ADVERTISEMENT

ಕೋಲಾರ: ಜಿಲ್ಲೆಯಲ್ಲಿವೆ ಒಟ್ಟು 79,281 ಬೀದಿನಾಯಿಗಳು!

ಶಾಲಾ ಕಾಲೇಜು, ಆಸ್ಪತ್ರೆ, ಬಸ್‌, ರೈಲು ನಿಲ್ದಾಣ ಆವರಣದಲ್ಲಿರುವ ನಾಯಿಗಳನ್ನು ಶೆಲ್ಟರ್‌ಗೆ ಸ್ಥಳಾಂತರ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 5:49 IST
Last Updated 17 ಡಿಸೆಂಬರ್ 2025, 5:49 IST
ಜಿಲ್ಲೆಯಲ್ಲಿ ಬೀದಿನಾಯಿಗಳ ಉಪಟಳಕ್ಕೆ ಕ್ರಮ
ಜಿಲ್ಲೆಯಲ್ಲಿ ಬೀದಿನಾಯಿಗಳ ಉಪಟಳಕ್ಕೆ ಕ್ರಮ   

ಕೋಲಾರ: ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಅಂದಾಜು 79,281 ಬೀದಿನಾಯಿಗಳು ಇವೆ. ಈ ಎಲ್ಲಾ ಬೀದಿನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಚಿಕಿತ್ಸೆ(ಅನಿಮಲ್‌ ಬರ್ತ್‌ ಕಂಟ್ರೋಲ್‌) ಮಾಡಲಾಗುವುದು. ಶಾಲಾ ಕಾಲೇಜು, ಆಸ್ಪತ್ರೆ, ನಿಲ್ದಾಣಗಳ ಆವರಣದಲ್ಲಿರುವ ಬೀದಿನಾಯಿಗಳನ್ನು ಮಾತ್ರ ತಾತ್ಕಾಲಿಕ ಆಶ್ರಯ ಕೇಂದ್ರಗಳಿಗೆ (ಶೆಲ್ಟರ್‌) ಸ್ಥಳಾಂತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಬೀದಿನಾಯಿಗಳ ಹಾವಳಿ ತಡೆಗಟ್ಟುವ ಸಂಬಂಧ ಸುಪ್ರೀಂ ಕೋರ್ಟ್‌ ಆದೇಶ ಅನುಷ್ಠಾನ ಮಾಡುವ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ನಗರ ಹಾಗೂ ಪಟ್ಟಣ ವ್ಯಾಪ್ತಿಯ ಖಾಸಗಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬಸ್‌, ರೈಲು ನಿಲ್ದಾಣ ಆವರಣಗಳಲ್ಲಿ ಸುಮಾರು 1,065 ಬೀದಿನಾಯಿಗಳಿವೆ. ಅದೇ ರೀತಿ ಗ್ರಾಮಾಂತರ ಪ್ರದೇಶದ ಶಾಲಾ ಕಾಲೇಜು, ಆಸ್ಪತ್ರೆ ಆವರಣದಲ್ಲಿ 9,429 ಬೀದಿನಾಯಿಗಳಿವೆ. ಮೊದಲಿಗೆ ಈ ನಾಯಿಗಳನ್ನು ಹಿಡಿದು ಬೇರೆ ಕಡೆ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಿ ಮೂರು ದಿನ ಆರೈಕೆ‌ ಮಾಡಿ ಆಶ್ರಯ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುವುದು. ‌ಸುಪ್ರೀಂ ಕೋರ್ಟ್‌ ಆದೇಶದಂತೆ ಅನುಷ್ಠಾನಗೊಳಿಸಲಾಗುವುದು ಎಂದರು.

ADVERTISEMENT

ನಗರ ಪ್ರದೇಶದಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡುವ ಜಾಗದಲ್ಲಿಯೇ ತಾತ್ಕಾಲಿಕ ಶೆಡ್‌ ಅಳವಡಿಸಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೋಲಾರದಲ್ಲಿ ಕೆಂದಟ್ಟಿ ಬಳಿ ಕೇಂದ್ರ ತೆರೆಯಲಾಗುವುದು. ಈ ಸಂಬಂಧ ಪ್ರಕ್ರಿಯೆ ನಡೆಯುತ್ತಿದೆ. ಬೀದಿನಾಯಿಗಳು ಮತ್ತೆ ಶಾಲಾ, ಆಸ್ಪತ್ರೆ ಆವರಣ ಪ್ರವೇಶಿಸದಂತೆ ನೋಡಿಕೊಳ್ಳಬೇಕು. ಈ ಸಂಬಂಧ ಮೇಲ್ವಿಚಾರಣೆ ಮಾಡಲು ಆಯಾ ಸಂಸ್ಥೆಗಳು ಒಬ್ಬರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಈ ಕ್ರಮ ವಹಿಸಲು ಸರ್ಕಾರ ಈಗ ನಗರ ವ್ಯಾಪ್ತಿಗೆ ಅನುದಾನ ಬಿಡುಗಡೆ ಮಾಡಿದೆ. ಆ ಹಣ ಬಳಸಿಕೊಂಡು ಸೌಕರ್ಯ ಸೃಷ್ಟಿ ಮಾಡಲಾಗುತ್ತಿದೆ. ಮಾರ್ಗಸೂಚಿಗಳಂತೆ 100 ನಾಯಿಗಳ ಆಶ್ರಯ ಕೇಂದ್ರಕ್ಕೆ ತಿಂಗಳಿಗೆ ಅಂದಾಜು ₹ 3.33 ಲಕ್ಷ ವೆಚ್ಚವಾಗಲಿದೆ. ಒಟ್ಟಿನಲ್ಲಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೀದಿನಾಯಿ ಉಪಟಳ ತಪ್ಪಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ಗ್ರಾಮಾಂತರ ಪ್ರದೇಶದ ಬೀದಿನಾಯಿಗಳಿಗೂ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಲು ಕ್ರಮ ವಹಿಸಿ ನಿರ್ದೇಶನ ನೀಡಲಾಗಿದೆ. ತಾಲ್ಲೂಕು ಅಥವಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಶ್ರಯ ಕೇಂದ್ರ ನಿರ್ಮಿಸಬೇಕು. ಶಾಲೆ, ಆಸ್ಪತ್ರೆ ಆವರಣಗಳಲ್ಲಿರುವ ನಾಯಿಗಳನ್ನು ಸ್ಥಳಾಂತರಿಸಬೇಕು ಎಂದರು.

ಆಶ್ರಯ ಕೇಂದ್ರದಲ್ಲಿ ಬೀದಿನಾಯಿಗಳ ಪೋಷಣೆ ಕೂಡ ಮುಖ್ಯವಾದದು. ಅವುಗಳಿಗೆ ನೀರು, ನಿತ್ಯ ಎರಡು ಬಾರಿ ಊಟ, ಔಷಧೋಪಾಚಾರ, ಸ್ವಚ್ಛತೆ, ಲಸಿಕೆ ಹಾಕಬೇಕು. ಪ್ರಾಣಿಗಳ ಕಲ್ಯಾಣ ಮಂಡಳಿ ಮಾರ್ಗಸೂಚಿ ಪಾಲಿಸಬೇಕು ಎಂದು ನಿರ್ದೇಶನ ನೀಡಿದರು.

ನಗರ ಪ್ರದೇಶದ ಶಾಲಾ ಆವರಣಗಳಲ್ಲಿಯೇ 534 ನಾಯಿಗಳು, ಆಸ್ಪತ್ರೆ ಕಾಂಪೌಂಡ್‌ ಒಳಗೆ 173 ನಾಯಿಗಳು ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳಾ, ನಗರ ಯೋಜನಾ ಅಧಿಕಾರಿ ಅಂಬಿಕಾ, ಕೋಲಾರ ನಗರಸಭೆ ಆಯುಕ್ತ ನವೀನ್‌ ಚಂದ್ರ, ಪಶು ಇಲಾಖೆ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಎಲ್ಲಾ ತಾಲ್ಲೂಕುಗಳ ಇಒಗಳು, ನಗರಸಭೆ, ಪುರಸಭೆ ಮುಖ್ಯಸ್ಥರು ಇದ್ದರು.

ಜಿಲ್ಲೆಯ ಎಲ್ಲಾ ಬೀದಿನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಬೇಕು. ಇದರಲ್ಲಿ ಶೇ 100 ಪ್ರಗತಿ ಸಾಧಿಸಬೇಕು. ಇಲ್ಲದಿದ್ದರೆ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.
–ಎಂ.ಆರ್‌.ರವಿ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.