ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ 4ನೇ ವರ್ಷದ ವಾರ್ಷಿಕೋತ್ಸವದ ನಿಮಿತ್ತ ಅರ್ಜುನ ಗಜಾನನ ಯುವಕ ಮಂಡಳಿಯಿಂದ ತೋಟದ ಆಂಜನೇಯ ದೇವಸ್ಥಾನ ಆವರಣದಲ್ಲಿ ಗುರುವಾರ ಗಣೇಶ ಹಬ್ಬದ ಕ್ರೀಡಾಕೂಟಗಳು ನಡೆದವು.
ಕ್ರೀಡಾಕೂಟ ಬೆಳಿಗ್ಗೆಯಿಂದ ಸಂಜೆವರೆಗೆ ನಡೆದಿದ್ದು, ಗುಂಡು ಎತ್ತುವ, ಕಬಡ್ಡಿ, ತೆಂಗಿನಕಾಯಿ ಒಡೆಯುವುದು (ಕೈಯಿಂದ ಗುದ್ದುವ) ಸ್ಪರ್ಧೆಗಳು ಜರುಗಿದವು.
ಗುಂಡು ಎತ್ತುವ ಸ್ಪರ್ಧೆಗೆ ಸ್ಥಳೀಯರು ಸೇರಿದಂತೆ ಕಮಲಾಪುರ, ಜಂಗಮರ ಕಲ್ಗುಡಿ, ಬಸವನದುರ್ಗಾ ಗ್ರಾಮ ಸೇರಿ ಗಂಗಾವತಿ ನಗರದಿಂದ 9 ಜನರು ಭಾಗವಹಿಸಿದ್ದರು. ಅಂತಿಮವಾಗಿ ಜಂಗಮರ ಕಲ್ಗುಡಿ ಗ್ರಾಮದ ಮಂಜುನಾಥ ಹೊಸ್ಕೇರಾ ಪ್ರಶಸ್ತಿ ಗೆದ್ದು, ₹1100 ನಗದು ಬಹುಮಾನ ಪಡೆದರು.
ತೆಂಗನಕಾಯಿ ಒಡೆಯುವ ಸ್ಪರ್ಧೆಯಲ್ಲಿ 8 ಜನ ಭಾಗವಹಿಸಿದ್ದು, ಬಸವನದುರ್ಗಾ ಗ್ರಾಮದ ಮಂಜುನಾಥ ಜಂಗಾರ್ ಪ್ರಶಸ್ತಿ ಗೆದ್ದು, ₹1100 ನಗದು ಬಹುಮಾನ ಸ್ವೀಕರಿಸಿದರು.
ಕಬಡ್ಡಿ ಪಂದ್ಯಾವಳಿಯಲ್ಲಿ ಆನೆಗೊಂದಿ, ಬಸವನದುರ್ಗಾ, ಬಂಡಿಬಸಪ್ಪ ಕ್ಯಾಂಪ್, ಕಮಲಾಪುರ ಸೇರಿ ಗಂಗಾವತಿಯಿಂದ ಒಟ್ಟು 12 ತಂಡಗಳು ಭಾಗವಹಿಸಿದ್ದವು.
ಕಬಡ್ಡಿ ಪಂದ್ಯಾವಳಿಯ ಫೈನಲ್‌ನಲ್ಲಿ ಬಸವದುರ್ಗಾ ತಂಡವು ಆನೆಗೊಂದಿ ಕಿಷ್ಕಿಂಧಾ ಯುವ ಬಳಗದ ವಿರುದ್ಧ 2 ಅಂಕಗಳ ಅಂತರದಿಂದ ಗೆಲುವು ಸಾಧಿಸಿ, ನಗದು ಬಹುಮಾನ ಪಡೆಯಿತು.
ನಿರ್ಣಯಕರಾಗಿ ಹೊನ್ನಪ್ಪನಾಯಕ, ಕುಮಾರಸ್ವಾಮಿ ನಿರ್ವಹಿಸಿದರು. ಗ್ರಾ.ಪಂ ಸದಸ್ಯ ತಿಮ್ಮಪ್ಪ ಬಾಳೆಕಾಯಿ, ಸಂತೋಷ, ಕ್ರೀಡಾಕೂಟ ಆಯೋಜಕರಾದ ದರ್ಶನ, ದೀಪಕ, ಚಂದು, ಪವನ ಸೇರಿದಂತೆ ಆನೆಗೊಂದಿ, ಬಸವನದುರ್ಗಾ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.