
ಕೊಪ್ಪಳ: ‘12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಅಂಬಿಗರ ಚೌಡಯ್ಯ ಆದಿಯಾಗಿ ಅಂದಿನ ಶರಣರು ಸಾಮಾಜಿಕ ಮೌಢ್ಯಗಳ ನಿರ್ಮೂಲನೆ ಮಾಡುವ ಮೂಲಕ ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ್ದರು’ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಬುಧವಾರ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ‘ಅಂಬಿಗರ ಚೌಡಯ್ಯನವರು ತಮ್ಮ ಕಾಯಕದ ಮೂಲಕ ನಿಜ ಶರಣರಾಗಿದ್ದರು. ಅವರು ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದರು’ ಎಂದರು.
‘ಅಂಬಿಗರ ಚೌಡಯ್ಯ ಸಮುದಾಯ ಭವನಕ್ಕೆ ₹2 ಕೋಟಿ ಕೊಡಬೇಕೆನ್ನುವ ಸಮಾಜದ ಮುಖಂಡರ ಬೇಡಿಕೆ ಇದ್ದು, ಈಗ ₹50 ಲಕ್ಷ ಕೊಡುವ ಕೆಲಸ ಮಾಡುತ್ತಿದ್ದೇನೆ. ಉಳಿದ ಹಣವನ್ನೂ ನೀಡಲು ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ‘ಬಸವಣ್ಣನವರ ಅನುಭವ ಮಂಟಪದಲ್ಲಿ ಪ್ರಮುಖ ವಚನಕಾರರಾಗಿದ್ದ ಅಂಬಿಗರ ಚೌಡಯ್ಯನವರು ಕಾಯಕ, ವಚನ ಮತ್ತು ದಾಸೋಹವನ್ನು ತಮ್ಮ ಜೀವನದಲ್ಲಿ ನಡೆಸಿಕೊಂಡು ಬಂದಿದ್ದರು. ಅವರು ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದರು’ ಎಂದು ಸ್ಮರಿಸಿದರು.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ವಿ.ಗಡಾದ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಸಮಾಜದ ಮುಖಂಡರಾದ ರಾಜು ಕಲೆಗಾರ, ಹುಲುಗಪ್ಪ ಭಾರಕೇರ, ವಿರೂಪಾಕ್ಷ ಭಾರಕೇರ, ಈರಪ್ಪ ಕರಿಗಾರ, ರಮೇಶಪ್ಪ ಕಬ್ಬೇರ, ಹುಲುಗಪ್ಪ ನರೇಗಲ್, ಶಿವ್ವಪ್ಪ ಕಬ್ಬೇರ, ಉದಯ ಕಬ್ಬೇರ, ಹನುಮಂತಪ್ಪ ಗಿಡ್ಡಾರಿ, ಹನುಮಂತಪ್ಪ ಎಲಿಗಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಅಂಬಿಗರ ಚೌಡಯ್ಯನವರು ಕಾಯಕ ನಿಷ್ಠೆ ಮೂಲಕ ಮೂಲಕ ಬಸವಣ್ಣನವರ ಪರಮ ಭಕ್ತರಾಗಿದ್ದರು. ಅವರ ವಚನಗಳು ಸಮಾಜದ ಗೊಡ್ಡು ಸಂಪ್ರದಾಯಗಳನ್ನು ಹೋಗಲಾಡಿಸುತ್ತವೆರಾಜಕುಮಾರ ಡಿ.ಎಸ್. ಇತಿಹಾಸ ಪ್ರಾಧ್ಯಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.