ಕೊಪ್ಪಳ: ’ಅಕ್ಕಿ ಬೇಡ, ಏನೂ ಬೇಡ ಎಂದು ನೀವು ಹೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ಕೊಟ್ಟುಬಿಡುವೆ. ಅದೇ ಹಣದಲ್ಲಿ ನಿಮ್ಮೂರಿಗೆ ರಸ್ತೆ ಮಾಡಿಸಿಕೊಡುವೆ’ ಎಂದು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರೂ ಆದ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಕುಕನೂರು ತಾಲ್ಲೂಕಿನ ರ್‍ಯಾವಣಕಿ ಗ್ರಾಮದಲ್ಲಿ ಶನಿವಾರ ನಡೆದ ಸರ್ಕಾರಿ ಶಾಲೆಯ ಕಾರ್ಯಕ್ರಮದಲ್ಲಿ ಮಾತನಾಡಿ ಗ್ರಾಮಸ್ಥರನ್ನು ಉದ್ದೇಶಿಸಿ ’ನಮ್ಮ ಜನ ಅಕ್ಕಿ ಬೇಡ ಎಂದಿದ್ದಾರೆ ಎಂದು ಸಿ.ಎಂ.ಗೆ ಹೇಳಲೇ’ ಎಂದು ಪ್ರಶ್ನಿಸಿದರು. ಅದಕ್ಕೆ ಜನ ಬೇಡ ಎಂದರು.
‘ರಾಜ್ಯ ಸರ್ಕಾರದಿಂದ 1.24 ಕೋಟಿ ಮಹಿಳೆಯರಿಗೆ ತಲಾ ₹2000 ಸಾವಿರ ಕೊಡಲಾಗುತ್ತಿದೆ. ಇದಕ್ಕಾಗಿಯೇ ವಾರ್ಷಿಕ ₹30 ಸಾವಿರ ಕೋಟಿ ಖರ್ಚಾಗುತ್ತಿದೆ’ ಎಂದು ಹೇಳಿಕೆ ನೀಡಿದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬರು ‘ಮಹಿಳೆಯರಿಗೆ ಮಾಸಿಕ ₹2000 ಕೊಡುತ್ತಿದ್ದೀರಿ. ನಮಗೆ ಹೊಲಕ್ಕೆ ಹೋಗಲು ಮೊದಲು ದಾರಿ ಮಾಡಿಕೊಡಿ’ ಎಂದರು.
ತಮ್ಮ ಹೇಳಿಕೆ ಬಗ್ಗೆ ಭಾನುವಾರ ಕೊಪ್ಪಳದಲ್ಲಿ ಪ್ರತಿಕ್ರಿಯಿಸಿದ ರಾಯರಡ್ಡಿ ಅವರು ‘ನಾನು ಆ ರೀತಿಯ ಹೇಳಿಕೆ ನೀಡಿಯೇ ಇಲ್ಲ. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಒಂದಷ್ಟು ಕೆಲಸಗಳನ್ನು ಮಾಡಿಸಿಕೊಡಿ ಎಂದು ಬೇಡಿಕೆ ಇಟ್ಟಿದ್ದರು. ಅಕ್ಕಿಯನ್ನೂ ಕೊಟ್ಟಿದ್ದೇವೆ. ಅಭಿವೃದ್ಧಿ ಕೆಲಸವನ್ನೂ ಮಾಡಿ ಕೊಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದೇನೆ’ ಎಂದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ಎನ್ನುವ ಪ್ರಶ್ನೆಗೆ ‘ಇನ್ನಷ್ಟು ಗ್ಯಾರಂಟಿ ಯೋಜನೆಗಳನ್ನು ನೀಡಬೇಕು. ನನ್ನನ್ನು ಹಣಕಾಸು ಸಚಿವರನ್ನಾಗಿ ಮಾಡಿದರೆ ಗ್ಯಾರಂಟಿಗಳನ್ನು ಇನ್ನಷ್ಟು ಹೆಚ್ಚಿಸುವೆ. ಗ್ಯಾರಂಟಿ ಕೊಡುವುದರಿಂದ ಜನರಿಗೆ ಅನುಕೂಲವಾಗುತ್ತದೆ. ನಮಗೆ ಅನುದಾನದ ಕೊರತೆಯಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.