
ಅಳವಂಡಿ: ಕೊಪ್ಪಳ ಜಿಲ್ಲೆ ಸೂಫಿ ಸಂತರ ಭಾವೈಕ್ಯದ ಪ್ರದೇಶ. ಜಿಲ್ಲೆಯ ಗಡಿ ಗ್ರಾಮದ ಬೆಳಗಟ್ಟಿಯ ಹಜರತ್ ಸಯ್ಯದ್ ಷಾ ಮುಸ್ತಫಾ ಖಾದ್ರಿ ಮಹಾತ್ಮರ ದರ್ಗಾವು ಭಾವೈಕ್ಯ ಸಾರುತ್ತ ಬಂದಿದೆ.
ಅಳವಂಡಿ ಹೋಬಳಿಯ ಬೆಳಗಟ್ಟಿ ಗ್ರಾಮದಲ್ಲಿ ಹಜರತ್ ಸಯ್ಯದ್ ಷಾ ಮುಸ್ತಫಾ ಖಾದ್ರಿ ಹಾಗೂ ಹಜರತ್ ಸಯ್ಯದ್ ಷಾ ಮುರ್ತುಜಾ ಖಾದ್ರಿ ಮಹಾತ್ಮರ ಉರುಸ್ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ದೊರೆತಿದ್ದು, ಸೋಮವಾರ ಉರುಸ್, ಮಂಗಳವಾರ ಜಿಯಾರತ್ ಕಾರ್ಯಕ್ರಮ ನಡೆಯಲಿದೆ.
ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ವಂಶ ಪರಂಪರೆಯಲ್ಲಿ ಜನಿಸಿರುವ ಸಯ್ಯದ್ ಷಾ ಮುಸ್ತಫಾ ಖಾದ್ರಿ ಮಹಾತ್ಮರು. ಸುಮಾರು 200 ವರ್ಷಗಳ ಜನರ ಉದ್ಧಾರಕ್ಕಾಗಿ ಬೆಳಗಟ್ಟಿ ಗ್ರಾಮಕ್ಕೆ ಬಂದು ನೆಲೆಸಿದ್ದರು. ಈ ದರ್ಗಾ ಅಂದಿನಿಂದ ಇಂದಿನವರೆಗೂ ಹಿಂದೂ-ಮುಸ್ಲಿಂ ಧರ್ಮೀಯರ ನಂಬಿಕೆ ಮತ್ತು ಭಕ್ತಿಯ ಶ್ರದ್ಧಾ ಕೇಂದ್ರವಾಗಿದೆ.
ಪ್ರತಿವರ್ಷವೂ ಅತಿ ವಿಜೃಂಭಣೆಯಿಂದ ಉರುಸ್ ಕಾರ್ಯಕ್ರಮ ಜರುಗುತ್ತದೆ. ಹಿಂದೂ ಮುಸ್ಲಿಂ ಸಮುದಾಯದವರು ಈ ಉರುಸ್‌ನ್ನು ಆಚರಿಸುತ್ತಾರೆ. ಮಹಾತ್ಮರ ಈ ದರ್ಗಾವು ಧಾರ್ಮಿಕ, ಸಾಮಾಜಿಕ ಹಾಗೂ ಭಾವೈಕ್ಯತೆಯ ಸಂಕೇತವಾಗಿ ಗುರುತಿಸಿಕೊಂಡಿದೆ.
ಭಾನುವಾರ ಗಂಧ ಕಾರ್ಯಕ್ರಮ ನಡೆಯಿತು. ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ಹಜರತ್ ಅಬ್ದುಲ್ ಶಾವಲಿ ಮಹಾತ್ಮರ ದರ್ಗಾದಿಂದ ಗದುಗಿನ ಯುಸೂಫ್ ಬ್ಯಾಂಡ್ ಕಂಪನಿ ಹಾಗೂ ವಿವಿಧ ವಾದ್ಯ ಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗುರುವಾರ ಬೆಳಗಿನ ಜಾವ ದರ್ಗಾಕ್ಕೆ ತಲುಪಿತು. ಬಳಿಕ ದರ್ಗಾದ ಪೀಠಾಧಿಪತಿ ಸಯ್ಯದ್ ಶಾ ಮೆಹಬೂಬ್ ಖಾದ್ರಿ ಗುರುಗಳು ಇವರ ಅಮೃತ ಹಸ್ತದಿಂದ ಮಹಾತ್ಮರ ಗದ್ದುಗೆಗೆ ಗಂಧ ಧರಿಸಲಾಯಿತು.
ಮಾ.2 ಸೋಮವಾರ (ಇಂದು) ಉರುಸ್ ಕಾರ್ಯಕ್ರಮ ಜರುಗಲಿದ್ದು, ಮಹಾತ್ಮರ ಸಂಭಾಷಣೆ, ಸುಪ್ರಸಿದ್ಧ ಖವ್ವಾಲಿ ಹಾಡುಗರಿಂದ ಕಾರ್ಯಕ್ರಮ, ರಿವಾಯತ್ ಪದಗಳು, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಮಾ.3 ಮಂಗಳವಾರದಂದು ಜಿಯಾರತ್ ಕಾರ್ಯಕ್ರಮ ನಡೆಯಲಿದೆ.
ಉರುಸ್ ಎಂಬುದು ಸೂಫಿ ಸಂತರನ್ನು ಸ್ಮರಿಸುವ ಸೌಹಾರ್ದತೆ ಭಾವೈಕ್ಯ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಬಿತ್ತುವ ಹಬ್ಬವಾಗಿದೆ. ಹಿಂದೂ-ಮುಸ್ಲಿಂ ಸಮುದಾಯಗಳು ಒಟ್ಟಾಗಿ ಉರುಸ್ ಆಚರಣೆ ಮಾಡಲಾಗುತ್ತದೆ. ನಾಡಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.ಅನ್ವರ್ ಖಾದ್ರಿ ಹಜರತ್ ಸಯ್ಯದ್ ಷಾ ಮುಸ್ತಫಾ ಖಾದ್ರಿ ದರ್ಗಾದ ಗುರುಗಳು
ಮುಸ್ತಾಫ ಖಾದ್ರಿ ದರ್ಗಾವು ಹಿಂದೂ–ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದೆ. ಪ್ರತಿಯೊಬ್ಬರು ಉರುಸ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಶ್ರದ್ಧಾ ಭಕ್ತಿಯಿಂದ ಉರುಸ್ ಆಚರಿಸಲಾಗುತ್ತದೆಅನ್ವರ್ ಹುಸೇನ್ ಗಡಾದ ಅಳವಂಡಿ ಗ್ರಾಮದ ಮುಖಂಡ
ಬೆಳಗಟ್ಟಿ ಗ್ರಾಮದಲ್ಲಿ ಜಾತಿ-ಮತ ಬೇಧವಿಲ್ಲದೆ ಜನರು ಒಂದೆಡೆ ಸೇರಿ ಪ್ರತಿವರ್ಷವೂ ಕೂಡ ಉರುಸ್ ಕಾರ್ಯಕ್ರಮವನ್ನು ಆಚರಿಸುತ್ತೇವೆವಿಷ್ಣು ಹಾಳಕೇರಿ ಗ್ರಾಮದ ಮುಖಂಡ
ಸ್ವಯಂ ಪ್ರೇರಿತ ಸಹರಿ ಇಫ್ತಾರ್ ವ್ಯವಸ್ಥೆ
ದರ್ಗಾದ ಉರುಸಿನ ಕಾರ್ಯಕ್ರಮಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಈಗಾಗಲೇ ರಂಜಾನ್ ಮಾಸ ಪ್ರಾರಂಭವಾಗಿದ್ದು ಉಪವಾಸ ವ್ರತ (ರೋಜಾ) ಮಾಡುವವರಿಗೆ ಸಹರಿ ಹಾಗೂ ಇಫ್ತಾರ್ ವ್ಯವಸ್ಥೆಯನ್ನು ದರ್ಗಾದ ಸ್ವಯಂ ಪ್ರೇರಿತ ಭಕ್ತರು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.