ADVERTISEMENT

ಕಾಂಗ್ರೆಸ್‌ನಿಂದ ತುಷ್ಠೀಕರಣ ರಾಜಕಾರಣ: ಹೇಮಲತಾ ನಾಯಕ ಆರೋಪ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 4:25 IST
Last Updated 20 ಏಪ್ರಿಲ್ 2024, 4:25 IST
ಹೇಮಲತಾ ನಾಯಕ
ಹೇಮಲತಾ ನಾಯಕ   

ಕೊಪ್ಪಳ: ‘ಮಹಿಳೆಯರ ರಕ್ಷಣೆಯ ವಿಚಾರದಲ್ಲಿ ನಿಷ್ಕಾಳಜಿ ಮತ್ತು ಅಗೌರವ ತೋರುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ತುಷ್ಠೀಕರಣದ ರಾಜಕಾರಣ ಮಾಡುತ್ತಿದೆ’ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಆರೋಪಿಸಿದರು.

‘ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದೆ. ಆದರೆ ಶಕ್ತಿ ಯೋಜನೆಯಲ್ಲಿ ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿರುವ ಪಡಿಪಾಟಲು ಹೇಳತೀರದಂತಾಗಿದೆ. ಸರಿಯಾಗಿ ಬಸ್‌ ಸೌಲಭ್ಯ ಕಲ್ಪಿಸಿ ಬಳಿಕ ಯೋಜನೆ ಜಾರಿಗೆ ತರಬೇಕಿತ್ತು. ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿಯನ್ನು ಕ್ಯಾಂಪಸ್‌ನಲ್ಲಿಯೇ ಹತ್ಯೆ ಮಾಡಲಾಗಿದೆ. ಈ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ’ ಎಂದು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ನಮ್ಮ ಪಕ್ಷವೂ ಉಜ್ವಲ, ಮುದ್ರಾ ಹೀಗೆ ಅನೇಕ ಜನಪರ ಯೋಜನೆಗಳನ್ನು ಜನರಿಗೆ ನೀಡಿದ್ದೇವೆ. ಅವುಗಳನ್ನು ಜನರ ಮನೆ ಹಾಗೂ ಮನಕ್ಕೆ ತಲುಪಿಸುವ ಕೆಲಸ ಮಾಡಿದ್ದೇವೆ’ ಎಂದರು.

ADVERTISEMENT

ಸಂಗಣ್ಣ ಕರಡಿ ಕಾಂಗ್ರೆಸ್‌ ಸೇರ್ಪಡೆ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ’ಅವರು ಬಿಜೆಪಿಯಲ್ಲಿಯೇ ಉಳಿದುಕೊಳ್ಳಬೇಕಿತ್ತು ಎನ್ನುವುದು ನನ್ನ ಅಭಿಲಾಷೆಯಾಗಿತ್ತು. ಕಾಂಗ್ರೆಸ್ ಸೇರಿದ್ದು ವೈಯಕ್ತಿಕ ವಿಚಾರ. ಅವರು ಎಲ್ಲಿಯೇ ಇದ್ದರೂ ಗೌರವವಂತೂ ಇದ್ದೇ ಇರುತ್ತದೆ. ಸಂಗಣ್ಣ ಕರಡಿ ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಂಡಿದ್ದರಿಂದ ಪಕ್ಷದಲ್ಲಿನ ಗೊಂದಲ ನಿವಾರಣೆಯಾಗಿದೆ. ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್‌ ಗೆಲುವು ಪಡೆಯುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯ ಕೊಪ್ಪಳ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಪಾಟೀಲ, ಗೀತಾ ಮುತ್ತಾಳ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.