ADVERTISEMENT

ಉದ್ಯೋಗ ಖಾತರಿ- ಭ್ರಷ್ಟತೆ ತಡೆ ಕಷ್ಟ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 9:20 IST
Last Updated 10 ಫೆಬ್ರುವರಿ 2011, 9:20 IST

ಕೊಪ್ಪಳ: ಮಹತ್ವಾಕಾಂಕ್ಷೆಯ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟುವುದು ಕಷ್ಟದ ಕೆಲಸ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಖಾತೆ ಸಚಿವ ಜಗದೀಶ ಶೆಟ್ಟರ್ ಅಸಹಾಯಕತೆ ವ್ಯಕ್ತಪಡಿಸಿದರು.ನಗರದಲ್ಲಿ ಬುಧವಾರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಹಲವಾರು ಲೋಪ-ದೋಷಗಳಿವೆ. ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ಆಗುತ್ತಿಲ್ಲ ಎಂಬುದನ್ನು ಈಚೆಗೆ ನವದೆಹಲಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಡಾ.ಮನಮೋಹನ್‌ಸಿಂಗ್, ಯು.ಪಿ.ಎ. ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಹೇಳಿದ್ದಾರೆ. ಜನಪ್ರತಿನಿಧಿಗಳು, ಜನರು ಹಾಗೂ ಅಧಿಕಾರಿಗಳು ಕೈಜೋಡಿಸಿ, ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಭ್ರಷ್ಟಾಚಾರ ನಿಗ್ರಹ ಸಾಧ್ಯ ಎಂದು ಪ್ರತಿಪಾದಿಸಿದರು.

ಈ ಯೋಜನೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟಲು ವಿವಿಧ ಹಂತದಲ್ಲಿ ಪ್ರಯತ್ನ ನಡೆಯಬೇಕು. ಈ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಪ್ರತಿ ಜಿಲ್ಲೆಗೆ ಓಂಬುಡ್ಸ್‌ಮನ್‌ಗಳ ನೇಮಕ ಪ್ರಕ್ರಿಯೆ ಆರಂಭಗೊಂಡಿದೆ ಎಂದರು.

ಓಂಬುಡ್ಸ್‌ಮನ್ ತನಿಖೆ ನಡೆಸಿ, ಸಲ್ಲಿಸುವ ವರದಿಯನ್ನು ಪರಿಶೀಲಿಸಿದ ನಂತರ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂಬುದನ್ನು ನಿರ್ಧರಿಸಿ ಕ್ರಮ ಜರುಗಿಸಲಾಗುತ್ತದೆ. ಈಗಾಗಲೇ 15 ಜಿಲ್ಲೆಗಳಲ್ಲಿ ನೇಮಕಗೊಂಡಿರುವ ಓಂಬುಡ್ಸ್‌ಮನ್ ಸಲ್ಲಿಸುವ ವರದಿ ಆಧಾರದ ಮೇಲೆ, ಅವರನ್ನು ನೇಮಕ ಮಾಡಿರುವ ಉದ್ದೇಶ ಈಡೇರಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುವುದು. ನಂತರ ಸುಧಾರಣೆ ಇಲ್ಲವೇ ಬದಲಾವಣೆ ತರಲು ಯೋಚನೆ ಮಾಡಲಾಗುವುದು ಎಂದು ಅವರು ಹೇಳಿದರು.

ಕೇವಲ ಸಿ ಮತ್ತು ಡಿ ಗುಂಪಿನ ಅಧಿಕಾರಿಗಳ ವಿರುದ್ಧ ದೂರುಗಳ ಕುರಿತು ತನಿಖೆ ನಡೆಸಲು ಓಂಬುಡ್ಸ್‌ಮನ್ ಅವರಿಗೆ ಅಧಿಕಾರ ನೀಡಲಾಗಿದೆ. ಎ ಮತ್ತು ಬಿ ಗುಂಪಿನ ಹಿರಿಯ ಅಧಿಕಾರಿಗಳನ್ನು ಅವರ ವ್ಯಾಪ್ತಿಯಿಂದ ಹೊರಗೆ ಇಟ್ಟಿರುವುದು ಎಷ್ಟು ಸರಿ ಎಂಬ ಪ್ರಶ್ನೆಗೆ, ಈ ವಿಷಯದಲ್ಲಿ ಸಹ ಈಗಾಗಲೇ ನೇಮಕಗೊಂಡಿರುವ ಓಂಬುಡ್ಸ್‌ಮನ್ ಸಲ್ಲಿಸುವ ವರದಿಯನ್ನು ಆಧರಿಸಿ ಸೂಕ್ತ ಬದಲಾವಣೆ ಮಾಡಲಾಗುವುದು. ಈ ನೇಮಕ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.