ADVERTISEMENT

ಕೋಲಾರ: ಅನಗತ್ಯ ಸಿ-ಸೆಕ್ಷನ್‍ ತಡೆಯಲು ಸೂಚನೆ

ಜಿಲ್ಲೆಯಲ್ಲಿ ಸಿಸೇರಿಯನ್‌ ಹೆರಿಗೆ ಪ್ರಮಾಣ ಹೆಚ್ಚುತ್ತಿರುವುದಕ್ಕೆ ಜಿಲ್ಲಾಧಿಕಾರಿ ಎಂ.ಆರ್.ರವಿ ಕಳವಳ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:06 IST
Last Updated 7 ನವೆಂಬರ್ 2025, 7:06 IST
ಕೋಲಾರದಲ್ಲಿ ತಂಬಾಕು ಮುಕ್ತ ಯುವ ಅಭಿಯಾನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಆರ್.ರವಿ ಚಾಲನೆ ನೀಡಿದರು
ಕೋಲಾರದಲ್ಲಿ ತಂಬಾಕು ಮುಕ್ತ ಯುವ ಅಭಿಯಾನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಆರ್.ರವಿ ಚಾಲನೆ ನೀಡಿದರು   

ಕೋಲಾರ: ಜಿಲ್ಲೆಯಲ್ಲಿ ಈ ಸಾಲಿನಲ್ಲಿ ನಡೆದಿರುವ ಒಟ್ಟು ಹೆರಿಗೆಗಳಲ್ಲಿ ಸಿ-ಸೆಕ್ಷನ್ (ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ-ಸಿಸೇರಿಯನ್‌) ಪ್ರಮಾಣ ಏರಿಕೆ ಆಗಿರುವುದು ಗಂಭೀರವಾದ ವಿಚಾರ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಭವನದಲ್ಲಿ ನಡೆದ ಜಿಲ್ಲಾ ಆರೋಗ್ಯ ಮಿಷನ್‍ನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು ಹೆರಿಗೆಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಈ ಪ್ರಮಾಣ ಶೇ 72ರಷ್ಟಿರುವುದು ಆತಂಕಕಾರಿ ವಿಚಾರ. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಪ್ರಮಾಣ ಶೇ 42ರಷ್ಟಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಸೇರಿ ಜಿಲ್ಲೆಯಲ್ಲಿ ಒಟ್ಟು ಪ್ರಮಾಣ ಶೇ 55ರಷ್ಟಿದೆ. ಕೋಲಾರ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣವಿದೆ ಎಂದರು.

ADVERTISEMENT

ಶಸ್ತ್ರಚಿಕಿತ್ಸೆ ಅಗತ್ಯವಿದ್ದಾಗ ಮಾತ್ರ ಸಿ-ಸೆಕ್ಷನ್ ಮಾಡಿಸಬೇಕು. ಅನಗತ್ಯ ಸಿ-ಸೆಕ್ಷನ್‍ಗಳನ್ನು ತಡೆಗಟ್ಟಲು ಎಲ್ಲ ಆಸ್ಪತ್ರೆಗಳು ವಿಶೇಷವಾಗಿ ಖಾಸಗಿ ಆಸ್ಪತ್ರೆಗಳು, ವೈಜ್ಞಾನಿಕ ಮತ್ತು ವೈದ್ಯಕೀಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಕುರಿತು ಕೂಡಲೇ ಸೂಕ್ತ ಪರಿಶೀಲನಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮಗಳಡಿ ಜಿಲ್ಲೆಯಲ್ಲಿ ಲಸಿಕಾಕರಣ ಶೇ 95ರಷ್ಟು ಸಾಧನೆಯೊಂದಿಗೆ ಉತ್ತಮ ಪ್ರಗತಿ ಕಂಡುಬಂದಿದೆ. ಕೋಲಾರ ತಾಲ್ಲೂಕು ಶೇ. 107ರಷ್ಟು ಸಾಧನೆ ಮಾಡಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ 10 'ನಮ್ಮ ಕ್ಲಿನಿಕ್‌'ಗಳು ಸೇರಿದಂತೆ 78 ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಏಪ್ರಿಲ್‍ನಿಂದ ಸೆಪ್ಟೆಂಬರ್ 2025ರ ಅವಧಿಯಲ್ಲಿ ಗರ್ಭಿಣಿಯರ ನೋಂದಣಿ ಶೇ 92ರಷ್ಟಾಗಿದೆ. ಸಂಪೂರ್ಣ ನಾಲ್ಕು ಎಎನ್‍ಸಿ ತಪಾಸಣೆಗಳನ್ನು ಶೇ 91ರಷ್ಟು ತಾಯಂದಿರು ಪಡೆದಿದ್ದಾರೆ ಎಂದು ಹೇಳಿದರು.

ಜಿಲ್ಲೆಯ ಶಿಶು ಮರಣ ದರ ಪ್ರತಿ 1,000 ಜೀವಂತ ಜನನಗಳಿಗೆ 10ರಷ್ಟಿದ್ದು, ತಾಯಂದಿರ ಮರಣ ದರ ಪ್ರತಿ 1,00,000 ಜೀವಂತ ಜನನಗಳಿಗೆ 24ರಷ್ಟಿದೆ. ಈ ಅಂಕಿಅಂಶಗಳನ್ನು ಮತ್ತಷ್ಟು ಕಡಿಮೆ ಮಾಡಲು ಕ್ರಮವಹಿಸಿ ಎಂದು ಸೂಚಿಸಿದರು.

ಜನವರಿಯಿಂದ ಸೆಪ್ಟೆಂಬರ್‌ವರೆಗೆ 99 ಡೆಂಗಿ ಪ್ರಕರಣಗಳು ಮತ್ತು 11 ಚಿಕನ್‌ ಗುನ್ಯಾ ಪ್ರಕರಣಗಳು ದೃಢಪಟ್ಟಿವೆ. ನಿಯಂತ್ರಣಕ್ಕೆ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ದೇಶಿಸಿದರು.

ಜಿಲ್ಲೆಯಲ್ಲಿ ಈ ಅವಧಿಯಲ್ಲಿ 9,076 ನಾಯಿ ಕಡಿತ ಮತ್ತು 232 ಹಾವು ಕಡಿತ ಪ್ರಕರಣಗಳು ವರದಿಯಾಗಿವೆ. ಇಂತಹ ಪ್ರಕರಣಗಳ ನಿರ್ವಹಣೆ ಮತ್ತು ಲಸಿಕೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಹೇಳಿದರು.

ಇದೆ ಸಂದರ್ಭದಲ್ಲಿ ತಂಬಾಕು ಪರಿಣಾಮ ಕುರಿತು ಪೋಸ್ಟರ್ ಬಿಡುಗಡೆ ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಗದೀಶ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಚಾರಿಣಿ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ರವಿ ಕುಮಾರ್ ಎಂ.ವಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಪ್ರಸನ್ನ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣಸ್ವಾಮಿ, ಡಾ.ರಮೇಶ್ ಬಾಬು, ಡಾ.ಸುನೀಲ್, ಡಾ.ಸುಗುಣ, ಜಿಲ್ಲಾ ಪಂಚಾಯಿತಿಯ ಸಹಾಯಕ ಕಾರ್ಯದರ್ಶಿ ವೆಂಕಟಾ ಚಲಪತಿ, ಕೆಎಸ್‌ಆರ್‌ಟಿಸಿ ಅಧಿಕಾರಿ ಭಾಗ್ಯಲಕ್ಷ್ಮಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಮಹಮದ್ ಪಿ., ತಾಲ್ಲೂಕು ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿ

ಕೋಲಾರ ಜಿಲ್ಲೆಯಲ್ಲಿ ಸಿಸೇರಿಯನ್ (ಸಿ–ಸೆಕ್ಷನ್‌) ಹೆರಿಗೆ ಪ್ರಕರಣ ಹೆಚ್ಚುತ್ತಿರುವ ಸಂಬಂಧ ಕಳೆದ ತಿಂಗಳು ‘ಪ್ರಜಾವಾಣಿ’ಯಲ್ಲಿ ‘ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿದ ಸಿಸೇರಿಯನ್‌ ಹೆರಿಗೆ!’ ಎಂಬ ವಿಶೇಷ ವರದಿ ಪ್ರಕಟವಾಗಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ 2024–25ನೇ ಸಾಲಿನಲ್ಲಿ ಶೇ 70 ಹಾಗೂ 2025–26ನೇ ಸಾಲಿನಲ್ಲಿ ಶೇ 72ರಷ್ಟು ಪ್ರಮಾಣ ದಾಖಲಾಗಿರುವ ಬಗ್ಗೆ ಅಂಕಿಅಂಶಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿತ್ತು.

‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.