ಗಂಗಾವತಿ: ತಾಲ್ಲೂಕಿನ ಸಾಣಾಪುರ, ವಿರೂಪಾಪುರಗಡ್ಡೆ, ಹನುಮನಹಳ್ಳಿ, ರಂಗಾಪುರ, ಆನೆಗೊಂದಿ ಭಾಗದಲ್ಲಿನ ಅನಧಿಕೃತ ಹೋಂಸ್ಟೇಗಳಿಗೆ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ ಈ ಹಿಂದೆಯೇ ಲಗಾಮು ಹಾಕಿದ್ದರೆ ಈಗ ಸಾಣಾಪುರ ಕೆರೆ ಬಳಿ ಯುವತಿಯರ ಮೇಲೆ ಅತ್ಯಾಚಾರ, ಯುವಕನ ಕೊಲೆಯಂಥ ದುರ್ಘಟನೆಗಳು ನಡೆಯುತ್ತಿರಲಿಲ್ಲವೇನೋ? ಎನ್ನುವ ಚರ್ಚೆಗಳು ನಡೆಯುತ್ತಿವೆ.
ಇದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಆದ ಘಟನೆ ಎನ್ನುತ್ತಾರೆ ಕೆಲ ಸಂಘಟನೆಗಳ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳು.
ಪ್ರವಾಸಿಗರಿಗೆ ಮನೆಯಲ್ಲಿ ವಾಸ್ತವ್ಯವಿರಿಸಿ ಉಪಚಾರ ಮಾಡಿ ಊರಿನ ಸಂಸ್ಕೃತಿ, ಆಹಾರ ಪದ್ಧತಿ, ಸಂಪ್ರದಾಯದ ಮಾಹಿತಿ ನೀಡಿ ಕಾಲ ಕಳೆಯುವಂತೆ ಮಾಡಿಕೊಡುವ ಆಶಯದೊಂದಿಗೆ ಸರ್ಕಾರ ಹೋಂಸ್ಟೇಗಳಿಗೆ ಅವಕಾಶ ಕಲ್ಪಿಸಿದೆ. ಆದರೆ, ಸಾಣಾಪುರ, ಆನೆಗೊಂದಿ ಭಾಗದಲ್ಲಿ ವಾಣಿಜ್ಯ ಸ್ವರೂಪ ಪಡೆದ ಹೋಂಸ್ಟೇಗಳು ಆ ಆಶಯಗಳನ್ನೇ ಗಾಳಿಗೆ ತೂರಿವೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
2023-24ರಲ್ಲಿ ಸಾಣಾಪುರ ಗ್ರಾಮದ ಅನಧಿಕೃತ ಹೋಂಸ್ಟೇವೊಂದರಲ್ಲಿ ತಂಗಿದ್ದ ಹೊಸಪೇಟೆ ಮೂಲದ ಯುವಕ ಯುವತಿ, ಜಗಳ ಮಾಡಿಕೊಂಡಿದ್ದರಿಂದ ಯುವಕ ನೇಣಿಗೆ ಶರಣಾಗಿದ್ದ. ಇವರು ಯಾವ ಕಾರಣಕ್ಕೆ ಬಂದಿದ್ದರೂ, ಇವರಿಬ್ಬರ ಸಂಬಂಧವೇನು ಎನ್ನುವ ಮಾಹಿತಿಯೂ ಬಹಿರಂಗವಾಗಿಲ್ಲ.
ಎಲ್ಲವೂ ಅನಧಿಕೃತ: ಹೋಂ ಸ್ಟೇ ನಡೆಸಲು ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಪರವಾನಗಿ ಪಡೆಯುವುದು ಕಡ್ಡಾಯ. ಆದರೆ, ಸಾಣಾಪುರ, ಆನೆಗೊಂದಿ ಭಾಗದಲ್ಲಿ ನಡೆಯುವ ಹೋಂಸ್ಟೇಗಳು ಯಾವ ಅನುಮತಿಯನ್ನೂ ಪಡೆದಿಲ್ಲ.
‘ಪರವಾನಗಿ ಪಡೆಯದವರ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹಿಂದೇಟುಹಾಕುತ್ತಿದೆ’ ಎನ್ನುತ್ತಾರೆ ಗಂಡುಗಲಿ ಕುಮಾರರಾಮ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಹರನಾಯಕ.
ಸಾಣಾಪುರದಲ್ಲಿ 20ಕ್ಕೂ ಹೆಚ್ಚು, ರಂಗಾಪುರ, ವಿರೂಪಾಪುರ ಗಡ್ಡೆಯಲ್ಲಿ ತಲಾ 2, ಹನುಮನಹಳ್ಳಿ 7 ಮತ್ತು ಆನೆಗೊಂದಿ ಗ್ರಾಮದಲ್ಲಿ 8ಕ್ಕೂ ಹೆಚ್ಚು ಹೋಂಸ್ಟೇಗಳು ನಡೆಯುತ್ತಿರುವೆ. ಪರವಾನಗಿ ಇಲ್ಲದಿದ್ದರೂ ಗೂಗಲ್ ನಕ್ಷೆಯಲ್ಲಿ ಸ್ಥಳ ಸಮೇತ ವಿಭಿನ್ನ ಹೆಸರುಗಳು ಕಂಗೊಳಿಸುತ್ತವೆ.
ಹೋಂ ಸ್ಟೇಗಳಿಗೆ ಬರುವ ಪ್ರವಾಸಿಗರಿಗೆ ಕಡಿಮೆ ಹಣಕ್ಕೆ ಬಾಡಿಗೆ ನೀಡುವ ಮಾಲೀಕರು ಪ್ರವಾಸಿಗರಿಂದ ದಾಖಲಾತಿ ಪಡೆಯುವುದಿಲ್ಲ. ಪ್ರವಾಸಿಗರ ಹಿನ್ನಲೆ, ಬಂದಿರುವ ಉದ್ದೇಶವನ್ನೂ ತಿಳಿಯುವುದಿಲ್ಲ. ಇದು ಕೂಡ ಮೇಲಿಂದ ಮೇಲೆ ಅಪರಾಧ ಚಟುವಟಿಕೆಗಳಿಗೆ ಕಾರಣವಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.
ಬಹುತೇಕ ಹೋಂಸ್ಟೇಗಳು ಜನವಸತಿ ಪ್ರದೇಶಗಳಲ್ಲಿದ್ದು ಬಾಡಿಗೆ ಬರುವ ಪ್ರವಾಸಿಗರು ರಾತ್ರಿ ವೇಳೆ ಧ್ವನಿವರ್ಧಕ ಬಳಸುವುದು, ಪಾನಮತ್ತರಾಗಿ ಚಿರುವುದು, ಪಾಶ್ಚಿಮಾತ್ಯ ಸಂಸ್ಕೃತಿ ತೊಡುಗೆಗಳಲ್ಲಿ ಸಂಚಾರ ಮಾಡುವುದರಿಂದ ಅವುಗಳ ನೆರೆಯವರಿಗೆ ನಿತ್ಯ ಕಿರಿಕಿರಿಯಾಗುತ್ತಿದೆ. ತಡರಾತ್ರಿಯೂ ಓಡಾಡುವುದರಿಂದ ಮಹಿಳೆಯರ ನಿತ್ಯಕರ್ಮಕ್ಕೆ ತೊಂದರೆಯಾಗುತ್ತಿದೆ.
ಹೋಂ ಸ್ಟೇಗಳ ಮಾಲೀಕರು ತಾವು ಪಡೆಯುವ ಹಣದ ಬಗ್ಗೆ ಎಲ್ಲಿಯೂ ಫಲಕ ಹಾಕುವುದಿಲ್ಲ. ಪ್ರವಾಸಿಗರಿಗೆ ನೀಡುವ ಸೌಲಭ್ಯಗಳ ಬಗ್ಗೆಯೂ ತಿಳಿಸುವುದಿಲ್ಲ. ಅವುಗಳ ಕಡಿವಾಣ ಹಾಕಬೇಕಾದ ಅಗತ್ಯವೂ ಇದೆ ಎನ್ನುತ್ತಾರೆ ಸ್ಥಳೀಯರು.
ಹೋಂಸ್ಟೇಗಳಲ್ಲಿ ಹೆಚ್ಚಿನ ಶುಲ್ಕ ವಸೂಲಿ ದಾಖಲೆ ಪಡೆಯದೆ ರೂಮ್ ಬಾಡಿಗೆ ಪ್ರವಾಸಿಗರಿಂದ ನೆರೆ-ಹೊರೆಯವರಿಗೆ ಕಿರಿಕಿರಿ
ಪ್ರವಾಸಕ್ಕೆ ಬರುವ ವಿದೇಶಿಗರಿಗೆ ಭಾರತೀಯ ಸಂಸ್ಕೃತಿ ಉಡುಗೆ ತೊಡುಗೆಗಳನ್ನ ಧರಿಸುವ ಬಗ್ಗೆ ಸರ್ಕಾರ ನಿಯಮ ಮಾಡಬೇಕು. ಆಕ್ರಮ ಮದ್ಯ ಮಾರಾಟಕ್ಕೆ ಪೊಲೀಸರು ಕಡಿವಾಣ ಹಾಕಬೇಕು.ಮಂಜುನಾಥ ಇಂಡಿ ಕಿಷ್ಕಿಂಧಾ ಯುವ ಚಾರಣ ಬಳಗದ ಸದಸ್ಯ
ಸಾಣಾಪುರ ಆನೆಗೊಂದಿ ಭಾಗದಲ್ಲಿ ಅನಧಿಕೃತ ಹೋಂ ಸ್ಟೇ ರೆಸಾರ್ಟ್‌ಗಳಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳಿಂದಲೇ ಅಪರಾಧಗಳು ಜರುಗುತ್ತಿವೆ. ಅನಧಿಕೃತವಾಗಿರುವ ಹೋಂ ಸ್ಟೇಗಳನ್ನು ಜಿಲ್ಲಾಡಳಿತ ತೆರವು ಮಾಡಿಸಬೇಕು.ಪಂಪಣ್ಣ ನಾಯಕ ಜಿಲ್ಲಾಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ
ಹೋಂ ಸ್ಟೇ ಆರಂಭಿಸುವವರು ತಮ್ಮ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಅನುಮತಿ ಪಡೆಯಬೇಕು. ನಮ್ಮಿಂದ ಯಾರೂ ಅನುಮತಿ ಪಡೆದಿಲ್ಲ.ನಾಗರಾಜ್ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.