ಕೋಲಾರ: ಮಾಲೂರು ತಾಲ್ಲೂಕಿನ ಕ್ಷೇತ್ರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿ ಕರ್ತವ್ಯದಲ್ಲಿದ್ದ ಶಿಕ್ಷಕಿ ಮಂಜುಳಾ ಅವರನ್ನು ಥಳಿಸಿದ್ದ ಅದೇ ಗ್ರಾಮದ ಪೋಷಕ, ಆಟೊ ಚಾಲಕ ಚೌಡಪ್ಪ ಎಂಬುವರನ್ನು ಮಾಸ್ತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎರಡು ದಿನಗಳಿಂದ ಶಾಲೆಗೆ ಏಕೆ ಬಂದಿಲ್ಲವೆಂದು ಆರನೇ ತರಗತಿ ವಿದ್ಯಾರ್ಥಿಯನ್ನು ಮಂಜುಳಾ ಪ್ರಶ್ನಿಸಿದ್ದರು. ನಂತರ ಶಾಲೆಗೆ ಬಂದಿದ್ದ ಆ ವಿದ್ಯಾರ್ಥಿಯ ತಂದೆ ಚೌಡಪ್ಪ (45), ಶಿಕ್ಷಕಿ ಮೇಲೆ ಹಲ್ಲೆ ನಡೆಸಿ ಶಾಲೆಯಿಂದ ಹೊರದಬ್ಬಿದ್ದರು. ಇದನ್ನು ಸಿಬ್ಬಂದಿಯೊಬ್ಬರು ವಿಡಿಯೊ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.
ಗಾಯಗೊಂಡು ಆಸ್ಪತ್ರೆಗೆ ಸೇರಿದ್ದ ಬಂಗಾರಪೇಟೆ ತಾಲ್ಲೂಕಿನ ಪಲವತಿಮ್ಮನಹಳ್ಳಿ ಗ್ರಾಮದ ಶಿಕ್ಷಕಿ ಮಂಜುಳಾ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಯನ್ನು 24 ಗಂಟೆಗಳಲ್ಲಿ ಬಂಧಿಸಿದ್ದಾರೆ. ಆರೋಪಿಯು ಆಂಧ್ರಪ್ರದೇಶದ ವಿಕೋಟದಲ್ಲಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)–2023 ಕಲಂ 74, 132 (ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ), 121 (1), 352ರ (ಉದ್ದೇಶಪೂರ್ವಕ ಅವಮಾನ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರವಿಶಂಕರ್, ಜಗದೀಶ್, ಡಿವೈಎಸ್ಪಿ ಎಂ.ಎಚ್.ನಾಗ್ತೆ, ಇನ್‌ಸ್ಪೆಕ್ಟರ್ ಓಂಪ್ರಕಾಶ್ ಗೌಡ, ಎಎಸ್‌ಐ ಮಂಜುನಾಥ್, ಸಿಬ್ಬಂದಿ ಶಿವಶಂಕರ್, ಕೃಷ್ಣಮೂರ್ತಿ, ಮಂಜುನಾಥ್, ನಿಖಿಲ್ ಅಶೋಕ್ ಹರಿಜನ, ತಾಂತ್ರಿಕ ವಿಭಾಗದ ಮುರಳಿ, ಶ್ರೀನಾಥ್ ತಂಡವು ಆರೋಪಿಯನ್ನು ಬಂಧಿಸಿತ್ತು. ದೂರು ದಾಖಲಾಗಿ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಎಸ್ಪಿ ನಿಖಿಲ್ ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.