ಕೆಜಿಎಫ್ ಚಾಂಪಿಯನ್ ರೀಫ್ಸ್‌ನಲ್ಲಿರುವ ಬ್ರಿಟಿಷ್ ನಿರ್ಮಿತ ಬಂಕರ್
ಕೆಜಿಎಫ್: ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷದ ಈ ಸಂದರ್ಭದಲ್ಲಿ ಗಡಿ ಭಾಗದಿಂದ ಸಾವಿರಾರು ಕಿ.ಮೀ ದೂರದಲ್ಲಿರುವ ಕೆಜಿಎಫ್ ನಗರದಲ್ಲಿ ವರ್ಷಗಳ ಇತಿಹಾಸ ಸಾರುವ ಬಂಕರ್‌ಗಳು ಅಚ್ಚರಿ ಮೂಡಿಸುತ್ತಿವೆ.
ಎರಡನೇ ಮಹಾಯುದ್ಧದಲ್ಲಿ ಬ್ರಿಟಿಷರು ತಮ್ಮ ಅಧೀನದಲ್ಲಿದ್ದ ಭಾರತೀಯರನ್ನು ಯುದ್ಧಕ್ಕೆ ಬಳಸಿಕೊಂಡಿದ್ದರು. ಅದೇ ರೀತಿ ಭಾರತದಲ್ಲಿ ತಾವು ಸ್ಥಾಪಿಸಿದ್ದ ಬೆಲೆ ಬಾಳುವ ಆಸ್ತಿಯನ್ನು ರಕ್ಷಿಸಿಕೊಳ್ಳಲು ಈ ಬಂಕರ್‌ಗಳನ್ನು ನಿರ್ಮಿಸಿದ್ದರು.
ಶತ್ರುಗಳು ಚೆನ್ನೈ ಹಾಗೂ ಕೆಜಿಎಫ್ ನಗರದಲ್ಲಿರುವ ಚಿನ್ನದ ಗಣಿ ಮೇಲೆ ಬಾಂಬ್ ದಾಳಿ ನಡೆಸಬಹುದು ಎಂಬ ಅಂಜಿಕೆ ಬ್ರಿಟಿಷರಲ್ಲಿತ್ತು. ಆದ್ದರಿಂದ ಚೆನ್ನೈ ಮತ್ತು ಕೆಜಿಎಫ್ ನಗರದಲ್ಲಿ ಬ್ರಿಟಿಷ್ ಅಧಿಕಾರಿಗಳು ಮತ್ತು ಭಾರತೀಯ ಗಣಿಕಾರ್ಮಿಕರ ರಕ್ಷಣೆಗಾಗಿ ಬಂಕರ್‌ಗಳನ್ನು ನಿರ್ಮಾಣ ಮಾಡಿದರು. ಇಂದಿಗೂ ಈ ಬಂಕರ್ ಗಳು ಎರಡನೇ ಮಹಾಯುದ್ಧದ ಕಥೆಯನ್ನು ಹೇಳುತ್ತಾ , ಜೀವಂತ ನಿದರ್ಶನಗಳಾಗಿವೆ.
ಗಾರೆಯಿಂದ ರಚಿಸಲ್ಪಟ್ಟಿರುವ ಬಂಕರ್ ಗಳು ಒಳಗಡೆಯಿಂದ ಮಣ್ಣಿನಿಂದ ಮುಚ್ಚಲ್ಪಟ್ಟಿವೆ. ಬಂಕರ್ ಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದವು ಎಂಬ ವರದಿಯನ್ನು ನೀಡಲು ಯುದ್ಧದ ಸಮಯದಲ್ಲಿದ್ದ ಕಾರ್ಮಿಕರು ಯಾರೂ ಈಗ ಬದುಕಿಲ್ಲ. ಆದರೂ ಕೆಲ ದಾಖಲೆಗಳ ಪ್ರಕಾರ ನಗರದ ಚಾಂಪಿಯನ್ ರೀಫ್ಸ್ ಮತ್ತು ಮಾರಿಕುಪ್ಪಂ ಪ್ರದೇಶದಲ್ಲಿ ಬಂಕರ್ ಗಳು ನಿರ್ಮಾಣವಾಗಿದ್ದವು ಎಂದು ತಿಳಿದುಬರುತ್ತದೆ. ಬಂಕರ್ ಒಳಭಾಗ ಮಣ್ಣಿನಿಂದ ಮುಚ್ಚಿದ್ದರೂ, ಇಂದಿಗೂ ಹೊರ ಮೇಲ್ಮೈ ಗಟ್ಟಿಮುಟ್ಟಾಗಿದೆ.
ಹಳೇ ತಲೆಮಾರಿನ ಗಣಿ ಕಾರ್ಮಿಕರು ಹೇಳುವಂತೆ ಬಾಂಬ್ ಬೀಳುವ ಸನ್ನಿವೇಶದಲ್ಲಿ ಬಂಕರ್ ನಲ್ಲಿ ಗುಂಪು ಗುಂಪಾಗಿ ಇರಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಯೇ ಅಡುಗೆ ಮಾಡಿಕೊಳ್ಳಲು ಕೂಡ ಸಾಧ್ಯವಿತ್ತು. ಆಗಲೇ ಗಣಿ ಪ್ರದೇಶದಲ್ಲಿ ವಿದ್ಯುತ್ ವ್ಯವಸ್ಥೆ ಇದ್ದರೂ, ಅದರ ಬಳಕೆಯನ್ನು ಬಂಕರ್ ನಲ್ಲಿ ಮಾಡಲಾಗಿತ್ತೇ ಎಂಬ ಮಾಹಿತಿ ದೊರೆಯುತ್ತಿಲ್ಲ.
ಬ್ರಿಟಿಷರು ವ್ಯಾಪಾರ ಮಾಡುವ ಸಲುವಾಗಿ ಬಂದಿದ್ದರೂ, ಅವರು ನಗರದಲ್ಲಿ ನಿರ್ಮಿಸಿದ ಬಂಗಲೆಗಳು, ರಸ್ತೆಗಳು, ಬಂಕರ್ ಗಳು, ಸ್ಮಶಾನಗಳು ಎಲ್ಲವೂ ಇಂಗ್ಲೆಂಡಿನ ಶೈಲಿಯನ್ನೇ ಹೋಲುತ್ತಿವೆ. ಅದರೆ ಅವುಗಳನ್ನು ಸ್ಮಾರಕಗಳನ್ನಾಗಿ ಮಾಡುವ ಪ್ರಯತ್ನಗಳು ಅಷ್ಟಾಗಿ ಕಾಣುತ್ತಿಲ್ಲ ಎನ್ನುವುದು ಸ್ಥಳೀಯರ ಬೇಸರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.