ADVERTISEMENT

ಕೋಲಾರ| ರಾಜಕಾರಣಿಗಳಿಂದಲ್ಲ; ಯುವಕರಿಂದ ದೇಶ ಬಲಿಷ್ಠ: ಯು.ಟಿ.ಖಾದರ್

ತಾಳ್ಮೆ ಇದ್ದವರ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ವಿಧಾನಸಭೆ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 5:55 IST
Last Updated 9 ಫೆಬ್ರುವರಿ 2026, 5:55 IST
<div class="paragraphs"><p>ಕೋಲಾರದಲ್ಲಿ ವಿ.ಆರ್‌.ಸುದರ್ಶನ್‌ ನೇತೃತ್ವದಲ್ಲಿ ಜ್ಯೋತಿ ಎಜುಕೇಷನಲ್‌ ಟ್ರಸ್ಟ್‌ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾನುವಾರ ವಿವಿಧ ಕ್ಷೇತ್ರದ ಸಾಧಕರಿಗೆ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಪ್ರದಾನ ಮಾಡಿದರು </p></div>

ಕೋಲಾರದಲ್ಲಿ ವಿ.ಆರ್‌.ಸುದರ್ಶನ್‌ ನೇತೃತ್ವದಲ್ಲಿ ಜ್ಯೋತಿ ಎಜುಕೇಷನಲ್‌ ಟ್ರಸ್ಟ್‌ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾನುವಾರ ವಿವಿಧ ಕ್ಷೇತ್ರದ ಸಾಧಕರಿಗೆ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಪ್ರದಾನ ಮಾಡಿದರು

   

ಕೋಲಾರ: ರಾಜಕಾರಣಿಗಳು ಹಾಗೂ ಶ್ರೀಮಂತರು ಬಲಿಷ್ಠರಾದರೆ ಭಾರತ ದೇಶ ಬಲಿಷ್ಠವಾಗಲು ಸಾಧ್ಯವಿಲ್ಲ. ಯುವಶಕ್ತಿ ಬಲಿಷ್ಠವಾದಾಗ ಮಾತ್ರ ದೇಶ ಶಕ್ತಿಯುತವಾಗಲು ಸಾಧ್ಯ‌ ಎಂದು ವಿಧಾನಸಬೆ ಅಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ನಗರದ ‌ಜ್ಯೋತಿ ಎಜುಕೇಷನಲ್ ಟ್ರಸ್ಟ್‌ನಿಂದ ಭಾನುವಾರ ಗಾಣಿಗೇತರ ಸಮುದಾಯಗಳ ‌ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳ ಸಾಧಕರಿಗೆ ಜ್ಯೋತಿಶ್ರೀ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

ಈ ದೇಶದ ಸಂಸ್ಕೃತಿ, ಪರಂಪರೆ ಉಳಿಸಿಕೊಳ್ಳುವ ಮೂಲಕ ಈ ದೇಶವನ್ನು ಬಲಿಷ್ಠಗೊಳಿಸೋಣ. ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ. ಇಲ್ಲಿನ ಯುವಶಕ್ತಿ, ಮಾನವ ಸಂಪನ್ಮೂಲ ವಿಶ್ವವನ್ನೇ ಬೆರಗು ಮಾಡಿದೆ. ನಮಗೆ ಗೌರವ ಸಿಗುತ್ತಿದೆ ಎಂದು ತಿಳಿಸಿದರು.

ಹೆಚ್ಚು ಅಂಕ ಪಡೆದವರಷ್ಟೇ ಯಶಸ್ಸು ಕಾಣಲ್ಲ. ಶಿಕ್ಷಣದೊಂದಿಗೆ ಮಾನವೀಯತೆ, ಆತ್ಮವಿಶ್ವಾಸ, ದೇವರ ಭಯ, ತಾಳ್ಮೆ, ಛಲ ಹಾಗೂ ಪರಿಶ್ರಮ ಇರುವವನ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹಿಂದೆ ನಾನು ಕೂಡ ತಮ್ಮ ರೀತಿಯೇ ಸಭಾಂಗಣದ ಕುರ್ಚಿಗಳಲ್ಲಿ ಕುಳಿತಿದ್ದೆ. ಈಗ ವಿಧಾನಸಭೆ ಅಧ್ಯಕ್ಷನಾಗಿದ್ದೇನೆ. ಈ ಸ್ಥಾನವನ್ನು ನಾಳೆ ತಾವೂ ಅಲಂಕರಿಸಬಹುದು. ಎಲ್ಲರಿಗೂ ಆ ಶಕ್ತಿ ಇದೆ. ನಮಗಿಂತ ದೊಡ್ಡ ಸ್ಥಾನಕ್ಕೆ ಏರಬಹುದು ಎಂದರು.

ತಂದೆ ತಾಯಿಯ ಆಸ್ತಿಗೆ ಕಾಯದಿರಿ. ತಾವೇ ದೇಶದ ಸಂಪತ್ತಾಗಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ. ರಾಜನಾಗುವವನ ಕಿರೀಟ ವಜ್ರಗಳಲ್ಲಿ ಇಲ್ಲ, ಅವನ ತಾಳ್ಮೆಯಲ್ಲಿದೆ. ಈ ದೇಶದಲ್ಲಿ ಸಮಾನತೆ, ಸರ್ವರೂ ಒಂದೇ ಎಂಬ ಸಂದೇಶವನ್ನು ನಮ್ಮ ಸಂವಿಧಾನ ಸಾರಿದೆ. ದೇವರೆ ನಮ್ಮ ನಡುವೆ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಎಲ್ಲರಿಗೂ ಅದೇ ಕಾಲು, ಕೈ, ತಲೆ, ರಕ್ತ ಕೊಟ್ಟಿದ್ದಾನೆ. ಇನ್ನು ನಮ್ಮನಮ್ಮಲ್ಲಿ ಏಕೆ ಈ ತಾರತಮ್ಯ ಎಂದು ಪ್ರಶ್ನಿಸಿದರು.

ಸಮಾನತೆಯಿಂದ ಎಲ್ಲಾ ಜಾತಿಗಳ ಮಕ್ಕಳನ್ನು ಪುರಸ್ಕರಿಸುತ್ತಿರುವ ಜ್ಯೋತಿ ಎಜುಕೇಷನಲ್‌ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.

ಸಂಸದ ಎಂ.ಮಲ್ಲೇಶಬಾಬು ಮಾತನಾಡಿ, ‘ಆಯಾ ಜಾತಿಗಳ ಆಧಾರದ ಮೇಲೆ ಪ್ರತಿಭಾ ಪುರಸ್ಕಾರ ನಡೆಯುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲಿ ವಿ.ಆರ್‌.ಸುದರ್ಶನ್ ಅವರು ಇಡೀ ಸಮುದಾಯಕ್ಕೆ ಜಾತಿ ಬೇಧ ಎಣಿಸದೇ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಇದು ಶ್ಲಾಘನೀಯ ಕಾರ್ಯ’ ಎಂದು ಬಣ್ಣಿಸಿದರು.

ಇಂತಹ ಅಪರೂಪದ ಕಾರ್ಯಕ್ರಮಕ್ಕೆ ತಮ್ಮ ಒಂದು ತಿಂಗಳ ವೇತನವನ್ನು ಕೊಡುಗೆಯಾಗಿ ನೀಡುತ್ತೇನೆ ಎಂದರು.

ತಂತ್ರಜ್ಞಾನದ ವೈಭವೀಕರಣ ಸಲ್ಲ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ‘ತಂತ್ರಜ್ಞಾನದ ವೈಭವೀಕರಣ ಯುವ ಸಮುದಾಯಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದೆ, ಈ ತಂತ್ರಜ್ಞಾನ ಎಂದಿಗೂ ಮನುಷ್ಯನ ಭಾವನೆಗೆ ಸರಿಸಾಟಿಯಲ್ಲ ಎಂಬುದನ್ನು ಮರೆಯಬಾರದು’ ಎಂದು ಎಚ್ಚರಿಸಿದರು.

ಮೊಬೈಲ್‍ನಿಂದಾಗಿ ಇಂದು ಅವಿಭಕ್ತ ಕುಟುಂಬಗಳು ಇಲ್ಲವಾಗಿದೆ. ಸಂಬಂಧಗಳ ನಡುವೆ ಸಂವಹನ ಇಲ್ಲವಾಗಿದೆ. ಮನೆಯ ಒಂದು ಕೊಠಡಿಯಲ್ಲಿ ಮೊಬೈಲ್‍ಗೆ ದಾಸರಾದರೆ ಅವರನ್ನು ಸಂದೇಶದ ಮೂಲಕ ಕರೆಯುವ ಕೆಲಸವಾಗುತ್ತಿದೆ ಎಂದು ವಿಷಾದಿಸಿದರು.

ಇದೇ ಸಂದರ್ಭದಲ್ಲಿ ಇತರೆ ಸಮುದಾಯಗಳ ವಿವಿಧ ಕ್ಷೇತ್ರಗಳ ಸಾಧಕರಾದ ಪಿಚ್ಚಳ್ಳಿ ಶ್ರೀನಿವಾಸ್, ಬಿ.ವಿ.ಗೋಪಿನಾಥ್, ಪ್ರೊ.ಬಿ.ವಿ.ಕೃಷ್ಣಪ್ಪ, ಅತಾವುಲ್ಲಾಖಾನ್, ಸುರೇಶ್ ಜೇಮ್ಸ್, ಪಾಪಿರೆಡ್ಡಿ, ತುರಾಂಡಹಳ್ಳಿ ರವಿ, ಕಾಗತಿ ವೆಂಕಟರತ್ನ ಅವರಿಗೆ ಜ್ಯೋತಿಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಲೇಖಕ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ ತಾಯಿ ಕಸ್ತೂರಿ ಗಾಂಧಿ ಸಿನಿಮಾ ಪ್ರದರ್ಶನ, ಸಿ.ಜಿ.ಕೃಷ್ಣಸ್ವಾಮಿ ನಿರ್ದೇಶನದ ಕಾಲಜ್ಞಾನಿ ಕನಕ ಎಂಬ ನಾಟಕ ಪ್ರದರ್ಶನಗೊಂಡಿತು.

ಟ್ರಸ್ಟ್ ಸಂಸ್ಥಾಪಕ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಡಾ.ಶಂಕರ್, ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜಯ್ಯ, ಸಾಹಿತಿ ಚಂದ್ರಶೇಖರ ನಂಗಲಿ, ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಕಸಾಪ ಜಿಲ್ಲಾ ಅಧ್ಯಕ್ಷ ಗೋಪಾಲಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಸರ್, ಟ್ರಸ್ಟ್ ಅಧ್ಯಕ್ಷ ಎಂ.ಆರ್.ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ನಾಗನಾಳ ಮಂಜುನಾಥ್, ಉಪಾಧ್ಯಕ್ಷೆ ಭಾರತಿದೇವಿ, ಖಜಾಂಚಿ ಅಪ್ಪಯ್ಯಶೆಟ್ಟಿ, ಲೆಕ್ಕಪರಿಶೋಧಕ ಎಸ್.ಕೆ.ವೆಂಕಟರಾಂ, ಸಂಘಟನಾ ಕಾರ್ಯದರ್ಶಿ ಕೆ.ರವಿ, ಮಾಜಿ ಅಧ್ಯಕ್ಷ ರಾಧಾಕೃಷ್ಣ, ನಿರ್ದೇಶಕರಾದ ವಿ.ಆರ್.ನಾಗರಾಜ್, ವೀರಭದ್ರಪ್ಪ, ಅರುಣ್, ಅರ್ಜುನ್, ವ್ಯವಸ್ಥಾಪಕ ಸುನಿಲ್‌ ಇದ್ದರು.

ಸೆಲ್ಫಿ ಫೋಟೊ ತೆಗೆದು ತೆಗೆದು ಎಲ್ಲರೂ ಸೆಲ್ಫಿಶ್‌ (ಸ್ವಾರ್ಥಿ) ಆಗಿದ್ದಾರೆ. ಅವರ ಮುಖ ಅವರೇ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಪ್ರೀತಿ ವಿಶ್ವಾಸ ಸೋದರತೆ ಬೆಳೆಸಿಕೊಳ್ಳಬೇಕಿದೆ
ಯು.ಟಿ.ಖಾದರ್‌ ವಿಧಾನಸಭೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.