ಕುಷ್ಟಗಿ: ‘ಮಠಗಳಿಗೆ ದೇಣಿಗೆ ಕೊಡದಿದ್ದರೂ ಪರವಾಗಿಲ್ಲ. ಸಮಾಜದಲ್ಲಿರುವ ಬಡ ಮಕ್ಕಳ ವಿದ್ಯಭ್ಯಾಸಕ್ಕೆ, ವಿದ್ಯಾರ್ಥಿಗಳ ಹಾಸ್ಟೆಲ್ ನಡೆಸಲು ಸ್ವಂತ ದುಡಿಮೆಯಿಂದ ಬಂದ ಸಂಪತ್ತಿನಲ್ಲಿ ಸ್ವಲ್ಪ ಭಾಗ ನೀಡಿ ಸಮಾಜದ ಋಣಭಾರ ಇಳಿಸಿಕೊಳ್ಳಿ’ ಎಂದು ಪಂಚಮಸಾಲಿ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ಪಂಚಮಸಾಲಿ ಸಮಾಜ ಸಂಘಟನೆ ತಾಲ್ಲೂಕು ಘಟಕದ ಏರ್ಪಡಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಧಕರು, ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
‘ಶೈಕ್ಷಣಿಕ ಕ್ಷೇತ್ರದಲ್ಲಿ ಪಂಚಮಸಾಲಿ ಸಮಾಜ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ. ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯೇ ನಡೆಯುತ್ತಿದೆ. 2ಎ ಮೀಸಲಾತಿ ನೀಡಲು ಸರ್ಕಾರ ಕಣ್ತೆರೆದರೆ ಪ್ರಜ್ಞಾವಂತ ಸಮಾಜ ಎನಿಸಿಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಉತ್ತಮ ವಿದ್ಯೆ ಕೊಡಿಸುವ ಶೈಕ್ಷಣಿಕ ಪ್ರಜ್ಞೆ ಬರಬೇಕಿದೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ‘ಶೈಕ್ಷಣಿಕವಾಗಿ ಬೆಳೆದರೂ ಮಾನವೀಯ ಮೌಲ್ಯಗಳಿಂದ ದೂರ ಸರಿಯುತ್ತಿದ್ದೇವೆ. ಸಮಾಜ ಎಡವುತ್ತಿರುವುದು ಎಲ್ಲಿ ಎಂಬ ಚಿಂತನೆ ಮಾಡಬೇಕು’ ಎಂದ ಅವರು, ‘ಪಂಚಮಸಾಲಿ ಸಮಾಜದ ಹಾಸ್ಟೆಲ್‌ಗೆ ಸರ್ಕಾರದ ಅನುದಾನದಲ್ಲಿ ₹10 ಲಕ್ಷ ನೆರವು ನೀಡಲಾಗುವುದು’ ಎಂದು ಹೇಳಿದರು.
ಮಾಜಿ ಶಾಸಕ ಕೆ.ಶರಣಪ್ಪ ಮಾತನಾಡಿ, ‘ಪಂಚಮಸಾಲಿ ಸಮಾಜದಲ್ಲಿ ಶೈಕ್ಷಣಿಕ ಜಾಗೃತಿ ಹೆಚ್ಚಬೇಕು’ ಎಂದರು.
ಸಾನ್ನಿಧ್ಯ ವಹಿಸಿದ್ದ ಮಲ್ಲಿಕಾರ್ಜುನ ದೇವರು, ಅಧ್ಯಕ್ಷತೆ ವಹಿಸಿದ್ದ ಲಿಂಗಾಯತ ಪಂಚಮಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಕೆ.ಮಹೇಶ, ಬಸವರಾಜ ಹಳ್ಳೂರು, ಡಾ.ಮಹಾಂತೇಶ ಬುಕನಟ್ಟಿ ಸೇರಿದಂತೆ ಇತರರು ಮಾತನಾಡಿದರು.
ನಿವೃತ್ತ ಎಂಜಿನಿಯರ್ ದೇವೇಂದ್ರಗೌಡ ಮೇಟಿ, ಚಾರ್ಟರ್ಡ್ ಅಕೌಂಟರ್ ಸಂಗಮೇಶ ಚಿಟ್ಟಿ, ಶಿವಪ್ಪ ಗೆಜ್ಜಲಗಟ್ಟಿ, ನಾಗರಾಜ ಎಲಿಗಾರ, ಗಿರಿಜಾ ಪೊಲೀಸ್ ಪಾಟೀಲ, ಮಹಾಂತೇಶ ಅಗಸಿಮುಂದಿನ, ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ ಇತರರು ಇದ್ದರು.
ಪಂಚಮಸಾಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಮಾಜದ ನಿವೃತ್ತ ನೌಕರರು ಹಾಗೂ ವಿಶೇಷ ಸಾಧಕರನ್ನು ಗೌರವಿಸಲಾಯಿತು.
ಹನುಮಂತಪ್ಪ ತೋಟದ ನಿರೂಪಿಸಿದರು. ಸಿದ್ದಪ್ಪ ಕೌದಿ ಸ್ವಾಗತಿಸಿದರು. ಪಂಚಮಸಾಲಿ ಸಮಾಜದ ಹಿರಿಯರು, ಯುವಕರು ಮತ್ತು ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನೌಕರಿ ಇರುವ ವರನಿಗಾಗಿ ಕಾಯುವ ಬದಲು ಕಾಯಕಪ್ರಜ್ಞೆ ಉತ್ತಮ ಗುಣ ಸಂಸ್ಕಾರಯುತ ವ್ಯಕ್ತಿ ರೈತನಾದರೂ ಸರಿ ಆತನಿಗೆ ಕನ್ಯೆ ಕೊಡಲು ಹಿಂಜರಿಯಬಾರದು.– ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.