
ಅಳವಂಡಿ: ‘ಕಟಾವಿಗೆ ಬಂದಿದ್ದ ಬಾಳೆ ಬೆಳೆಗೆ ಬೆಂಕಿ ಹತ್ತಿ ಪರಿಣಾಮ 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ಬೆಳೆವು ಸುಟ್ಟು ಭಸ್ಮವಾಗಿದೆ.
ಕೊಪ್ಪಳ ತಾಲ್ಲೂಕಿನ ಅಳವಂಡಿ ಹೋಬಳಿಯ ಬೇಳೂರು ಗ್ರಾಮದ ರೈತ ಪಕೀರಪ್ಪ ಸುಣಗಾರ ಅವರ ಎರಡು ಎಕರೆ ಜಮೀನಿನಲ್ಲಿ ಬೆಳೆದ ಬಾಳೆ ಸಂಪೂರ್ಣ ಭಸ್ಮವಾಗಿದೆ.
ಸುಮಾರು ₹ 5 ಲಕ್ಷ ಖರ್ಚು ಮಾಡಿ ಬೆಳೆದಿದ್ದ ಬಾಳೆ ಬೆಳೆ ಉತ್ತಮ ಫಸಲು ನೀಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತನ ಪರಿಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಬಾಳೆ ತೋಟ ಮಾತ್ರವಲ್ಲದೆ ಬಾಳೆ ತೋಟದಲ್ಲಿ ಅಳವಡಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಿಪ್ ಹಾಗೂ ಸ್ಪ್ರಿಂಕ್ಲರ್‌ಗಳು ಬೆಂಕಿಯಲ್ಲಿ ಕರಕಲಾಗಿವೆ. ಸ್ಥಳಕ್ಕೆ ಕೊಪ್ಪಳದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸಿದರು.
‘ಬಾಳೆ ಬೆಳೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸುಮಾರು ಹದಿನೈದು ಲಕ್ಷ ರುಪಾಯಿ ಲಾಭದ ನೀರೀಕ್ಷೆಯಲ್ಲಿದ್ದೆ. ಆದರೆ ಬೆಳೆಗೆ ಯಾರೋ ಅಪರಿಚಿತರು ಬೆಂಕಿ ಹಚ್ಚಿದ ಪರಿಣಾಮ ಸಂಪೂರ್ಣ ಬೆಳೆ ಸುಟ್ಟು ಹೋಗಿದೆ. ಈ ಬಗ್ಗೆ ಸಂಬಂಧಪಟ್ಟ ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಷ್ಟಕ್ಕೊಳಗಾದ ತೋಟವನ್ನು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ರೈತ ಪಕೀರಪ್ಪ ಸುಣಗಾರ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.