
ಕಾರಟಗಿ: ಕರ್ನಾಟಕ ಸುವರ್ಣ ಸಂಭ್ರಮ, 68ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ಬಾಗಲಕೋಟ ಜಿಲ್ಲೆಯ ಇಳಕಲ್‌ನ ಈರಣ್ಣ ಜಿ. ಕುಂದರಗಿಮಠ, ಕಲಬುರಗಿಯಿಂದ ರಾಜಧಾನಿಯ ವಿಧಾನಸೌಧದವರೆಗೆ ಸುಮಾರು 860 ಕಿ.ಮೀ. ದೂರದವರೆಗೆ ಹ್ಯಾಂಡಲ್ ಇಲ್ಲದ ವಿಶೇಷ ಬೈಕ್ ಮೂಲಕ ಕನ್ನಡದ ಜಾಗೃತಿ ಮೂಡಿಸುತ್ತಾ ತೆರಳುವ ಸಾಹಸಕ್ಕೆ ಕೈಹಾಕಿದ್ದಾರೆ.
ಗುರುವಾರ ಪಟ್ಟಣದ ಮಾರ್ಗವಾಗಿ ತೆರಳುತ್ತಿದ್ದ ಕುಂದರಗಿಮಠಗೆ ಕನ್ನಡಾಭಿಮಾನಿಗಳು ಅದ್ದೂರಿ ಸ್ವಾಗತ ನೀಡಿ, ಬೀಳ್ಕೊಟ್ಟರು.
ಕನ್ನಡ ರಕ್ಷಣಾ ವೇದಿಕೆಯಿಂದ ಶರಣಪ್ಪ ಸಂಗಟಿ ಮತ್ತಿತರ ಪದಾಧಿಕಾರಿಗಳು ಕನಕದಾಸ ವೃತ್ತದಲ್ಲಿ ಶಾಲು, ಹೂಮಾಲೆ ಹಾಕಿ ಸನ್ಮಾನಿಸಿದರು.
ಈರಣ್ಣ ಜಿ. ಕುಂದರಗಿಮಠ ಮಾತನಾಡಿ, ಸರ್ಕಾರ ನಾಡಿನ ಭಾಷೆ, ಜಲ, ನೆಲದ ಬಗ್ಗೆ ಎಷ್ಟೇ ಮುತುವರ್ಜಿ ವಹಿಸಿ ಕೆಲಸ ಮಾಡಿದರೂ, ಸಮುದಾಯದ ಬೆಂಬಲ ಅಗತ್ಯ. ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್, ಲಿಮ್ಕಾ ಬುಕ್‌ನಲ್ಲಿ ದಾಖಲೆ ಮಾಡಿರುವ ತಾವು ನಾಡಿನ ಭಾಷೆಯ ಬಗ್ಗೆ ಜಾಗೃತಿ ಮೂಡಿಸುತ್ತಾ ರಾಜಧಾನಿಗೆ ತೆರಳುತ್ತಿರುವೆ. ನನ್ನ ಶ್ರಮ ಸಾರ್ಥಕವಾಗಲು ನಮ್ಮ ಮಾತೃಭಾಷೆಯನ್ನು ಎಲ್ಲರೂ ಪ್ರೀತಿಸಿ, ರಕ್ಷಿಸಿ, ಬೆಳೆಸಬೇಕು ಎಂಬುದು ನನ್ನ ಕಳಿಕಳಿಯಾಗಿದೆ ಎಂದರು.
ಸಮೀಪದ ಮರ್ಲಾನಹಳ್ಳಿ ತಲುಪಿದ ಕುಂದರಗಿಮಠಗೆ ಅಭಿಮಾನಿಗಳು, ಪಲ್ಲೆದ, ಅನ್ನಪೂರ್ಣಮ್ಮ ಕುಟುಂಬದವರು, ಲಕ್ಷ್ಮಣ ಮತ್ತವರ ಗೆಳೆಯರ ಬಳಗವು ಪಟಾಕಿ ಸಿಡಿಸಿ ಸ್ವಾಗತಿಸಿಕೊಂಡರು.
ಯುವ ಮುಖಂಡ ಸೋಮನಾಥ ದೊಡ್ಮನೆ ತಮ್ಮ ಅಭಿಮಾನಿಗಳೊಂದಿಗೆ ಸನ್ಮಾನಿಸಿ, ಬೀಳ್ಕೊಟ್ಟರು.
ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಆಟೋ ಚಾಲಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.