ಕೊಪ್ಪಳ: ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿರುವ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು, ಜಾನುವಾರುಗಳ ಬಳಕೆಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿ ಜಿಲ್ಲಾ ಬಚಾವೊ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಉಪವಿಭಾಗಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರಿಗೆ ಮನವಿ ಸಲ್ಲಿಸಿದರು. ’ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಈ ಕುರಿತು ಕ್ರಮ ಕೈಗೊಳ್ಳಲಾಗುವುದು’ ಎಂದು ಮಾಲಗಿತ್ತಿ ತಿಳಿಸಿದರು.
ಜಿಲ್ಲಾಡಳಿತದ ಭವನದ ಮುಂಭಾಗದಲ್ಲಿ ಜಾನುವಾರುಗಳನ್ನು ತಂದು ಪ್ರತಿಭಟಿಸಲಾಯಿತು. ಬಳಿಕ ಅನುಮತಿ ಸಿಗದ ಹೊರತಾಗಿಯೂ ಜಾನುವಾರುಗಳನ್ನು ಬಲ್ಡೋಟಾ ಒಳಗಡೆ ಕಳುಹಿಸುವ ಮೂಲಕ ಹೋರಾಟ ತೀವ್ರಸ್ವರೂಪ ಪಡೆದುಕೊಂಡಿತು.
‘ಬಸಾಪುರ ಗ್ರಾಮದ ಸರ್ವೆ ಸಂಖ್ಯೆ 143ರ 44.35 ಎಕರೆ ವಿಸ್ತೀರ್ಣದ ಸಾರ್ವಜನಿಕ ಕೆರೆಯನ್ನು ಅತಿಕ್ರಮಣ ಮಾಡಲಾಗಿದೆ. ಕೆರೆಗೆ ಹೋಗುವ ರಸ್ತೆ ಬಂದ್ ಮಾಡಿದ ಬಲ್ದೋಟಾ ಕಂಪನಿ ಮೇಲೆ ಕ್ರಮ ಜರುಗಿಸಬೇಕು. ಕಾಂಪೌಂಡ್ ತೆರವು ಮಾಡಬೇಕು’ ಎಂದು ಹೋರಾಟಗಾರರು ಆರೋಪಿಸಿದರು.
ಸಂಘಟನೆಯ ಜಂಟಿ ಕ್ರಿಯಾ ವೇದಿಕೆ ಮುಖಂಡರಾದ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ. ಗೋನಾಳ, ಬಸವರಾಜ ಶೀಲವಂತರ, ಮಂಜುನಾಥ ಜಿ. ಗೊಂಡಬಾಳ, ಶರಣು ಗಡ್ಡಿ, ಮುದುಕಪ್ಪ ಹೊಸಮನಿ, ಎಸ್.ಎ. ಗಫಾರ್, ಭೀಮಸೇನ ಕಲಕೇರಿ, ಕನಕಪ್ಪ ಪೂಜಾರ, ಲಿಂಗರಾಜ ನವಲಿ, ಗಾಳೆಪ್ಪ ಮುಂಗೋಲಿ, ಮಂಗಳೇಶ ರಾಠೋಡ, ಕಾಶಪ್ಪ ಚಲುವಾದಿ, ಶರಣು ಶೆಟ್ಟರ್, ಮಂಜುನಾಥ ಕವಲೂರ, ಯಮನೂರಪ್ಪ ಹಾಲಳ್ಳಿ, ಪ್ರಕಾಶ ಎಂ, ಭೀಮಪ್ಪ, ಸುಂಕಪ್ಪ ಮೀಸಿ, ಶಿವಪ್ಪ ಹಡಪದ. ಹನುಮೇಶ, ಭರಮಪ್ಪ, ಮಾರುತಿ, ಯಮನೂರಪ್ಪ, ಮೂಕಪ್ಪ ಬಸಾಪುರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಬಾಧಿತ ಪ್ರದೇಶಗಳಿಗೆ ಜನಪ್ರತಿನಿಧಿಗಳು ಭೇಟಿ ನೀಡಲು ಆಗ್ರಹ | ಶಾಸಕ, ಸಚಿವ ತಂಗಡಗಿ ವಿರುದ್ಧ ಹೋರಾಟಗಾರರ ಆಕ್ರೋಶ | ಕೊಪ್ಪಳ ತಾಲ್ಲೂಕಿನಲ್ಲಿರುವ ಬಸಾಪುರ ಕೆರೆ
ಕಾರ್ಖಾನೆಗಳಿಂದ ಅನೇಕ ಗ್ರಾಮಗಳ ಜನರ ಆರೋಗ್ಯ ಹದಗೆಟ್ಟಿದೆ. ಅವರ ಆರೋಗ್ಯ ತಪಾಸಣೆ ಆಗಬೇಕು. ಉಕ್ಕಿನ ಕಾರ್ಖಾನೆ ವಿಸ್ತರಣೆಯನ್ನು ಸಂಪೂರ್ಣವಾಗಿ ಕೈ ಬಿಡಬೇಕುಅಲ್ಲಮಪ್ರಭು ಬೆಟ್ಟದೂರು ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.