ADVERTISEMENT

Politics | ಒಪ್ಪಂದ ಆಗಿಲ್ಲವೆಂದರೆ ಸಿದ್ದರಾಮಯ್ಯಗೆ ಶಕ್ತಿ ತುಂಬಿ: ಮುನಿಯಪ್ಪ

ಗೊಂದಲ ಬೇಗನೇ ಇತ್ಯರ್ಥ ಮಾಡಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 15:35 IST
Last Updated 28 ನವೆಂಬರ್ 2025, 15:35 IST
<div class="paragraphs"><p>ಕೆ.ಎಚ್‌.ಮುನಿಯಪ್ಪ</p></div>

ಕೆ.ಎಚ್‌.ಮುನಿಯಪ್ಪ

   

ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಹೈಕಮಾಂಡ್ ಶೀಘ್ರವೇ ಕರೆಸಿ ಗೊಂದಲ ಇತ್ಯರ್ಥ ಮಾಡಬೇಕು. ಯಾವುದೇ ರೀತಿಯ ತೀರ್ಮಾನ ಕೈಗೊಳ್ಳಲಿ, ಬೇಗ ನಿರ್ಧಾರ ಮಾಡಬೇಕೆಂದು ಮನವಿ ಮಾಡಿದ್ದೇವೆ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿ, 'ಒಪ್ಪಂದದ ಸಮಯದಲ್ಲಿ ನಾವು ಇರಲಿಲ್ಲ. ಏನು ಒಪ್ಪಂದ ಆಗಿದೆ ಎಂಬುದೂ ನಮಗೆ ಗೊತ್ತಿಲ್ಲ. ಏನೇ ಒಪ್ಪಂದ ಇದ್ದರೂ ಬೇಗನೇ ಜಾರಿ ಮಾಡಿ. ಇಲ್ಲವಾದರೆ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಶಕ್ತಿ ತುಂಬಿ ಮುಖ್ಯಮಂತ್ರಿಯಾಗಿ ಮುಂದುವರಿಸಲಿ' ಎಂದರು.

ADVERTISEMENT

'ಕೆಲವರು ಬಣ ಎಂದು ಹೇಳಿಕೊಳ್ಳುತ್ತಿದ್ದಾರೆ, ಅದು ವೈಯಕ್ತಿಕ. ಆದರೆ, ನಂಬರ್‌ ಗೇಮ್‌ ಕಾಂಗ್ರೆಸ್‌ನಲ್ಲಿ ಬರಲ್ಲ. ಹೈಕಮಾಂಡ್‌ ಹೇಳಿದ ಮಾತು ಅಂತಿಮ. ನಮ್ಮಲ್ಲಿ ಹೈಕಮಾಂಡ್‌ ಎಂದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ವೇಣುಗೋಪಾಲ್, ಸುರ್ಜೇವಾಲಾ ಕೂಡ ಇರುತ್ತಾರೆ. ಈಗಾಗಲೇ ನಾನು ಖರ್ಗೆ ಜೊತೆ ಕೂಡ ಮಾತನಾಡಿದ್ದೇನೆ' ಎಂದು ತಿಳಿಸಿದರು.

'ಖರ್ಗೆ ಅವರಿಗಿಂತ ಅರ್ಹತೆ ಇರುವವರು ಬೇಕೇ? ಹಲವಾರು ಬಾರಿ ಪ್ರಸ್ತಾಪವಾಗಿದ್ದು, ಅಂಥವರನ್ನೇ ನಾವು ಮುಖ್ಯಮಂತ್ರಿ ಮಾಡಲು ಈವರೆಗೆ ಆಗಲಿಲ್ಲ. ಅವರ ನಂತರ ಪಕ್ಷದಲ್ಲಿ ನಾನು ಸೀನಿಯರ್‌. ದಲಿತರು ಮುಖ್ಯಮಂತ್ರಿ ಆಗಬೇಕೆಂದು ಕೇಳುವ ಉದ್ದೇಶ ರಾಜ್ಯದಲ್ಲಿ ಶೆ 24ರಷ್ಟು ದಲಿತರು ಇದ್ದಾರೆ. ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದಾಗಿ ಸತೀಶ ಜಾರಕಿಹೊಳಿ ಹೇಳುತ್ತಿದ್ದಾರೆ. ಪರಮೇಶ್ವರ ರೀತಿ ಯಾರೂ ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿಲ್ಲ. ಅವರು ಉಪಮುಖ್ಯಮಂತ್ರಿ ಹಾಗೂ ಗೃಹಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಎಲ್ಲರೂ ಆಕಾಂಕ್ಷಿ ಇದ್ದೇವೆ. ಆದರೆ, ನಾವೆಲ್ಲಾ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ಕೆಪಿಸಿಸಿ ಜವಾಬ್ದಾರಿ ಸೇರಿದಂತೆ ಏನೂ ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ಸಿದ್ಧರಿದ್ದೇವೆ' ಎಂದರು.

ತಮ್ಮ ನಿವಾಸದಲ್ಲಿ ಉಪಾಹಾರ ಸಭೆ ಬಗ್ಗೆ ಪ್ರತಿಕ್ರಿಯಿಸಿ, 'ಹರಿಪ್ರಸಾದ್ ಹಾಗೂ ನಾನು ತುಂಬ ದಿನಗಳಿಂದ ಆಪ್ತರು. ಅವರು ದೆಹಲಿಯಲ್ಲಿ ಪಕ್ಷದ ಕೆಲಸ ಮಾಡುತ್ತಿದ್ದಾಗ ನಾನು ಯುಪಿಎ ಸರ್ಕಾರದ ಭಾಗವಾಗಿದ್ದೆ. ಆಗಲೂ ಊಟ, ತಿಂಡಿಗೆ ಸೇರುತ್ತಿದ್ದೆವು. ಸದ್ಯದ ಗೊಂದಲ ಬಗೆಹರಿಸಲು ನಾವೆಲ್ಲಾ ಹೈಕಮಾಂಡ್‌ಗೆ ತಿಳಿಸೋಣ ಎಂಬುದಷ್ಟೇ ಚರ್ಚೆ ಆಯಿತು' ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.