ADVERTISEMENT

ಹನುಮಧ್ವಜ ತೆರವು ಘಟನೆ: ಬಿಜೆಪಿ, ಕೆಆರ್‌ಪಿಪಿ ಪ್ರತಿಭಟನೆ

ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ಘಟನೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 5:22 IST
Last Updated 31 ಜನವರಿ 2024, 5:22 IST
ಕೊಪ್ಪಳದಲ್ಲಿ ಬಿಜೆಪಿ ವತಿಯಿಂದ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ನವೀನ್‌ ಗುಳಗಣ್ಣವರ ಮಾತನಾಡಿದರು
ಕೊಪ್ಪಳದಲ್ಲಿ ಬಿಜೆಪಿ ವತಿಯಿಂದ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ನವೀನ್‌ ಗುಳಗಣ್ಣವರ ಮಾತನಾಡಿದರು   

ಕೊಪ್ಪಳ: ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜವನ್ನು ಜಿಲ್ಲಾಡಳಿತ ತೆರವುಗೊಳಿಸಿದ ಘಟನೆಯನ್ನು ಖಂಡಿಸಿ ಇಲ್ಲಿನ ಬಿಜೆಪಿ ಪ್ರಮುಖರು ನಗರದಲ್ಲಿ ಸೋಮವಾರ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ ‘ದೇಶದಲ್ಲಿ ಜನ ರಾಮಜಪದಲ್ಲಿ ತೊಡಗಿದ್ದಾರೆ. ರಾಮಮಂದಿರ ನಿರ್ಮಾಣವಾಗಿದ್ದನ್ನು ಸಹಿಸಿಕೊಳ್ಳಲು ಕಾಂಗ್ರೆಸ್‌ ಸಹಿಸಿಕೊಳ್ಳಲು ಆಗುತ್ತಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆಯಬೇಕು ಎನ್ನುವ ಕಾಂಗ್ರೆಸ್‌ ಕನಸು ಈಗಾಗಲೇ ನುಚ್ಚು ನೂರಾಗಿದೆ. ಐಎನ್‌ಡಿಐಎ ಒಡೆದು ಹೋಗಿದೆ. ಆ ಪಕ್ಷದವರಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನವೀನ್ ಗುಳಗಣ್ಣವರ ಮಾತನಾಡಿ ‘ರಾಜ್ಯ ಕಾಂಗ್ರೆಸ್‌ ಸರ್ಕಾರ ಹಿಂದೂ ವಿರೋಧಿ ನೀತಿ ತೋರುತ್ತಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿದೆ. ಹನುಮಾನ್‌ ಧ್ವಜವನ್ನು ಏಕಾಏಕಿ ಬಲವಂತದಿಂದ ಇಳಿಸಿದ್ದು ಮತ್ತು ಗ್ರಾಮ ಪಂಚಾಯಿತಿಯಲ್ಲಿ ಪರವಾನಗಿ ಪಡೆದಿದ್ದರೂ ಲಾಠಿಚಾರ್ಜ್ ಮಾಡಿರುವುದನ್ನು ಒಪ್ಪುವುದಿಲ್ಲ. ಸರ್ಕಾರಿ ಅಧಿಕಾರಿಗಳು ಕೂಡ ಲೋಪವೆಸಗಿದ್ದು ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.        

ADVERTISEMENT

ಜಿಲ್ಲಾ ವಕ್ತಾರ ಮಹೇಶ ಅಂಗಡಿ, ಎಸ್‌.ಸಿ. ಮೋರ್ಚಾ ಅಧ್ಯಕ್ಷ ಸಣ್ಣ ಕನಕಪ್ಪ ಚಲವಾದಿ, ಮಹಿಳಾ ಘಟಕದ ಅಧ್ಯಕ್ಷೆ ವಾಣಿಶ್ರೀ ಮಠದ, ಪ್ರಮುಖರಾದ ಮಂಜುಳಾ ಅಂಬರೀಶ್ ಕರಡಿ, ಪ್ರದೀಪ, ಸುನೀಲ ಹೆಸರೂರ, ಗಣೇಶ ಹೊರತಟ್ನಾಳ, ಮಂಜುನಾಥ, ಚಂದ್ರು ಕವಲೂರ, ಕೀರ್ತಿ ಪಾಟೀಲ, ಗೀತಾ ಮುತ್ತಾಳ, ರವಿಚಂದ್ರನ ಮಾಲಿ ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಕೆಆರ್‌ಪಿಪಿಯಿಂದಲೂ ಮನವಿ: ಇದೇ ಘಟನೆಯನ್ನು ಖಂಡಿಸಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ವತಿಯಿಂದಲೂ ನಗರದಲ್ಲಿ ಮನವಿ ಸಲ್ಲಿಸಲಾಯಿತು.

ಮಂಡ್ಯ ಜಿಲ್ಲಾಡಳಿತ ಮತ್ತು ರಾಜ್ಯ ಕಾಂಗ್ರೆಸ್‌ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಘಟನೆ ನಡೆದ ಸ್ಥಳದಲ್ಲಿಯೇ ಶಾಶ್ವತವಾದ ಹನುಮನ ಧ್ವಜ ಹಾರಿಸಬೇಕು ಎಂದು ಪಕ್ಷದ ಪ್ರಮುಖರು ಆಗ್ರಹಿಸಿದರು.

ಪಕ್ಷ ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರು, ಜಿಲ್ಲಾಧ್ಯಕ್ಷ ಸಂಗಮೇಶ ಬಾದವಾಡಗಿ, ಪಕ್ಷದ ಮುಖಂಡರಾದ ಕರಿಯಣ್ಣ ಸಂಗಟಿ, ರಾಜೇಶ್ ರೆಡ್ಡಿ, ಮಾಲಬಾಯಿ ನಾಯಕ್, ಮಂಜುನಾಥ ಗೊಂದಿ, ಪ್ರವೀಣ ಮಂಗಳಾಪುರ, ರಾಮಣ್ಣ ನಾಯ್ಕ್, ವೆಂಕಟೇಶ್ ಇಳಿಗೇರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖಂಡರು ಕೊಪ್ಪಳದಲ್ಲಿ ಸೋಮವಾರ ಮನವಿ ಸಲ್ಲಿಸಿದರು

ಸವದಿ ಬಂದರೆ ಸ್ವಾಗತ: ಸಂಗಣ್ಣ

ಕೊಪ್ಪಳ: ಲಕ್ಷ್ಮಣ ಸವದಿ ಬಿಜೆಪಿ ಸೇರಿದರೆ ಸ್ವಾಗತ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ‘ಲಕ್ಷ್ಮಣ ಸವದಿ ರಾಜ್ಯದ ಪ್ರಮುಖ ನಾಯಕ. ಅವರು ಪಕ್ಷಕ್ಕೆ ಬರುವುದಾರೆ ಸ್ವಾಗತ. ಬಿಜೆಪಿ ಜೊತೆ ಜನಾರ್ದನ ರೆಡ್ಡಿ ಒಪ್ಪಂದಕ್ಕೆ ಸಹಮತ ಸೂಚಿಸಿದ ವಿಚಾರವನ್ನು ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ. ಪಕ್ಷ ನನಗೇ ಟಿಕೆಟ್‌ ನೀಡುತ್ತದೆ ಎಂದು ಭರವಸೆಯಿದೆ. ಅಭ್ಯರ್ಥಿಯಾಗಬೇಕು ಎನ್ನವ ಬಯಕೆಯೂ ನನಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.