದ್ದಾರೆ.
ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಈ ಪ್ರಕರಣದಲ್ಲಿ ಬಿಲ್ಡರ್ ರಮೇಶ್ ಎಂಬಾತನನ್ನು ಬಂಧಿಸಲಾಗಿದ್ದು, ಇದರ ಮಾಲೀಕ ದೆಹಲಿ ಮೂಲದ ಪ್ರದೀಪ್ ಬಂಧನಕ್ಕಾಗಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.