ADVERTISEMENT

ಪಾದಪೂಜೆಗೆ ಬಂದಿದ್ದ ಯುವತಿಯೊಂದಿಗೆ ಪರಾರಿಯಾಗಿರುವ ಸ್ವಾಮೀಜಿಯ ನಿಲ್ಲದ ಓಟ!

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 12:02 IST
Last Updated 1 ಮಾರ್ಚ್ 2020, 12:02 IST
   

ಕೋಲಾರ: ತಾಲ್ಲೂಕಿನ ಹೊಳಲಿ ಗ್ರಾಮದ ಯುವತಿಯೊಂದಿಗೆ ಪರಾರಿಯಾಗಿರುವ ದತ್ತಾತ್ರೇಯ ಅವಧೂತ ಸ್ವಾಮೀಜಿಯು ಪದೇಪದೇ ತನ್ನ ನೆಲೆ ಬದಲಿಸುತ್ತಿದ್ದು, ಸದ್ಯ ಹಾವೇರಿ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ.

ಪಾದಪೂಜೆಗಾಗಿ ಹೊಳಲಿ ಗ್ರಾಮದ ಭೀಮಲಿಂಗೇಶ್ವರ ದೇವಾಲಯಕ್ಕೆ ಬಂದಿದ್ದ ಯುವತಿಯನ್ನು ಪ್ರೀತಿಸಿ ಫೆ.24ರಂದು ಜತೆಯಲ್ಲಿ ಕರೆದೊಯ್ದಿದ್ದ ಸ್ವಾಮೀಜಿಯು ಆಂಧ್ರದ ತಿರುಪತಿಯಲ್ಲಿ ಇರುವುದಾಗಿ ಯುವತಿಯ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದ. ಅಲ್ಲದೇ, ತಿರುಪತಿಯಲ್ಲಿ ಯುವತಿಯನ್ನು ಮದುವೆಯಾಗಿರುವುದಾಗಿಯೂ ಹೇಳಿದ್ದ.

ಈ ಸುಳಿವಿನ ಜಾಡು ಹಿಡಿದು ಪೊಲೀಸರು ತಿರುಪತಿಗೆ ಹೋಗುವಷ್ಟರಲ್ಲಿ ಅಲ್ಲಿಂದ ಕಾಲ್ಕಿತ್ತಿರುವ ಸ್ವಾಮೀಜಿಯು ಯುವತಿಯೊಂದಿಗೆ ದಾವಣಗೆರೆ ಜಿಲ್ಲೆಗೆ ಪರಾರಿಯಾಗಿದ್ದ. ಸ್ವಾಮೀಜಿಯ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಪೊಲೀಸರು ದಾವಣಗೆರೆ ಜಿಲ್ಲೆಗೆ ತೆರಳಿದ್ದರು. ಆದರೆ, ಬಂಧನ ಭೀತಿಯಿಂದ ಅಲ್ಲಿಂದಲೂ ಪರಾರಿಯಾಗಿರುವ ಸ್ವಾಮೀಜಿ ಹಾವೇರಿ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದಾನೆ.

ADVERTISEMENT

ಸ್ವಾಮೀಜಿಯ ಬೆನ್ನು ಬಿದ್ದಿರುವ ವಿಶೇಷ ಪೊಲೀಸ್‌ ತಂಡವು ಆತನ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಿದೆ. ಆದರೆ, ಸ್ವಾಮೀಜಿ ಮತ್ತು ಯುವತಿ ಪದೇಪದೇ ವಾಸ್ತವ್ಯ ಬದಲಿಸುತ್ತಿರುವುದರಿಂದ ಪೊಲೀಸರಿಗೆ ಅವರನ್ನು ಪತ್ತೆ ಮಾಡಲು ತೊಡಕಾಗಿದೆ.

ಆರೋಪಿ ಸ್ವಾಮೀಜಿಯು ಭೀಮಲಿಂಗೇಶ್ವರ ದೇವಾಲಯಕ್ಕೆ ಭಕ್ತರು ದೇಣಿಗೆ ರೂಪದಲ್ಲಿ ನೀಡಿದ್ದ ಸುಮಾರು ₹ 10 ಲಕ್ಷವನ್ನು ಜತೆಯಲ್ಲೇ ತೆಗೆದುಕೊಂಡು ಹೋಗಿದ್ದು, ಭಕ್ತರೂ ವಂಚನೆಗೆ ಒಳಗಾಗಿದ್ದಾರೆ. ವಿಜಯಪುರ ಜಿಲ್ಲೆ ಮುದ್ದೆಬಿಹಾಳದ ಸ್ವಾಮೀಜಿಗೆ ಹಾವೇರಿ ಜಿಲ್ಲೆಯಲ್ಲಿನ ಆಪ್ತರು ಆಶ್ರಯ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿ ಪತ್ತೆ ಕಾರ್ಯ ಚುರುಕುಗೊಳಿಸಿರುವ ಪೊಲೀಸರು ಸ್ವಾಮೀಜಿಯ ಆಪ್ತರು ಹಾಗೂ ಸ್ನೇಹಿತರ ವಿಚಾರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.