ADVERTISEMENT

ಅವ್ಯವಸ್ಥೆಯ ದಿಗ್ದರ್ಶನ: ಸಿಬ್ಬಂದಿಗೆ ತರಾಟೆ

ಸರ್ಕಾರಿ ಬಾಲಕರ ಹಾಸ್ಟೆಲ್‌ಗೆ ಜಿ.ಪಂ ಅಧ್ಯಕ್ಷರ ದಿಢೀರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 13:08 IST
Last Updated 22 ಫೆಬ್ರುವರಿ 2020, 13:08 IST
ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಸರ್ಕಾರಿ ಬಾಲಕರ ಹಾಸ್ಟೆಲ್‌ಗೆ ಶನಿವಾರ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಉಗ್ರಾಣದಲ್ಲಿದ್ದ ತರಕಾರಿ ಪರಿಶೀಲಿಸಿದರು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಸರ್ಕಾರಿ ಬಾಲಕರ ಹಾಸ್ಟೆಲ್‌ಗೆ ಶನಿವಾರ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಉಗ್ರಾಣದಲ್ಲಿದ್ದ ತರಕಾರಿ ಪರಿಶೀಲಿಸಿದರು.   

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿನ ಸರ್ಕಾರಿ ಬಾಲಕರ ಹಾಸ್ಟೆಲ್‌ಗೆ ಶನಿವಾರ ದಿಢೀರ್‌ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ವಿದ್ಯಾರ್ಥಿನಿಲಯದ ಅವ್ಯವಸ್ಥೆ ಕಂಡು ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಹಾಸ್ಟೆಲ್‌ನ ಅಡುಗೆ ಕೋಣೆ, ಊಟದ ಕೊಠಡಿ, ಉಗ್ರಾಣ, ಶೌಚಾಲಯ, ವಸತಿ ಕೊಠಡಿಗಳ ಸ್ಥಿತಿಗತಿ ಪರಿಶೀಲಿಸಿದ ಅಧ್ಯಕ್ಷರು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.

‘ಹಾಸ್ಟೆಲ್‌ ಸಿಬ್ಬಂದಿ ವೇಳಾಪಟ್ಟಿ ಪ್ರಕಾರ ಊಟ, ತಿಂಡಿ ಕೊಡುತ್ತಿಲ್ಲ. ನೀರಿನ ಸಮಸ್ಯೆ ಗಂಭೀರವಾಗಿದ್ದು, ಸ್ನಾನಕ್ಕೆ ಬಿಸಿ ನೀರು ಬರುತ್ತಿಲ್ಲ. ಸೊಳ್ಳೆ ಕಾಟ ಹೆಚ್ಚಿದ್ದು, ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಸೊಳ್ಳೆ ಪರದೆ ಕೊಟ್ಟಿಲ್ಲ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ADVERTISEMENT

‘ಹಾಸ್ಟೆಲ್‌ನಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ಕೊಠಡಿಗಳ ಸಮಸ್ಯೆ ಗಂಭೀರವಾಗಿದೆ. ಇದರಿಂದ ಓದಿಗೆ ಸಮಸ್ಯೆಯಾಗುತ್ತಿದೆ. ಮೂಲಸೌಕರ್ಯ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ವಿದ್ಯಾರ್ಥಿಗಳು ಅಲವತ್ತುಕೊಂಡರು.

ಅಧ್ಯಕ್ಷರ ಭೇಟಿ ವೇಳೆ ಸಾಕಷ್ಟು ವಿದ್ಯಾರ್ಥಿಗಳು ಮೊಬೈಲ್‌ ಬಳಕೆಯಲ್ಲಿ ನಿರತರಾಗಿದ್ದರು. ಇದರಿಂದ ಅಸಮಾಧಾನಗೊಂಡ ಅಧ್ಯಕ್ಷರು, ‘ಓದುವ ಸಮಯದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸಬಾರದು, ತುರ್ತು ಸಮಯ ಹಾಗೂ ಅಗತ್ಯವಿದ್ದಾಗ ಮಾತ್ರ ಹಾಸ್ಟೆಲ್‌ನ ಮೇಲ್ವಿಚಾರಕರ ಅನುಮತಿ ಪಡೆದು ಮೊಬೈಲ್ ಬಳಸಿ’ ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದರು.

ಓದು ಕುಂಠಿತ: ‘ವಿದ್ಯಾರ್ಥಿಗಳು ಹೆಚ್ಚಾಗಿ ಮೊಬೈಲ್‌ ಬಳಸುವುದರಿಂದ ಅವರ ಓದು ಕುಂಠಿತಗೊಳ್ಳುತ್ತದೆ. ವಿದ್ಯಾರ್ಥಿಗಳು ತರಗತಿಯಿಂದ ಹಾಸ್ಟೆಲ್‌ಗೆ ಬಂದ ನಂತರ ಮೊಬೈಲ್ ಬಳಸಿದರೆ ಕ್ರಮ ಕೈಗೊಳ್ಳಿ. ಓದುವ ಸಮಯದಲ್ಲಿ ಮೊಬೈಲ್ ಗೀಳಿಗೆ ಬಿದ್ದು ವಿದ್ಯಾರ್ಥಿಗಳು ಭವಿಷ್ಯ ಹಾಳು ಮಾಡಿಕೊಳ್ಳದಂತೆ ಎಚ್ಚರ ವಹಿಸಿ’ ಎಂದು ಸಿಬ್ಬಂದಿಗೆ ಸೂಚಿಸಿದರು.

‘ಮೊಬೈಲ್‌ನಿಂದ ಅನುಕೂಲ ಹಾಗೂ ಅನಾನುಕೂಲ ಎರಡೂ ಉಂಟು. ಜ್ಞಾನಾರ್ಜನೆಗೆ ಮೊಬೈಲ್‌ ಬಳಸಿದರೆ ತಪ್ಪಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಮತ್ತು ಇಂಟರ್‌ನೆಟ್‌ ಸೌಲಭ್ಯ ದುರ್ಬಳಕೆಯಾಗುತ್ತಿದೆ. ಪರೀಕ್ಷೆ ಸಮೀಪಿಸುತ್ತಿದ್ದು, ಮೊಬೈಲ್‌ ಬಳಕೆ ಬದಲಿಗೆ ಓದಿನತ್ತ ಗಮನ ಕೇಂದ್ರೀಕರಿಸಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಹಾಸ್ಟೆಲ್‌ನ ಅಡುಗೆ ಮನೆ, ಊಟದ ಕೊಠಡಿ, ಶೌಚಾಲಯ ಹಾಗೂ ಮಕ್ಕಳ ಕೊಠಡಿಗಳಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಕಂಡು ಸಿಡಿಮಿಡಿಗೊಂಡ ಅಧ್ಯಕ್ಷರು, ‘ನಿಮ್ಮ ಮನೆಯನ್ನು ಇದೇ ರೀತಿ ಇಟ್ಟುಕೊಳ್ಳುತ್ತೀರಾ. ಹಾಸ್ಟೆಲ್‌ ಸ್ವಚ್ಛವಾಗಿ ಇಟ್ಟುಕೊಳ್ಳಲು ಏನು ಸಮಸ್ಯೆ?’ ಎಂದು ಸಿಬ್ಬಂದಿ ವಿರುದ್ಧ ಹರಿಹಾಯ್ದರು.

ನಾಮಫಲಕ ಅಳವಡಿಸಿಲ್ಲ: ಮಕ್ಕಳ ಬಯೋಮೆಟ್ರಿಕ್ ಹಾಜರಾತಿ ದಾಖಲೆ ಮತ್ತು ಆಹಾರ ಪದಾರ್ಥಗಳ ದಾಸ್ತಾನು ನಿರ್ವಹಣಾ ಪುಸ್ತಕ ತೋರಿಸುವಂತೆ ಅಧ್ಯಕ್ಷರು ಕೇಳಿದರು. ಆಗ ಅಡುಗೆ ಸಿಬ್ಬಂದಿ, ‘ಹಾಸ್ಟೆಲ್‌ ಮೇಲ್ವಿಚಾರಕ ನರಸಿಂಹಯ್ಯ ಅವರು ಅನ್ಯ ಕಾರ್ಯನಿಮಿತ್ತ ಹೊರ ಹೋಗಿದ್ದಾರೆ. ಅವರು ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿಲ್ಲ’ ಎಂದು ಹೇಳಿದರು.

ಇದಕ್ಕೆ ಗರಂ ಆದ ಅಧ್ಯಕ್ಷರು, ‘ಮೇಲ್ವಿಚಾರಕರಿಗೆ ಹಾಸ್ಟೆಲ್‌ನಲ್ಲೇ ಇದ್ದು ಕೆಲಸ ಮಾಡಬೇಕೆಂಬ ಜವಾಬ್ದಾರಿಯಿಲ್ಲವೆ. ವಾರ್ಡನ್‌ಗಳ ಸಭೆ ಮಾಡಿ 30 ದಿನವಾಗಿದೆ. ಸರಿಯಾದ ನಾಮಫಲಕ ಅಳವಡಿಸಿಲ್ಲ. ದೂರು ಪೆಟ್ಟಿಗೆ ತೆರೆದು ಬಿಡಲಾಗಿದೆ ಯಾಕೆ? ಮೇಲ್ವಿಚಾರಕರು ಬಂದ ತಕ್ಷಣ ನನಗೆ ಕರೆ ಮಾಡಿಸಿ’ ಎಂದು ಸಿಬ್ಬಂದಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.