ADVERTISEMENT

ವಿಜಯೋತ್ಸವ: ಪೊಲೀಸರ ಕ್ರಮಕ್ಕೆ ಶ್ಲಾಘನೆ

ಪಶು ವೈದ್ಯೆ ಅತ್ಯಾಚಾರ ಪ್ರಕರಣದ ಆರೋಪಿಗಳ ಎನ್‌ಕೌಂಟರ್‌

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 13:34 IST
Last Updated 6 ಡಿಸೆಂಬರ್ 2019, 13:34 IST
ತೆಲಂಗಾಣದ ಪಶು ವೈದ್ಯೆ ಕೊಲೆ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಕೋಲಾರದಲ್ಲಿ ಶುಕ್ರವಾರ ಪೊಲೀಸರಿಗೆ ಸಿಹಿ ತಿನ್ನಿಸಿ ವಿಜಯೋತ್ಸವ ಆಚರಿಸಿದರು.
ತೆಲಂಗಾಣದ ಪಶು ವೈದ್ಯೆ ಕೊಲೆ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಕೋಲಾರದಲ್ಲಿ ಶುಕ್ರವಾರ ಪೊಲೀಸರಿಗೆ ಸಿಹಿ ತಿನ್ನಿಸಿ ವಿಜಯೋತ್ಸವ ಆಚರಿಸಿದರು.   

ಕೋಲಾರ: ತೆಲಂಗಾಣದ ಪಶು ವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಇಲ್ಲಿ ಶುಕ್ರವಾರ ವಿಜಯೋತ್ಸವ ಆಚರಿಸಿದರು.

ಮೆಕ್ಕೆ ವೃತ್ತದಲ್ಲಿ ಪೊಲೀಸ್ ಸಿಬ್ಬಂದಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು, ‘ತೆಲಂಗಾಣ ಪೊಲೀಸರು ಪಶು ವೈದ್ಯೆ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಆರೋಪಿಗಳನ್ನು ಬಂಧಿಸಿ ಎನ್‌ಕೌಂಟರ್‌ ಮಾಡಿದ್ದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲವಾಗಿದೆ. ಅತ್ಯಾಚಾರದ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆಯಿದೆ. ಪೊಲೀಸರು ಪಶು ವೈದ್ಯೆ ಮೇಲಿನ ಅತ್ಯಾಚಾರದ ಆರೋಪಿಗಳನ್ನು ಎನ್‌ಕೌಂಟರ್ ಮಾಡಿ ದಿಟ್ಟತನ ತೋರಿದ್ದಾರೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಅಭಿಪ್ರಾಯಪಟ್ಟರು.

ADVERTISEMENT

‘ಪಶು ವೈದ್ಯೆ ಕೊಲೆ ಪ್ರಕರಣವು ದೇಶದ ಮಹಿಳೆಯರಲ್ಲಿ ಆತಂಕ ಸೃಷ್ಟಿಸಿತ್ತು. ಮಹಿಳೆಯರು ಮನೆಯಿಂದ ಹೊರ ಹೋಗಲು ಭಯಪಡುವಂತಾಗಿತ್ತು. ಪ್ರಕರಣದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿತ್ತು. ಇಂತಹ ಸಂದರ್ಭದಲ್ಲಿ ಪೊಲೀಸರು ಪ್ರಕರಣದ ಆರೋಪಿಗಳ ವಿಚಾರದಲ್ಲಿ ನಡೆದುಕೊಂಡ ರೀತಿ ನಿಜಕ್ಕೂ ಶ್ಲಾಘನೀಯ’ ಎಂದು ಸ್ಮರಿಸಿದರು.

ಪೈಶಾಚಿಕ ಕೃತ್ಯ: ‘ಆರೋಪಿಗಳು ಅಸಹಾಯಕರಾಗಿದ್ದ ವೈದ್ಯೆಯನ್ನು ನೆರವು ನೀಡುವ ಸೋಗಿನಲ್ಲಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು ಪೈಶಾಚಿಕ ಕೃತ್ಯ. ಮಹಿಳಾ ವೈದ್ಯರು ಹಾಗೂ ಸಿಬ್ಬಂದಿಯು ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸಲು ಹಿಂಜರಿಯುವಂತಾಗಿದೆ. ಮಹಿಳೆಯರು ಸುರಕ್ಷಿತವಾಗಿ ಮನೆಗೆ ವಾಪಸ್‌ ಬರುವ ಖಾತರಿ ಇಲ್ಲವಾಗಿದೆ’ ಎಂದು ವಿದ್ಯಾರ್ಥಿನಿ ಉಮಾಗೌಡ ಹೇಳಿದರು.

‘ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಗೆ ಸರ್ಕಾರಗಳು ಹೆಚ್ಚು ಒತ್ತು ಕೊಡಬೇಕು. ಸಂತ್ರಸ್ತ ವೈದ್ಯೆ ಕುಟುಂಬಕ್ಕೆ ಪರಿಹಾರ ನೀಡಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ತೆಲಂಗಾಣ ಪೊಲೀಸರ ಮಾದರಿಯಲ್ಲೇ ಎನ್‌ಕೌಂಟರ್ ಮಾಡಬೇಕು’ ಎಂದು ಸಂಘಟನೆ ಸದಸ್ಯರು ಮನವಿ ಮಾಡಿದರು.

ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ, ಅಧ್ಯಕ್ಷ ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ನಳಿನಿಗೌಡ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.